ಬಾಣಗೇರಿ ಕೊರೊನಾ ಸೋಂಕಿತ ಪ್ರದೇಶ ಸೀಲ್‌ಡೌನ್‌

ಹರಪನಹಳ್ಳಿ, ಜೂ.3- ಹರಪನಹಳ್ಳಿ ಪಟ್ಟಣದ ಬಾಣಗೇರಿ ಪ್ರದೇಶದಲ್ಲಿ  ಕೊರೊನಾ ಸೋಂಕಿತ ವ್ಯಕ್ತಿ ಪತ್ತೆಯಾದ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು 28 ದಿನಗಳ ಕಾಲ ಸೀಲ್‌ಡೌನ್‌ ಮಾಡಿದ್ದು, ಸರ್ಕಾರದ ನಿಯಮದಂತೆ ಕ್ರಮ ವಹಿಸಲಾಗುವುದು ಎಂದು ಬಳ್ಳಾರಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಮಂಜುನಾಥ ತಿಳಿಸಿದ್ದಾರೆ.

ಪಟ್ಟಣದ ಬಾಣಗೇರಿ ಕಂಟೈನ್ಮೆಂಟ್ ಜೋನ್ ಸ್ಥಳವನ್ನು ಪರಿಶೀಲಿಸಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸೋಂಕಿತನ ಸಂಪರ್ಕ ಹೊಂದಿದ ಒಟ್ಟು 6 ಜನರನ್ನು ತೋರಣಗಲ್ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದ್ದು, ಅವರ ಗಂಟಲ ದ್ರವವನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ವರದಿ ಬಂದ ನಂತರ ಮುಂದಿನ ಕ್ರಮ ವಹಿಸಲಾಗುವುದು ಎಂದರು.

ನಿಷೇಧಿತ ಪ್ರದೇಶದಲ್ಲಿ ಸಾರ್ವಜನಿಕರು ಕಂಟೈನ್ಮೆಂಟ್ ಜೋನ್ ಬಿಟ್ಟು ಯಾರೂ ಹೊರಗೆ ಬರಬಾರದು, 100 ಮೀಟರ್ ಒಳಗೆ ಇರುವ ಎಲ್ಲಾ ಕುಟುಂಬಗಳನ್ನು ಅಂಗನವಾಡಿ, ಆಶಾ ಕಾರ್ಯಕರ್ತರು ದಿನಂ ಪ್ರತಿ ಆರೋಗ್ಯ ತಪಾಸಣೆ ನಡೆಸಲಿದ್ದಾರೆ. ರೋಗದ ಲಕ್ಷಣ ಏನಾದರೂ ಕಂಡುಬಂದರೆ ಕೂಡಲೇ ಅವರನ್ನು ತಾಲ್ಲೂಕು ಆರೋಗ್ಯ ಕೇಂದ್ರದ ಮೂಲಕ ಚಿಕಿತ್ಸೆಗೆ ಕ್ರಮ ವಹಿಸಲಾಗುವುದು ಎಂದರು.

ಕಂಟೈನ್ಮೆಂಟ್ ಜೋನ್‍ನಿಂದ 900 ಮೀಟರ್ ಒಳಗೆ ಬಫರ್ ಜೋನ್ ಸಹ ಇದ್ದು, ಈ ಪ್ರದೇಶದ ನಾಗರಿಕರಿಗೆ ಪುರಸಭೆ ಸಿಬ್ಬಂದಿ ಹಾಗೂ ಸ್ವಯಂ ಸೇವಕರಿಂದ ಅಗತ್ಯ ವಸ್ತುಗಳನ್ನು ಪೂರೈಸುವಂತೆ ಸೂಚಿಸ ಲಾಗಿದೆ. ದ್ವಿತೀಯ ಸಂಪರ್ಕದಲ್ಲಿರುವವರ ಬಗ್ಗೆ ಅಂಗನವಾಡಿ, ಆಶಾ ಕಾರ್ಯಕರ್ತರ ಮೂಲಕ ಮೊಬೈಲ್ ಸಮೀಕ್ಷೆ ಮಾಡಲಾಗುತ್ತಿದ್ದು, ಇದನ್ನು ಬೆಂಗಳೂರಿನ ಆರೋಗ್ಯ ಕೇಂದ್ರಕ್ಕೆ ರವಾನೆಯಾಗುವಂತಹ ಮೊಬೈಲ್ ಆಪ್ ಮೂಲಕ ದತ್ತಾಂಶವನ್ನು ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದರು.

ಅರಣ್ಯ ಭೂಮಿ ಒತ್ತುವರಿ ಸ್ಥಳಕ್ಕೆ ಭೇಟಿ: ತಾಲ್ಲೂಕಿನ ನಾರಾಯಣಪುರ, ಯರಬಾಳು ಬಳಿ ಸರ್ಕಾರಿ ಅರಣ್ಯ ಭೂಮಿಯನ್ನು ಒತ್ತು ವರಿ ಮಾಡಿದ್ದಾರೆ ಎನ್ನುವ ದೂರಿನ ಹಿನ್ನೆಲೆ ಯಲ್ಲಿ ಆ ಸ್ಥಳವನ್ನು ಪರಿಶೀಲನೆ ಮಾಡಲಾ ಗುವುದು, ಹಾಗೇನಾದರೂ ಒತ್ತುವರಿ ಮಾಡಿ ದ್ದಲ್ಲಿ ಸರ್ಕಾರದ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿ ಕಾರಿ ವಿ.ಕೆ. ಪ್ರಸನ್ನ ಕುಮಾರ, ತಹಶೀಲ್ದಾರ್ ನಾಗವೇಣಿ, ಡಿವೈಎಸ್ಪಿ ಮಲ್ಲೇಶ್ ದೊಡ್ಡ ಮನಿ, ಸಿಪಿಐ ಕೆ.ಕುಮಾರ, ಪಿಎಸ್‍ಐ ಸಿ. ಪ್ರಕಾಶ್, ಮುಖ್ಯಾಧಿಕಾರಿ ನಾಗರಾಜ ನಾಯ್ಕ, ವಲಯ ಅರಣ್ಯಾಧಿಕಾರಿ ಭರತ್.ಡಿ.ತಳವಾರ್, ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ ಹಾಗೂ ಮತ್ತಿತರರಿದ್ದರು.

error: Content is protected !!