ಕೊರೊನಾ ವಾರಿಯರ್ಸ್ ಅಭಿನಂದನಾ ಸಮಾರಂಭದಲ್ಲಿ ಸರ್ಕಾರಿ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಷಡಾಕ್ಷರಿ
ದಾವಣಗೆರೆ, ಜು. 3 – ಕೇಂದ್ರ ಸರ್ಕಾರದ ಆದೇಶದಂತೆ ತಡೆ ಹಿಡಿಯಲಾಗಿರುವ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಪಡೆದೇ ಪಡೆಯುವುದಾಗಿ ಸರ್ಕಾರಿ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದ್ದಾರೆ.
ನಗರದ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಶ್ರೀ ಹರ ಮ್ಯೂಸಿಕಲ್ ವರ್ಲ್ಡ್, ರಾಜ್ಯ ಸರ್ಕಾರಿ ನೌಕರರ ಸಂಘಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದಲ್ಲಿ ಇಂದು ಆಯೋಜಿಸಲಾಗಿದ್ದ ಧ್ವನಿ ಸುರುಳಿ ಬಿಡುಗಡೆ ಮತ್ತು ಕೊರೊನಾ ವಾರಿಯರ್ಸ್ಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕೇಂದ್ರ ಸರ್ಕಾರದ ಆದೇಶದಂತೆ ಜನವರಿ ಯಿಂದ ನೌಕರರ ತುಟ್ಟಿ ಭತ್ಯೆಯನ್ನು ತಡೆ ಹಿಡಿಯಲಾಗಿದೆ. ಕೊರೊನಾ ಪರಿಸ್ಥಿತಿ ನಿವಾರಣೆಯಾದ ನಂತರ ನಾವು ತುಟ್ಟಿ ಭತ್ಯೆ ಬಿಡುಗಡೆ ಮಾಡುವಂತೆ ಒತ್ತಡ ಹೇರಲಿದ್ದೇವೆ ಎಂದು ತಿಳಿಸಿದರು.
ನೌಕರರಿಗೆ ಹಾಗೂ ಶಿಕ್ಷಕರಿಗೆ ಯಾವುದೇ ಸಮಸ್ಯೆ ಆಗಲು ಸಂಘಟನೆ ಬಿಡುವುದಿಲ್ಲ. ನೌಕರರ ಸಂಘದ ಎಲ್ಲ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದೂ ಅವರು ಹೇಳಿದರು.
ಜ್ಯೋತಿ ಸಂಜೀವಿನಿ ಯೋಜನೆಯನ್ನು ಸರ್ಕಾರ ಕಳೆದ ಬಜೆಟ್ನಲ್ಲಿ ಪ್ರಕಟಿಸಿದೆ. ಅದು ಸರ್ಕಾರಿ ಆದೇಶದ ಹಂತಕ್ಕೆ ಬಂದಿದೆ. ಅದು ಜಾರಿಯಾದರೆ ಸಂಪೂರ್ಣ ಉಚಿತ ನಗದು ರಹಿತ ಚಿಕಿತ್ಸೆ ಸರ್ಕಾರಿ ನೌಕರರಿಗೆ ಸಿಗಲಿದೆ ಎಂದವರು ಹೇಳಿದರು.
ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ನೌಕರರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತೇವೆ. ಸಂಘಟನೆ ಬಲಗೊಳಿಸುತ್ತೇವೆ ಎಂದವರು ಹೇಳಿದರು.
ಸರ್ಕಾರಿ ನೌಕರರು ತಮ್ಮ ಒಂದು ದಿನದ ವೇತನವಾದ 200 ಕೋಟಿ ರೂ.ಗಳನ್ನು ಮೊಟ್ಟ ಮೊದಲಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ. 4,800 ಕೋಟಿ ರೂ.ಗಳ ತುಟ್ಟಿ ಭತ್ಯೆ ಸೇರಿದಂತೆ, ಒಟ್ಟು 7 ಸಾವಿರ ಕೋಟಿ ರೂ.ಗಳವರೆಗೆ ವೇತನದ ಭಾಗವನ್ನು ಕೊಟ್ಟಿದ್ದೇವೆ ಎಂದವರು ತಿಳಿಸಿದರು.
