ಕೊರೊನಾ ಸೋಂಕಿತ ಪೊಲೀಸ್ ಕಾನ್‌ಸ್ಟೇಬಲ್‌ ಭೇಟಿ ಹಿನ್ನೆಲೆ : ಆತಂಕ

ಮಲೇಬೆನ್ನೂರು, ಜೂ.2- ಕೊರೊನಾ ಸೋಂಕಿತ ಪೊಲೀಸ್‌ ಪೇದೆಯೊಬ್ಬರು ಪಟ್ಟಣಕ್ಕೆ ಬಂದು ಹೋಗಿದ್ದರು ಎಂಬ ಸುದ್ದಿ ಮಂಗಳವಾರ ಬೆಳಿಗ್ಗೆ ಕೆಲಹೊತ್ತು ಜನರು ಆತಂಕಗೊಳ್ಳುವಂತೆ ಮಾಡಿತು.

ವಿವರ : ಮೂಲತಃ ಮಲೇಬೆನ್ನೂರಿನ ನಿವಾಸಿ ಎನ್ನಲಾದ ಕೊರೊನಾ ಸೋಂಕಿತ ಪೊಲೀಸ್ ಪೇದೆ ಅವರು ದಾವಣಗೆರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅಲ್ಲಿನ ಪೊಲೀಸ್ ವಸತಿ ಗೃಹದಲ್ಲಿ ವಾಸವಾಗಿದ್ದಾರೆ ಎನ್ನಲಾಗಿದೆ. ಹೊರ ರಾಜ್ಯಗಳಿಂದ ದಾವಣಗೆರೆ ನಗರಕ್ಕೆ ಬಂದಿರುವವರನ್ನು ಕ್ವಾರಂಟೈನ್‌ ಮಾಡಿರುವ ಸ್ಥಳಕ್ಕೆ ಈ ಪೊಲೀಸ್‌ ಪೇದೆಯನ್ನು ಬಂದೋಬಸ್ತ್‌ಗಾಗಿ  ನಿಯೋಜಿಸಲಾಗಿತ್ತು. ಮೇ 30 ರ ಬೆಳಿಗ್ಗೆ ಮುಂಜಾಗ್ರತಾ ಕ್ರಮವಾಗಿ ಇವರ ಗಂಟಲು ದ್ರವವನ್ನು ಪರೀಕ್ಷೆಗೆ ತೆಗೆದುಕೊಳ್ಳಲಾಗಿತ್ತು.  ನಿನ್ನೆ ಸಂಜೆ ಪೇದೆ ಅವರು ಮಲೇಬೆನ್ನೂರಿಗೆ ಆಗಮಿಸಿ, ಅಣ್ಣನ ಮನೆಯಲ್ಲಿ ಹಮ್ಮಿಕೊಂಡಿದ್ದ ಮಗನ ಹುಟ್ಟು ಹಬ್ಬದ ಆಚರಣೆಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಆಸ್ಪತ್ರೆಯಿಂದ ಪೋನ್‌ ಕರೆ ಬಂದ ಮೇರೆಗೆ ದಾವಣಗೆರೆಗೆ ವಾಪಸ್ಸಾಗಿದ್ದಾರೆ ಎಂದು ಹೇಳಲಾಗಿದೆ. 

