ವಲಸೆ ಕಾರ್ಮಿಕರಿಗೆ ಗ್ರಾಮಗಳಲ್ಲೇ ಬದುಕು ಕೊಡಿ

ಬಾಪೂಜಿ ಎಂಬಿಎ ಕಾಲೇಜಿನ `ಸಂಕಷ್ಟದಿಂದ ಸಾಮರ್ಥ್ಯದೆಡೆಗೆ’ ಜಾಲಗೋಷ್ಠಿಯಲ್ಲಿ ಡಾ. ಮೀನಾಕ್ಷಿ ರಾಜೀವ್

ದಾವಣಗೆರೆ, ಜೂ. 2 – ಬದುಕು ಕಟ್ಟಿಕೊಳ್ಳಲು ನಗರಗಳಿಗೆ ಬಂದ ವಲಸೆ ಕಾರ್ಮಿಕರಲ್ಲಿ ಬಹುತೇಕರು ಕೈಯಲ್ಲಿ ಬಿಡಿಗಾಸೂ ಇಲ್ಲದೇ, ಹಳ್ಳಿಗಳಿಗೆ ಮರಳಿದ್ದಾರೆ. ಇವರಿಗೆ ಗ್ರಾಮೀಣ ಭಾಗದಲ್ಲೇ ಈಗ ಬದುಕಲು ಅಗತ್ಯ ಸೌಲಭ್ಯ ಕಲ್ಪಿಸಿದರೆ ಮಾತ್ರ ಜನರ ಹಾಗೂ ಆರ್ಥಿಕತೆಯ ಸಂಕಷ್ಟ ನಿವಾರಣೆಯಾಗಲು ಸಾಧ್ಯ ಎಂದು ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಅಂಡ್ ಎಕನಾಮಿಕ್ ಚೇಂಜ್‌ನ ಉಪನ್ಯಾಸಕರಾದ ಡಾ. ಮೀನಾಕ್ಷಿ ರಾಜೀವ್ ಅಭಿಪ್ರಾಯ ಪಟ್ಟಿದ್ದಾರೆ.

ನಗರದ ಬಾಪೂಜಿ ಎಂಬಿಎ ಬಿ ಸ್ಕೂಲ್ಸ್ ವತಿಯಿಂದ ರಿಸರ್ಚ್ ಡೆವಲಪ್‌ಮೆಂಟ್‌ ಕನ್ಸಲ್ಟೆನ್ಸಿ ಸೆಲ್ ಸಹಯೋಗದಲ್ಲಿ ನಿನ್ನೆ ಆಯೋಜಿಸಲಾಗಿದ್ದ ‘ಸಂಕಷ್ಟದಿಂದ ಸಾಮರ್ಥ್ಯದೆಡೆಗೆ’ ಎಂಬ ಹೆಸರಿನ ಜಾಲಗೋಷ್ಠಿಯಲ್ಲಿ (ವೆಬಿನಾರ್) ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.

ಸಮೀಕ್ಷೆಯೊಂದರ ಪ್ರಕಾರ ತವರುಗಳಿಗೆ ಮರಳಿದ ವಲಸೆ ಕಾರ್ಮಿಕರಲ್ಲಿ ಬಹುತೇಕರ ಕೈಯಲ್ಲಿ 100 ರೂ. ಸಹ ಹಣ ಇಲ್ಲ. ಇದನ್ನು ನೋಡಿದಾಗ ಕಾರ್ಮಿಕರು ನಗರಗಳಿಗೆ ಭವಿಷ್ಯ ಇದೆ ಎಂದು ಬಂದಿಲ್ಲ. ಹಳ್ಳಿಗಳಲ್ಲಿ ಏನೂ ಅವಕಾಶವಿಲ್ಲದ ಅನಿವಾರ್ಯತೆಯಿಂದ ಬಂದಿದ್ದಾರೆ ಎಂಬುದು ಸ್ಪಷ್ಟ ಎಂದು ಮೀನಾಕ್ಷಿ ಹೇಳಿದ್ದಾರೆ.

ನಗರಗಳಲ್ಲಿ ಈಗ ಅನಿಶ್ಚಿತತೆ ಇದೆ. ಕೃಷಿಯಲ್ಲಿ ಕಾರ್ಮಿಕರಿಗೆ ಪೂರ್ಣಕಾಲಿಕ ಉದ್ಯೋಗ ಸಿಗುತ್ತಿಲ್ಲ. ಹೀಗಾಗಿ ಗ್ರಾಮಗಳಿಗೆ ವಾಪಸ್ಸಾದ ಕಾರ್ಮಿಕರಿಗೆ ಅಲ್ಲೇ ಉದ್ಯೋಗ ಕಲ್ಪಿಸಲು ಕ್ರಮ ತೆಗೆದುಕೊಳ್ಳಬೇಕಿದೆ. ಈ ದಿಸೆಯಲ್ಲಿ ಕೇರಳದ ಗ್ರಾಮೀಣ ವ್ಯವಸ್ಥೆ ಮಾದರಿಯಾಗಬಹುದಾಗಿದೆ ಎಂದವರು ಅಭಿಪ್ರಾಯ ಪಟ್ಟಿದ್ದಾರೆ.

