ನೂರಾರು ಜನರೊಂದಿಗೆ ಮೆರವಣಿಗೆ, ಕ್ರೇನ್ ಮೂಲಕ ಸೇಬಿನ ಹಾರ

ಭರ್ಜರಿಯಾಗಿ ಕೊರೊನಾ ನಿಯಮ ಗಾಳಿಗೆ ತೂರಿದ ಆರೋಗ್ಯ ಸಚಿವ

ಚಿತ್ರದುರ್ಗ, ಜೂ. 2 – ಆರೋಗ್ಯ ಸಚಿವ ಶ್ರೀರಾಮುಲು ಅವರು ಚಿತ್ರದುರ್ಗದ ಪರಶುರಾಂಪುರದಲ್ಲಿ ನೂರಾರು ಬೆಂಬಲಿಗರ ಮಧ್ಯೆ ಭರ್ಜರಿ ಮೆರವಣಿಗೆ ನಡೆಸಿದ್ದಾರಲ್ಲದೇ, ಬೃಹತ್ ಸೇಬಿನ ಹಾರವನ್ನು ಜೆ.ಸಿ.ಬಿ. ಮೂಲಕ ಹಾಕಿಸಿಕೊಂಡು ಸಂಭ್ರಮಿಸಿದ್ದಾರೆ.

ವೇದಾವತಿ ನದಿಗೆ ಬಾಗಿನ ಅರ್ಪಣೆಗೆ ಆಗಮಿಸಿದ್ದ ರಾಮುಲು, ಎತ್ತಿನಗಾಡಿ ಏರಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ. ನೂರಾರು ಜನರು ಮಾಸ್ಕ್, ಸಾಮಾಜಿಕ ಅಂತರ ಮತ್ತೇನನ್ನೂ ಕಾಯ್ದುಕೊಳ್ಳದೇ ಸಚಿವರಿಗೆ ಜೈಕಾರ ಹಾಕುತ್ತಿದ್ದರು.

ಸಚಿವರಿಗೆ ಸಂಸದ ಎ.ನಾರಾಯಣಸ್ವಾಮಿ, ಚಿತ್ರದುರ್ಗ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಸಹ ಜೊತೆಯಾಗಿದ್ದರು. 

ಬೆಳಿಗ್ಗೆ ಭರ್ಜರಿ ಮೆರವಣಿಗೆಯನ್ನು ಪೂರೈಸಿದ ಶ್ರೀರಾಮುಲು, ನಂತರ ಮಧ್ಯಾಹ್ನ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಾ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ಬೋಧನೆಯನ್ನೂ ಮಾಡಿದರು.

ತೀವ್ರ ಟೀಕೆ : ರಾಜ್ಯದಲ್ಲಿ ಕೊರೊನಾ ಸೋಂಕು ಹರಡಿರುವ ಕಾರಣಕ್ಕಾಗಿ ಹತ್ತಾರು ನಿರ್ಬಂಧಗಳನ್ನು ಹೇರಿರುವ ನಡುವೆ, ಸ್ವತಃ ಆರೋಗ್ಯ ಸಚಿವರೇ ನಿಯಮಗಳನ್ನು ಗಾಳಿಗೆ ತೂರಿರುವುದು ಕಟು ಟೀಕೆಗೆ ಕಾರಣವಾಗಿದೆ.

ಸಚಿವರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪೊಲೀಸರೂ ಸಹ ಇಡೀ ಘಟನೆಗೆ ಮೂಕ ಪ್ರೇಕ್ಷಕರಾಗಿದ್ದುದೂ ಸಹ ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ.

ಪ್ರಕರಣಕ್ಕೆ ಆಗ್ರಹ : ಸಾವಿರಾರು ಜನರನ್ನು ಗುಂಪು ಸೇರಿಸಿ ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡಿರುವ ಆರೋಗ್ಯ ಸಚಿವ ಬಿ. ಶ್ರೀರಾಮುಲು ಮೇಲೆ ಪ್ರಕರಣ ದಾಖಲಿಸಲು ಕಾಂಗ್ರೆಸ್‌ ಆಗ್ರಹಿಸಿದೆ. 

ಯಾವ ಸುರಕ್ಷತಾ ಕ್ರಮವಿಲ್ಲದೆ ಸಾವಿರಾರು ಜನರನ್ನು ಸೇರಿಸಲಾಗಿದೆ. ಮಾಸ್ಕ್‌ ಇಲ್ಲದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಸಚಿವ ಸ್ಥಾನದ ಜವಾಬ್ದಾರಿ ಮರೆತು ಶ್ರೀರಾಮುಲು ಸೇಬಿನ ಹಾರ ಹಾಕಿಸಿಕೊಂಡು ಮೆರೆದಾಡಿದ್ದು, ಕಾನೂನು ಮುರಿದಿದ್ದಾರೆ. ಈ ತಪ್ಪಿನ ನೈತಿಕ ಹೊಣೆ ಹೊತ್ತು ತಕ್ಷಣವೇ ರಾಜೀನಾಮೆ ನೀಡಬೇಕು. ಇಲ್ಲವಾದರೆ, ಮುಖ್ಯಮಂತ್ರಿ ಅವರೇ ಶ್ರೀರಾಮುಲು ಅವರಿಂದ ರಾಜೀನಾಮೆ ಪಡೆದುಕೊಳ್ಳಬೇಕು ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್ ಮುಖಂಡ ವಿ.ಎಸ್‌. ಉಗ್ರಪ್ಪ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ. 

error: Content is protected !!