ಆರೋಗ್ಯಯುಕ್ತ, ಆನಂದದ ಸಮಾಜ ನಮ್ಮದಾಗಲಿ

ಮಾನ್ಯರೇ,

ಆರೋಗ್ಯ ಸಚಿವ ಶ್ರೀ ರಾಮಲು ಅವರು ಮೇ 31 ವಿಶ್ವ ತಂಬಾಕು ದಿನದಲ್ಲಿ ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ತಿಂದು ಉಗುಳುವುದು, ಸಿಗರೇಟ್, ಬೀಡಿ ಸೇದುವುದು  ಶಿಕ್ಷಾರ್ಹ ಅಪರಾಧ ಎಂದು ಮಹತ್ವದ ನಿರ್ಣಯ ತೆಗೆದುಕೊಂಡಿರುವುದು  ಶ್ಲಾಘನೀಯ. ಇಂದಿನ ದಿನಮಾನಗಳಲ್ಲಿ ಯುವಕರು ಡ್ರಿಂಕ್ಸ್, ಡ್ರಗ್ಸ್, ಟೊಬ್ಯಾಕೊ (ಡಿ.ಡಿ.ಟಿ) ಹಾವಳಿಗೆ ತುತ್ತಾಗಿ ದುರ್ಮರಣಕ್ಕೊಳಗಾಗುತ್ತಿದ್ದಾರೆ.  ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ  ವರ್ಷಕ್ಕೆ ಸರಾಸರಿ 80 ಲಕ್ಷ ಕ್ಕೂ ಹೆಚ್ಚು ಜನ ತಂಬಾಕು ಸೇವನೆಯಿಂದ, 10 ಲಕ್ಷಕ್ಕೂ ಹೆಚ್ಚು ಜನ ಪರಾವಲಂಬಿ ತಂಬಾಕು ಸೇವನೆಯಿಂದ ಸಾಯುತ್ತಿದ್ದಾರೆ. ಮುಂದಿನ ಪ್ರಜೆಗಳಾಗಬೇಕಾದ ಯುವಕರು ನಾಶವಾಗುತ್ತಿದ್ದರೆ ವಿಶ್ವದ ಗತಿಯೇನು? 

`ಒಂದು ದೇಶವನ್ನು ನಾಶ ಮಾಡಲು ಯಾವುದೇ ನ್ಯೂಕ್ಲಿಯರ್ ಬಾಂಬ್‌ಗಳನ್ನು ಹಾಕಬೇಕಾಗಿಲ್ಲ. ಆ ದೇಶದ ಯುವಕರನ್ನು ದುಶ್ಚಟಗಳ ದಾಸರನ್ನಾಗಿ ಮಾಡಿದರೆ ಸಾಕು. ಆ ದೇಶ ಮುದುಕರ, ಮಕ್ಕಳ, ಬಡವರ  ಹಾಳು ಕೊಂಪೆಯಾಗುತ್ತದೆ’. ಯುವಕರು ಇದನ್ನು ಅರಿತು, ತಾವು ದುಶ್ಚಟಗಳಿಂದ ಹೊರಬರಲು ವಿನಂತಿ. ಅಲ್ಲದೇ ಡ್ರಿಂಕ್ಸ್, ಡ್ರಗ್ಸ್, ಟೊಬ್ಯಾಕೊಗಳು ತುಂಬಾ ದುಬಾರಿಯಾಗಿದ್ದು, ಈಗಾಗಲೇ ಕೊರೊನಾ ದಿಂದ ತತ್ತರಿಸಿರುವುದಲ್ಲದೆ ಆರ್ಥಿಕವಾಗಿ ಹೊಡೆತ ಕೊಡುತ್ತದೆ. ನಮ್ಮ ಅಮೂಲ್ಯವಾದ ಆರೋಗ್ಯವನ್ನು ಸಹ ಹಾಳು ಮಾಡುತ್ತದೆ. ಇಂತಹ ವಿಷವನ್ನು ಹಣಕ್ಕೆ ಖರೀದಿ ಮಾಡಿ, ಭವ್ಯ ಜೀವನ ಹಾಳು ಮಾಡಿಕೊಳ್ಳು ವುದು ಸರಿಯೇ? ದಯವಿಟ್ಟು ಇದರಿಂದ ಮುಕ್ತರಾಗಿ ಮಾದರಿ ಪ್ರಜೆಗಳಾಗಬೇಕೆಂದು ದುಶ್ಚಟಗಳ ವಿರೋಧಕ್ಕಾಗಿ ದಶಕಗಳಿಂದ ಕಾರ್ಯವೆಸಗುತ್ತಿರುವ ಕರುಣಾ ಜೀವ ಕಲ್ಯಾಣ ಟ್ರಸ್ಟ್ ವಿನಂತಿಸುತ್ತದೆ.

– ಶಿವನಕೆರೆ ಬಸವಲಿಂಗಪ್ಪ

error: Content is protected !!