ಗ್ರಾಮ ಮಟ್ಟದಲ್ಲಿ ಸ್ಥಳೀಯ ಸಹಕಾರ ಸಂಸ್ಥೆಗಳು ಹಾಗೂ ಸ್ವಸಹಾಯ ಸಂಘಟನೆಗಳು ಆರ್ಥಿಕತೆಯನ್ನು ಬಲಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಇವುಗಳ ಮೂಲಕ ಗ್ರಾಮೀಣ ಭಾಗದಲ್ಲಿ ಹಣಕಾಸು, ಕೌಶಲ್ಯ ವಿಸ್ತರಣೆ ಹಾಗೂ ಅವಕಾಶಗಳ ತಿಳುವಳಿಕೆ ಮೂಡಿಸಬೇಕಿದೆ. ಗ್ರಾಮೀಣ ಉತ್ಪಾದನಾ ವಲಯಕ್ಕೆ ಪೂರಕವಾದ ಚಟುವಟಿಕೆಗಳನ್ನು ವಿಸ್ತರಿಸಬೇಕಿದೆ ಎಂದವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಚೆನ್ನೈನ ಪ್ರಾಜೆಕ್ಟ್ ಅಂಡ್ ಆಪರೇಷನಲ್ ಮ್ಯಾನೇಜ್‌ಮೆಂಟ್‌ನ ಎಂ. ಸುದರ್ಶನ್, ಯುವ ಪೀಳಿಗೆಗೆ ಕೊರೊನಾ ಹೊಸ ಸವಾಲುಗಳನ್ನು ತಂದಿದೆ. ಇದನ್ನು ಎದುರಿಸಲು ತರಬೇತಿ ಹಾಗೂ ಕೌಶಲ್ಯದ ಹೊಣೆಯನ್ನು ಹೊರಬೇಕಿದೆ ಎಂದು ಹೇಳಿದರು.

ಡಾಟಾ ಅನಾಲಿಸಿಸ್, ಮಷೀನ್ ಲರ್ನಿಂಗ್, ಬಿಗ್ ಡಾಟಾ ಸ್ಪೆಷಲಿಸ್ಟ್ ಸೇರಿದಂತೆ ಹಲವಾರು ವಲಯಗಳಲ್ಲಿ ಉದ್ಯೋಗಾವಕಾಶಗಳು ಗಣನೀಯವಾಗಿ ಹೆಚ್ಚಾಗಲಿವೆ. ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಬಾಪೂಜಿ ಬಿ ಸ್ಕೂಲ್ಸ್ ನಿರ್ದೇಶಕ ಡಾ. ಹೆಚ್.ವಿ. ಸ್ವಾಮಿ ತ್ರಿಭುವಾನಂದ, ಕೊರೊನಾ ವೈರಸ್‌ಗಿಂತಲೂ ಆರ್ಥಿಕ ಕಾರಣ ಗಳಿಂದಾಗಿಯೇ ದೇಶ ಹೆಚ್ಚಿನ ಸಂಕಷ್ಟ ಎದುರಿಸುತ್ತಿದೆ. ಆರ್ಥಿಕತೆಯ ಮುಂದಿನ ಹೆಜ್ಜೆ ಊಹಿಸುವುದು ಕಠಿಣವಾಗಿದೆ ಎಂದು ತಿಳಿಸಿದರು.

ಪ್ರತಿಯೊಂದು ಬದಲಾವಣೆ ಅನಿಶ್ಚಿತತೆ ಹಾಗೂ ಭೀತಿ ಹೊತ್ತು ತರುತ್ತದೆ. ಈಗ ಕೆಲ ಉದ್ಯಮಗಳು ಮುಚ್ಚುತ್ತಿದ್ದರೂ, ಹೊಸ ಉದ್ಯಮಗಳು ಹುಟ್ಟಿಕೊಳ್ಳುತ್ತಿವೆ. ಇದರೊಂದಿಗೆ ಆರ್ಥಿಕ ಚೇತರಿಕೆಯ ಮಾರ್ಗವೂ ತೆರೆಯುತ್ತಿದೆ ಎಂದವರು ವಿಶ್ಲೇಷಿಸಿದರು.

ಡಾ. ಕೆ.ಎಸ್. ಚೈತ್ರ ಕಾರ್ಯಕ್ರಮವನ್ನು ನಿರೂಪಿಸಿದರು.

error: Content is protected !!