ಟ್ರಂಪ್ ಜಾಲಾಡಿದ ಸಾಮಾಜಿಕ ಜಾಲತಾಣ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಿನ್ನೆಸೋಟಾದಲ್ಲಿ ನಡೆದ ಹಿಂಸಾಚಾರದ ಕುರಿತು ಟ್ವೀಟ್ ಮಾಡಿರುವುದು §ಹಿಂಸೆ ವೈಭವೀಕರಿಸುವಂತಿದೆ’ ಎಂದು ಟ್ವಿಟ್ಟರ್ ಕ್ರಮ ತೆಗೆದುಕೊಂಡಿದೆ. ಟ್ರಂಪ್ ಟಿಪ್ಪಣಿಗೆ ಎಚ್ಚರಿಕೆಯ ಸೂಚನೆ ನೀಡಿ ಮರೆ ಮಾಚಲಾಗಿದೆ.

ಇಲ್ಲಿಯವರೆಗೂ ಸರ್ಕಾರದಿಂದ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತಿದೆ ಎಂಬ ಸುದ್ದಿಗಳು ಬರುತ್ತಿದ್ದವು. ಈಗ ಟ್ರಂಪ್ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವಾಗಿದೆ ಎಂಬ ಸುದ್ದಿ ಬರುವಲ್ಲಿಗೆ, ಕಾಲ ಚಕ್ರ ಒಂದು ಭರ್ಜರಿ ಸುತ್ತು ಹಾಕಿದೆ.

ಟ್ವಿಟ್ಟರ್‌ನ ಈ ಕ್ರಮದ ನಂತರ ಟ್ರಂಪ್ ಸಹಜವಾಗಿಯೇ ಅಸಮಾಧಾನಗೊಂಡಿದ್ದಾರೆ. ಸಾಮಾಜಿಕ ಜಾಲ ತಾಣಗಳ ಬಳಕೆದಾರರು ಪ್ರಕಟಿಸುವ ಅಭಿಪ್ರಾಯಗಳ ಬಗ್ಗೆ, ಜಾಲ ತಾಣಗಳ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸದಂತೆ ಇದುವರೆಗೂ ಅಮೆರಿಕದಲ್ಲಿ ವಿನಾಯಿತಿ ಇತ್ತು. ಅದನ್ನು ಟ್ರಂಪ್ ಕಿತ್ತು ಹಾಕುವ ಮೂಲಕ ಹೋರಾಟಕ್ಕೆ ಮುಂದಾಗಿದ್ದಾರೆ.

ಟ್ವಿಟ್ಟರ್ ಈ ರೀತಿ ಟ್ವೀಟ್‌ಗಳನ್ನು ಕಿತ್ತು ಹಾಕುವುದು, ಮರೆಮಾಚುವುದು ಇಲ್ಲವೇ ಟ್ವಿಟ್ಟರ್ ಖಾತೆಗಳನ್ನು ತಡೆಹಿಡಿಯುವುದು ಅಪರೂಪವೇನೂ ಇಲ್ಲ. ಆದರೆ, ಅಮೆರಿಕದ ಅಧ್ಯಕ್ಷರ ಟ್ವೀಟ್ ಕ್ರಮಕ್ಕೆ ಗುರಿಯಾಗಿರುವುದು ಹೊಸ ಬೆಳವಣಿಗೆಯಾಗಿದೆ.

ಟ್ರಂಪ್ ಅಷ್ಟೇ ಅಲ್ಲ ಸಾಕಷ್ಟು ಜನರು ಪ್ರಚೋದನಕಾರಿಯಾಗಿ ಟ್ವೀಟ್ ಮಾಡುತ್ತಿದ್ದಾರೆ. ತಪ್ಪು ದಾರಿಗೆಳೆಯುವ, ಚಾರಿತ್ರ್ಯ ಹರಣದ ಟ್ವೀಟ್‌ಗಳಿಗೆ ಕೊರತೆಯೇನೂ ಇಲ್ಲ. ಎಲ್ಲವನ್ನೂ ಬಿಟ್ಟು ಟ್ರಂಪ್ ವಿರುದ್ಧ, ಈಗಷ್ಟೇ ಕ್ರಮ ಏಕೆ ಎಂಬ ಪ್ರಶ್ನೆಗಳೂ ಹುಟ್ಟಿವೆ.