ಆತಂಕ ತಂದ ವರದಿ : ನಿನ್ನೆ ಸಂಜೆ ಪೊಲೀಸ್‌ ಪೇದೆಯ ಗಂಟಲು ದ್ರವ ಪರೀಕ್ಷೆಯ ವರದಿ ಪಾಸಿಟಿವ್ ಬಂದಿದ್ದರಿಂದ ಆತನ ಟ್ರಾವೆಲ್ ಹಿಸ್ಟರಿ ಜಾಡು ಹಿಡಿದ ತಹಶೀಲ್ದಾರ್‌ ರಾಮಚಂದ್ರಪ್ಪ, ಟಿಹೆಚ್‌ಓ ಡಾ ಚಂದ್ರಮೋಹನ್ ಅವರು ಸ್ಥಳೀಯ ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್‌, ಉಪತಹಶೀಲ್ದಾರ್ ರವಿ, ಕಂದಾಯ ನಿರೀಕ್ಷಕ ಸಮೀರ್, ಪಿಎಸ್‌ಐ ವೀರಬಸಪ್ಪ, ಗ್ರಾಮ ಲೆಕ್ಕಾಧಿಕಾರಿ ಕೊಟ್ರೇಶ್‌, ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ, ಪುರಸಭೆಯ ಆರೋಗ್ಯಾಧಿಕಾರಿ ಗುರುಪ್ರಸಾದ್‌, ನವೀನ್, ಉಮೇಶ್‌, ಪುರಸಭೆಯ 14ನೇ ವಾರ್ಡಿನ ಸದಸ್ಯ ಎ. ಆರೀಫ್‌ ಅಲಿ ಅವರೊಂದಿಗೆ ಮಂಗಳವಾರ ಬೆಳಿಗ್ಗೆ ಕೊರೊನಾ ಸೋಂಕಿತ ಪೊಲೀಸ್‌ ಪೇದೆ ಬಂದಿದ್ದ ಗೌಸ್‌ ನಗರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಪೇದೆ ಉಳಿದುಕೊಂಡಿದ್ದ ಮನೆಯವರನ್ನು ಈಗಾಗಲೇ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ ಮಾಡಲಾಗಿದೆ. ಇಲ್ಲಿ ಆತನ ದ್ವಿತೀಯ ಸಂಪರ್ಕ ಹೊಂದಿದ್ದರೆನ್ನಲಾದ ಹತ್ತಿರದ ಸಂಬಂಧಿಕರ 2 ಮನೆಗಳನ್ನು ಸೀಲ್‌ಡೌನ್‌ ಮಾಡಲಾಗಿದ್ದು, ಈ ಎರಡೂ ಮನೆಗಳಲ್ಲಿ 14 ಜನರನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ ಎಂದು ತಹಶೀಲ್ದಾರ್‌ ರಾಮಚಂದ್ರಪ್ಪ ತಿಳಿಸಿದರು. ಈ ಏರಿಯಾದ ಎಲ್ಲಾ ಜನರ ಆರೋಗ್ಯ ತಪಾಸಣೆಗೂ ಸೂಚಿಸಲಾಗಿದೆ ಎಂದು ಟಿಹೆಚ್‌ಓ
ಡಾ. ಚಂದ್ರಮೋಹನ್‌ ಅವರು
ಹೇಳಿದರು.

ದಂಡ : ಪಟ್ಟಣದಲ್ಲಿ ಜಾಗೃತಿ ಜಾಥಾ ನಡೆಸಿದ ತಹಶೀಲ್ದಾರ್‌ ರಾಮಚಂದ್ರಪ್ಪ, ಟಿಹೆಚ್‌ಓ ಡಾ. ಚಂದ್ರಮೋಹನ್‌, ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್, ಉಪತಹಶೀಲ್ದಾರ್‌ ರವಿ ಸೇರಿದಂತೆ ಸ್ಥಳೀಯ ಎಲ್ಲಾ ಅಧಿಕಾರಿಗಳು ಮಾಸ್ಕ್ ಧರಿಸದ 15 ಜನರಿಗೆ ತಲಾ 200 ರೂ ಗಳಂತೆ ದಂಡ ಹಾಕಿ, ಅವರಿಗೆ ಮಾಸ್ಕ್‌ ನೀಡಿದರು.

ಹೋಟೆಲ್‌ಗಳಿಗೆ ಭೇಟಿ ನೀಡಿ ಸ್ವಚ್ಛತೆ ನಿರ್ವಹಣೆ ಮಾಡದ 4 ಹೋಟೆಲ್‌ ಮಾಲೀಕರಿಗೆ ದಂಡ ಹಾಕಿ ಎಚ್ಚರಿಕೆ ನೀಡಿದರು.

ಮಳೆ : 4 ಮನೆಗಳಿಗೆ ಹಾನಿ : ಭಾನುವಾರ ಮತ್ತು ಸೋಮವಾರ ಸುರಿದ ಮಳೆಯಿಂದಾಗಿ ಹರಳಹಳ್ಳಿ 2, ವಾಸನ ಹಾಗೂ ನಂದಿಗುಡಿಯಲ್ಲಿ ತಲಾ 1 ಮನೆಗಳಿಗೆ ಹಾನಿಯಾಗಿದೆ ಎಂದು ಉಪತಹಶೀಲ್ದಾರ್‌ ರವಿ ತಿಳಿಸಿದರು. 

error: Content is protected !!