ಜಗಳೂರು ತಾ.ನಲ್ಲಿ ಬೀಜ, ರಸಗೊಬ್ಬರಕ್ಕೆ ಕೊರತೆಯಿಲ್ಲ

ಜಗಳೂರು : ಬಿತ್ತನೆ ಬೀಜ ವಿತರಣಾ ಕೇಂದ್ರದ ಉದ್ಘಾಟನೆಯಲ್ಲಿ ಶಾಸಕ ಎಸ್.ವಿ. ರಾಮಚಂದ್ರ

ಜಗಳೂರು, ಜೂ. 1- ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನ ಸಬ್ಸಿಡಿ ದರದ ಮೆಕ್ಕೆಜೋಳ, ಊಟದ ಜೋಳ, ತೊಗರಿ, ರಾಗಿ, ಸೇರಿದಂತೆ ವಿವಿಧ ಭಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರತೆಯಿಲ್ಲ, ಅಗತ್ಯವಾದ ದಾಸ್ತಾನು ಇದೆ ಎಂದು ಕ್ಷೇತ್ರದ ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.

ಇಲ್ಲಿನ ಎಪಿಎಂಸಿ ಆವರಣದಲ್ಲಿ ಕೃಷಿ ಇಲಾಖೆ ವತಿಯಿಂದ ಆರಂಭಿಸಿರುವ ರಿಯಾ ಯಿತಿ ದರದ ಬಿತ್ತನೆ ಬೀಜ ವಿತರಣಾ ಕೇಂದ್ರ ವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ತಾಲ್ಲೂಕಿನ ಮೂರು ರೈತ ಸಂಪರ್ಕ ಕೇಂದ್ರಗಳು ಮತ್ತು 11 ವ್ಯವಸಾಯ ಸೇವಾ ಸಹಕಾರ ಸಂಘಗಳ ಮೂಲಕ ಒಟ್ಟು 14 ಕೇಂದ್ರಗಳಲ್ಲಿ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಬಿತ್ತನೆ ಬೀಜಗಳ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ರೈತರು ಅನಧಿಕೃತ ಲೂಸ್ ಬೀಜಗಳನ್ನು ಖರೀದಿ ಮಾಡದೇ ಅಧಿಕೃತ ಕೃಷಿ ಕೇಂದ್ರಗಳಲ್ಲಿ ಬಿತ್ತನೆ ಬೀಜ ಖರೀದಿ ಮಾಡಬೇಕು ಎಂದು ಶಾಸಕರು ಮನವಿ ಮಾಡಿದರು. 

ಸರ್ಕಾರ ರೈತರ ಅನುಕೂಲಕ್ಕಾಗಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಮಾಡುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇ 75 ರಷ್ಟು ರಿಯಾಯಿತಿ ಇದೆ. ರೈತರು ಇದರ ಸದುಪಯೋಗ ಪಡೆದುಕೂಳ್ಳಬೇಕು. ಅಧಿಕೃತ ಬೀಜಗಳನ್ನೇ ಬಿತ್ತನೆ ಮಾಡಬೇಕು ಎಂದು ಶಾಸಕರು ಸಲಹೆ ನೀಡಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಲೋಕೇಶ್ ಮಾತನಾಡಿ, ಜಗಳೂರು ತಾಲ್ಲೂಕಿನಲ್ಲಿ 51 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭಿತ್ತನೆ  ಗುರಿ ಹೊಂದಲಾಗಿದೆ. ಮೆಕ್ಕೆಜೋಳ 32 ಸಾವಿರ ಹೆಕ್ಟೇರ್, 10 ಸಾವಿರ ಹೆಕ್ಟೇರ್ ಶೇಂಗಾ, 9 ಸಾವಿರ ಹೆಕ್ಟೇರ್ ರಾಗಿ, ಹತ್ತಿ, ತೊಗರಿ, ಸಿರಿಧಾನ್ಯ ಬೆಳೆಗಳ ಬೆಳೆಯುವ ಗುರಿ ಹೊಂದಲಾಗಿದೆ. ರೈತರು ಸ್ವಾವಲಂಭಿಗಳಾಗಿ ಮಿಶ್ರ ಬೆಳೆಯನ್ನು ಬೆಳೆಯಬೇಕು. ಮೆಕ್ಕೆಜೋಳದಲ್ಲಿ ಕಡ್ಡಾಯವಾಗಿ ಅಕ್ಕಡಿಯಾಗಿ ತೊಗರಿ ಹಾಕಬೇಕು. ಬೀಜ ಮತ್ತು ರಸಗೊಬ್ಬರಗಳನ್ನು ತಾಲ್ಲೂಕಿಗೆ ಬೇಕಾಗುವ 14 ಕೇಂದ್ರಗಳಲ್ಲಿ ಹಾಗೂ ವಿವಿಧ ಕೃಷಿ ಪರಿಕರಗಳ ಪರವಾನಿಗೆ ಹೊಂದಿದ ಮಾರಾಟಗಾರರ ಹತ್ತಿರ ಸಂಗ್ರಹವಿದೆ. ವಾಡಿಕೆಯಂತೆ ಇಲ್ಲಿಯವರೆಗೆ 84 ಮಿ.ಮೀ. ಮಳೆ ಬರಬೇಕಾಗಿದ್ದು, 114 ಮಿ.ಮೀ. ಮಳೆಯಾಗಿದೆ. ರೈತರ ಮೊಗದಲ್ಲಿ ಸಂತಸ ತಂದಿದೆ ಎಂದರು.

ಈ ಸಂದರ್ಭದಲ್ಲಿ ಎಪಿಎಂಸಿ ಸದಸ್ಯ ಸೂರಡ್ಡಿಹಳ್ಳಿ ಶರಣಪ್ಪ, ಕ್ಷೇತ್ರದ ಬಿಜೆಪಿ ಮಂಡಲ ಅಧ್ಯಕ್ಷ ಹೆಚ್.ಸಿ. ಮಹೇಶ್, ತಾಲ್ಲೂಕು ಕಾರ್ಯನಿರ್ವಾಹಣಾಧಿಕಾರಿ ಮಲ್ಲಾನಾಯ್ಕ್, ಬಿಜೆಪಿ ಮುಖಂಡ ಬಿದರಕೆರೆ ರವಿಕುಮಾರ್, ವಕೀಲರಾದ ತಿಪ್ಪೇಸ್ವಾಮಿ, ಬಿಸ್ತುವಳ್ಳಿ ಬಾಬು, ಗೌರಿಪುರ ಶಿವಣ್ಣ, ಪ.ಪಂ. ಸದಸ್ಯರಾದ ನವೀನ್ ಕುಮಾರ್, ಪಾಪಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!