ರಾಣೇಬೆನ್ನೂರು, ಮೇ 30- ಇಲ್ಲಿನ ಈಶ್ವರ ನಗರದ ಬಿಸಿಎಂ ಹಾಸ್ಟೆಲ್ನಲ್ಲಿ ಕ್ವಾರಂಟೈನ್ ಆಗಿದ್ದ ತಾಲ್ಲೂಕಿನ ತುಮ್ಮಿನಕಟ್ಟಿ ಗ್ರಾಮದ ವಲಸೆ ಕಾರ್ಮಿಕರ ಪೈಕಿ ಶನಿವಾರ ನಾಲ್ಕು ಜನರ ವೈದ್ಯಕೀಯ ವರದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇದರ ಸುತ್ತಮುತ್ತಲಿನ ನೂರು ಮೀಟರ್ ಪ್ರದೇಶವನ್ನು ಕಂಟೈನ್ಮೆಂಟ್ ಆಗಿ ಪರಿವರ್ತಿಸಲಾಗಿದೆ.
ಹೀಗಾಗಿ ಕ್ವಾರಂಟೈನ್ ಕಟ್ಟಡದ ಬಳಿ ಯಾರೂ ಸುಳಿಯದಂತೆ ಬ್ಯಾರಿಕೇಡ್ ಅಳವಡಿಸ ಲಾಗಿದ್ದು, ಕಾಂಪೌಂಡ್ಗೆ ಹೊಂದಿಕೊಂಡಿರುವ ಜಾಗೆಯಲ್ಲಿ ಮುಳ್ಳಿನ ಬೇಲಿ ಹಾಕಲಾಗಿದೆ. ಇದಲ್ಲದೆ ಇದರ ಬಳಿ ಕೈಗೊಳ್ಳಲಾಗುತ್ತಿರುವ ಖಾಸಗಿ ವ್ಯಕ್ತಿಗಳಿಗೆ ಸೇರಿದ ಕಟ್ಟಡ ಕಾಮಗಾರಿ ಯನ್ನು ಮುಂದಿನ 14 ದಿನಗಳ ಕಾಲ ನಿಲ್ಲಿಸುವಂತೆ ಸೂಚಿಸಲಾಗಿದೆ. ಹಾಸ್ಟೆಲ್ನಲ್ಲಿ ಒಟ್ಟು 41 ಜನರಿದ್ದು ಆ ಪೈಕಿ ನಾಲ್ಕು ಜನರ ವರದಿ ಪಾಸಿಟಿವ್ ಬಂದಿದ್ದು ಇನ್ನು 37 ಜನರ ವರದಿ ಬರಬೇಕಾಗಿದೆ ಎಂದು ತಾಲ್ಲೂಕು ಆರೋಗ್ಯಾ ಧಿಕಾರಿ ಡಾ.ಸಂತೋಷ್ ಪತ್ರಿಕೆಗೆ ತಿಳಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಂತೋಷ್, ಬಿಸಿಎಂ ಇಲಾಖೆ ಅಧಿಕಾರಿ ವಿ.ಎಸ್. ಹಿರೇಮಠ, ಶಹರ ಸಿಪಿಐ ಲಿಂಗನಗೌಡ ನೆಗಳೂರ, ಹಾಸ್ಟೆಲ್ ವಾರ್ಡನ್ ಎಸ್.ಕೆ.ಹಾವನೂರ, ಆರೋಗ್ಯ ಇಲಾಖೆಯ ಎಸ್.ಸಿ.ಕೋರಿ ಸ್ಥಳಕ್ಕೆ ತೆರಳಿ ಕಂಟೈನ್ಮೆಂಟ್ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.