ಎಲ್ಲಕ್ಕಿಂತ ಮುಖ್ಯವಾಗಿ ಅಮೆರಿಕದ ಅಧ್ಯಕ್ಷರ ಮೆಸೇಜ್‌ ಒರೆಗೆ ಹಚ್ಚಲು ಸಾಮಾಜಿಕ ಮಾಧ್ಯಮಗಳಿಗೆ ಸಾಮರ್ಥ್ಯ ಇದೆ ಎನ್ನುವುದಾದರೆ, ಉಳಿದ ಎಲ್ಲ ಮೆಸೇಜ್‌ಗಳ ಬಗ್ಗೆಯೂ ಅವು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದು ನಿರೀಕ್ಷಿತವೇ ಆಗಿದೆ.

ಸಾಮಾಜಿಕ ಜಾಲತಾಣಗಳು ಈಗ ದೈತ್ಯ ಗಾತ್ರಕ್ಕೆ ಬೆಳೆದಿವೆ. ಅವುಗಳ ಆದಾಯ ಹಾಗೂ ಪ್ರಭಾವ ಅಭೂತಪೂರ್ವವಾಗಿದೆ. ಇವುಗಳನ್ನು ಸರ್ಕಾರ ಹೇಗೆ ನಿಯಂತ್ರಣಕ್ಕೆ ಒಳಪಡಿಸುತ್ತದೆ ಎಂಬ ಪ್ರಶ್ನೆ ಹಿಂದಿನಿಂದಲೂ ಇದೆ. 

ಫೇಸ್‌ಬುಕ್‌ನ ಗ್ರಾಹಕರ ಮಾಹಿತಿಯನ್ನು ಕೇಂಬ್ರಿಡ್ಜ್ ಅನಲಿಟಿಕಾ ಮಾರಿಕೊಂಡಿದ್ದು 2018ರ ಆರಂಭದಲ್ಲಿ ದೊಡ್ಡ ಸುದ್ದಿಯಾಗಿತ್ತು. ನಂತರದಲ್ಲಿ ಆ ಪ್ರಕರಣ ಸುದ್ದಿಯ ಹಂತವನ್ನು ದಾಟಿ ಮುಂದುವರೆಯಲೇ ಇಲ್ಲ. 

2017ರಲ್ಲಿ ದೇಶದ ಹಲವೆಡೆ ಮಕ್ಕಳ ಅಪಹರಣದ ಗಾಳಿ ಸುದ್ದಿ ವಾಟ್ಸಾಪ್‌ ಮೂಲಕ ಹರಡಿ ಗುಂಪು ಹತ್ಯೆಗಳೇ ನಡೆದಿದ್ದವು. ಗಾಳಿ ಸುದ್ದಿ ಹರಡಿದವರಾಗಲೀ, ಗಾಳಿ ಸುದ್ದಿಗೆ ವೇದಿಕೆಯಾಗಿದ್ದ ವಾಟ್ಸಾಪ್‌ ಆಗಲೀ ಹೆಚ್ಚೇನೂ ಬದಲಾಗಿಲ್ಲ. ಕೊರೊನಾ ವೈರಸ್ ಸಮಯದಲ್ಲಿ ವಾಟ್ಸಾಪ್‌ ಇತ್ಯಾದಿ ಸಾಮಾಜಿಕ ಮಾಧ್ಯಮಗಳ ಮೂಲಕ ಸೋಂಕಿನ ಕುರಿತು ನಿಖರ ಮಾಹಿತಿಗಿಂತ ತಪ್ಪು ಮಾಹಿತಿಯ ಭಂಡಾರವೇ ಹರಡಿದ್ದು ಕಂಡು ಬಂತು.

ಕೊರೊನಾ ಸೋಂಕಿತರ ಮಾಹಿತಿಯನ್ನು ಗೌಪ್ಯವಾಗಿಡಬೇಕೆಂಬುದು ಸರ್ಕಾರದ ನಿಯಮವಾಗಿತ್ತು. ಆದರೆ, ವೈಯಕ್ತಿಕ ವಿವರಗಳು ಜಾಲತಾಣಗಳಲ್ಲಿ ಬಟಾ ಬಯಲಾಗಿದ್ದವು. ಈ ಬಗ್ಗೆ ಮಾಹಿತಿ ಹರಡಿದವರ, ಇಲ್ಲವೇ ಮಾಹಿತಿ ಹರಡಲು ಕಾರಣವಾದ ಸಾಮಾಜಿಕ ಜಾಲತಾಣಗಳ ವಿರುದ್ಧ ಇದುವರೆಗೂ ಗಂಭೀರ ಕ್ರಮದ ವರದಿಗಳು ಬಂದಿಲ್ಲ.