ಮಾತನಾಡುವವರು ಮಾತನಾಡಲಿ, ನಾವು ಕೆಲಸದಿಂದ ಖುಷಿ ಪಡುತ್ತೇವೆ : ಜಿಲ್ಲಾಧಿಕಾರಿ
ಜನರು ಮಾತನಾಡುತ್ತಾರೆಂದು ನಾವು ಕೆಲಸ ಮಾಡುವುದು ಬಿಡುವುದಿಲ್ಲ. ಮಾತನಾಡುವವರು ಮಾತನಾಡುತ್ತಿರಲಿ, ನಾವು ಕೆಲಸ ಮಾಡಿ ಖುಷಿ ಪಡುತ್ತೇವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಮೂರಕ್ಕೇರಿ ನಂತರ ಸೊನ್ನೆಗಿಳಿದಿತ್ತು. ನಂತರ ಎರಡರಿಂದ ಆರಂಭವಾಗಿ ನೂರು ದಾಟಿದವರೆಗಿನ ಸಂದರ್ಭಗಳನ್ನು ಪ್ರಸ್ತಾಪಿಸಿದ ಜಿಲ್ಲಾಧಿಕಾರಿ, ಈ ಹಂತದಲ್ಲಿ ಜನರು ಬೇರೆ ಬೇರೆ ರೀತಿ ಮಾತನಾಡಿಕೊಂಡರು. ಆದರೆ, ನಾವು ಮಾತ್ರ ಕೆಲಸ ಮಾಡುವುದನ್ನು ಬಿಡಲಿಲ್ಲ. ನಾವು ಕೆಲಸ ಮಾಡಿ ಖುಷಿ ಪಡಬೇಕಿದೆ ಎಂದು ಹೇಳಿದರು.
ಸರ್ಕಾರಿ ನೌಕರು ಹಗಲಿರುಳೂ ಕೆಲಸ ಮಾಡಿದ ಕಾರಣದಿಂದಾಗಿ, ಕೊರೊನಾ ಈಗ ನಿಯಂತ್ರಣಕ್ಕೆ ಬಂದಿದೆ. ನಾವೆಲ್ಲರೂ ತನು, ಮನ ಹಾಗೂ ಧನಗಳಿಂದ ಕಾರ್ಯ ನಿರ್ವಹಿಸಿದಲ್ಲಿ ಕೊರೊನಾ ನಿವಾರಣೆ ಸಾಧ್ಯ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಸ್ಪಿ ಹನುಮಂತರಾಯ, ಕೊರೊನಾ ಇಡೀ ಭೂಮಂಡಲವನ್ನು ವ್ಯಾಪಿಸಿದೆ. ಇದಕ್ಕೆ ಔಷಧಿ ಇಲ್ಲವೇ ಲಸಿಕೆ ಕಂಡು ಹಿಡಿಯುವವರೆಗೂ ಸಮಸ್ಯೆ ಬಗೆಹರಿಯು ವುದಿಲ್ಲ ಎಂದರು. ಇದೇ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ. ಉಮೇಶ್ ರಚಿಸಿರುವ ‘ಕೊರೊನಾ ಇದು ಸರೀನಾ’ ಹಾಡಿನ ಧ್ವನಿ ಸುರುಳಿ ಬಿಡುಗಡೆ ಮಾಡಲಾಯಿತು.
ಕೊರೊನಾ ವಾರಿಯರ್ಸ್ಗಳಾದ ಆರೋಗ್ಯ ಕಾರ್ಯಕರ್ತರು, ಪೊಲೀಸರು, ಆಶಾ ಕಾರ್ಯ ಕರ್ತೆಯರು, ಪೌರಕಾರ್ಮಿಕರು ಹಾಗೂ ಅಧಿಕಾರಿ ಗಳಿಗೆ ಪುಷ್ಪಾರ್ಚನೆ ಮೂಲಕ ಅಭಿನಂದಿಸಲಾಯಿತು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಡಿಡಿಪಿಐ ಪರಮೇಶ್ವರಪ್ಪ, ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಮೋಹನ್ ಕುಮಾರ್, ಶಿವಣ್ಣ, ಕಲ್ಲೇಶಪ್ಪ, ಮಾರುತಿ ಮತ್ತಿತರರು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೇವತಿ ಪ್ರಾರ್ಥಿಸಿದರು. ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಾಲಾಕ್ಷ ಸ್ವಾಗತಿಸಿದರು. ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ. ಉಮೇಶ್ ನಿರೂಪಿಸಿದರು.