ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅಭಿಮತ
ದಾವಣಗೆರೆ, ಮೇ 30- ಜ್ಞಾನ, ವಿಜ್ಞಾನದ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ದಾವಣಗೆರೆ ವಿಶ್ವವಿದ್ಯಾನಿಲಯ ಆದ್ಯತೆ ನೀಡಿರುವುದು ಶ್ಲಾಘನೀಯ. ಈ ಯಶಸ್ಸಿಗೆ ಎಲ್ಲರ ಸಂಘಟಿತ, ಸಾಮುದಾಯಿಕ ಕಾರ್ಯ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ದಾವಣಗೆರೆ ವಿಶ್ವವಿದ್ಯಾನಿಲಯಕ್ಕೆ ಬುಧವಾರ ಅನಿರೀಕ್ಷಿತ ಭೇಟಿ ನೀಡಿದ್ದ ಸ್ವಾಮೀಜಿ, ವಿಶ್ವವಿದ್ಯಾನಿಲಯದ ಆವರಣ ಶಿಕ್ಷಣಕ್ಕೆ ಪೂರಕವಾಗಿದೆ. ಇಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಓದುತ್ತಿದ್ದಾರೆ. ಅವರೆಲ್ಲರಿಗೂ ಆತ್ಮವಿಶ್ವಾಸ ಮೂಡಿಸುವ ವೃತ್ತಿ ಕೌಶಲ್ಯ, ಸಂವಹನ ಕೌಶಲ್ಯ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ವಿಶ್ವವಿದ್ಯಾನಿಲಯವು ಕಡಿಮೆ ಅವಧಿಯಲ್ಲಿ ಉತ್ತಮ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ. ಇಲ್ಲಿಯ ಕುಲಪತಿಗಳು, ಕುಲಸಚಿವರು, ಬೋಧಕರ ಪರಿಶ್ರಮದಿಂದ ಸಾಧನೆ ಸಾಧ್ಯವಾಗಿದೆ. ವಿದ್ಯಾರ್ಥಿಗಳು ಇಲ್ಲಿರುವ ಗ್ರಂಥಾಲಯ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕಾಗಿ ಪ್ರಾಧ್ಯಾಪಕರು ಕೈಗೊಂಡಿರುವ ವಿನೂತನ ಪ್ರಯೋಗಗಳು, ಪ್ರಾಮಾಣಿಕ ಪ್ರಯತ್ನಗಳು ಉತ್ತಮವಾಗಿವೆ. ಇದು ಇತರೆ ವಿಶ್ವವಿದ್ಯಾನಿಲಯಗಳಿಗೂ ಮಾದರಿಯಾಗಿ ದೆ. ಪ್ರಾಮಾಣಿಕ ಸೇವೆ ಅಥವಾ ಕಾರ್ಯಕ್ಕೆ ಮನ್ನಣೆ ಸಿಕ್ಕೇ ಸಿಗುತ್ತದೆ. ಆದರೆ ಪ್ರತಿಫಲಕ್ಕಾಗಿ ಕೆಲಸ ಮಾಡದೇ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆಯನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಮಾತನಾಡಿ, ಕೊರೊನಾ ವೈರಾಣು ರೋಗದ ಕಾರಣ ಎಲ್ಲೆಡೆ ಲಾಕ್ಡೌನ್ ಜಾರಿ ಗೊಳಿಸಿದ್ದರೂ ವಿಶ್ವವಿದ್ಯಾ ನಿಲಯದ ಪ್ರಾಧ್ಯಾಪಕರು ನಿರಂತರವಾಗಿ ಕಾರ್ಯ ನಿರ್ವಹಿಸಿ, ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗೆ ಶ್ರಮಿಸಿ ದ್ದಾರೆ. ವಿದ್ಯಾರ್ಥಿಗಳಲ್ಲಿ ಆತ್ಮ ವಿಶ್ವಾಸ ಮೂಡಿಸುವ ಕೆಲಸವು ಸಾಕಷ್ಟು ಪ್ರಮಾಣದಲ್ಲಿ ನಡೆ ದಿದೆ. ವಿಶ್ವವಿದ್ಯಾನಿಲಯವೂ ಸಹ ವಿವಿಧ ವೇದಿಕೆಗಳ ಮೂಲಕ ವಿದ್ಯಾರ್ಥಿಗಳನ್ನು ಕಾರ್ಯಶೀಲವಾಗಿರಲು ವಿಭಿನ್ನ ಕಾರ್ಯ ಕ್ರಮ ರೂಪಿಸಿದೆ ಎಂದು ತಿಳಿಸಿದರು.
ಕುಲಸಚಿವ ಪ್ರೊ. ಬಸವರಾಜ ಬಣಕಾರ ಅವರು, ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ನಿರ್ಮಿಸುವ ಜೊತೆಗೆ ಸಮುದಾಯ ಆರೋಗ್ಯ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿದೆ. ಕೋವಿಡ್ನಿಂದಾದ ಸಮಸ್ಯೆಯ ಸಂದರ್ಭದಲ್ಲಿ ಬಡವರಿಗೆ ಆಹಾರದ ಕಿಟ್, ಮಾಸ್ಕ್ ವಿತರಿಸಲಾಗಿದೆ. ಸಿಬ್ಬಂದಿ ಆರೋಗ್ಯ ತಪಾಸಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಸ್ವಾಮೀಜಿ ಅವರನ್ನು ಕುಲಪತಿ ಪ್ರೊ. ಶರಣಪ್ಪ ವಿ.ಹಲಸೆ ಮತ್ತು ಕುಲಸಚಿವ ಪ್ರೊ. ಬಸವರಾಜ ಬಣಕಾರ ಸನ್ಮಾನಿಸಿದರು. ಇದಕ್ಕೂ ಮುನ್ನ ಸ್ವಾಮೀಜಿ ಅವರು ವಿಶ್ವವಿದ್ಯಾನಿಲಯದ ಅತಿಥಿ ಗೃಹ, ಗ್ರಂಥಾಲಯ, ಕಂಪ್ಯೂಟರ್ ಮತ್ತು ಭಾಷಾ ಸಂವಹನ ಕೌಶಲ್ಯ, ಪರೀಕ್ಷಾ ಮೌಲ್ಯಮಾಪನ ವಿಭಾಗಗಳಿಗೆ ಭೇಟಿ ನೀಡಿದರು. ಪ್ರಾಧ್ಯಾಪಕರಾದ ಡಾ. ಎಂ. ಬಸವಣ್ಣ, ಡಾ. ಎಚ್. ವಿಶ್ವನಾಥ, ಡಾ. ನಂದೀಶ್ವರಪ್ಪ, ಎಸ್. ರಾಜೇಂದ್ರಪ್ರಸಾದ್, ಡಾ. ನಾಗರಾಜ, ಡಾ. ನೀಲಮ್ಮ ಜಿ. ಅನೂಪ್ ರಿತ್ತಿ ಉಪಸ್ಥಿತರಿದ್ದರು.