ಕೆಲ ದಿನಗಳ ಹಿಂದೆ ಖಾಸಗಿ ಸುದ್ದಿ ವಾಹಿನಿಯ ಸಂಪಾದಕರೊಬ್ಬರು ಆಡಿದ ಮಾತು ತಪ್ಪು ಎಂದು ದೂರುಗಳು ದಾಖಲಾಗಿ ಸುಪ್ರೀಂ ಕೋರ್ಟ್‌ವರೆಗೆ ಪ್ರಕರಣ ಹೋಗಿತ್ತು. ಪೊಲೀಸರು ಸಂಪಾದಕನ ಸು ದೀರ್ಘ ವಿಚಾರಣೆ ನಡೆಸಿದ್ದರು. ಆದರೆ, ಇದೇ ರೀತಿಯ ಕ್ರಮಗಳನ್ನು ಸಾಮಾಜಿಕ ಜಾಲತಾಣಗಳ ಮಾಲೀಕರ ವಿರುದ್ಧ ತೆಗೆದುಕೊಳ್ಳುವುದು ದೂರದ ಮಾತು. 

ವರ್ಷದ ಹಿಂದೆ ಟ್ವಿಟ್ಟರ್‌ಗೆ ಸಂಸತ್ತಿನ ಸಮಿತಿಯೊಂದು ನೆಟ್ಟಿಗರ ಹಕ್ಕುಗಳ ವಿಷಯಕ್ಕೆ ಸಂಬಂಧಿಸಿದಂತೆ ನೋಟಿಸ್ ಕಳಿಸಿತ್ತು. ನೋಟಿಸ್‌ಗೆ ಉನ್ನತ ಅಧಿಕಾರಿ ಸ್ಪಂದಿಸುವಂತೆ ಮಾಡಲೂ ಸಹ ಸಮಿತಿ ಕಷ್ಟಪಡಬೇಕಾಯಿತು. ನಂತರ ಇಡೀ ಪ್ರಕರಣ ಜನರ ಮನಸ್ಸಿನಿಂದ ಮರೆಯಾಯಿತು.

ಪತ್ರಿಕೆ, ಇಲ್ಲವೇ ದೃಶ್ಯ ಮಾಧ್ಯಮಗಳ ಮೂಲಕ ವ್ಯಕ್ತಿಗಳ ತೇಜೋವಧೆಯಾದರೆ ಕ್ರಮ ತೆಗೆದುಕೊಳ್ಳಲು ಅವಕಾಶವಿದೆ. ಪತ್ರಿಕೆ ಇಲ್ಲವೇ ದೃಶ್ಯ ಮಾಧ್ಯಮ ಕೇವಲ ‍§ಅಭಿಪ್ರಾಯದ ವೇದಿಕೆ’ ಎಂದು ಜವಾಬ್ದಾರಿಯಿಂದ ನುಣುಚಿಕೊಳ್ಳು ವಂತಿಲ್ಲ. 

ಹಾಗಾದರೆ ಸಾಮಾಜಿಕ ಜಾಲತಾಣಗಳಿಗೆ ತಮ್ಮಲ್ಲಿ ಪ್ರಕಟವಾಗುವ ಮಾಹಿತಿಯ ಬಗ್ಗೆ ಜವಾಬ್ದಾರಿ ಇಲ್ಲವೇ? ಇದ್ದರೆ ಎಷ್ಟರ ಮಟ್ಟಿಗೆ ಇದೆ? ಜವಾಬ್ದಾರಿಯಲ್ಲಿ ಲೋಪವಾದರೆ ಸ್ಥಳೀಯ ನ್ಯಾಯಾಲಯಗಳನ್ನು ಅವು ಎದುರಿಸಬೇಕಲ್ಲವೇ? ಒಂದು ವೇಳೆ ಜವಾಬ್ದಾರಿ ಇಲ್ಲ ಎನ್ನುವುದಾದರೆ ಟ್ರಂಪ್ ಟ್ವೀಟ್ ವಿರುದ್ಧ ಕ್ರಮ ತೆಗೆದುಕೊಂಡಿದ್ದು ತಪ್ಪಲ್ಲವೇ? ಇಂತಹ ಪ್ರಶ್ನೆಗಳು ಮತ್ತೆ ಈಗ ಚಾಲ್ತಿಗೆ ಬರುತ್ತಿವೆ.


ಎಸ್.ಎ. ಶ್ರೀನಿವಾಸ್‌
[email protected]

error: Content is protected !!