ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ಆವರಣದಲ್ಲಿ ಭಾನುವಾರ ಔಷಧಿ ಸಿಂಪರಣೆ ಮಾಡಲಾಯಿತು.
ದಾವಣಗೆರೆ, ಮೇ 31- ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾದ ಒಳ ಹಾಗೂ ಹೊರ ಭಾಗದಲ್ಲಿ ಭಾನುವಾರ ಔಷಧಿ ಸಿಂಪರಣೆ ಮಾಡಲಾಯಿತು.
ನಾಳೆ ಮಂಗಳವಾರ ಭಕ್ತರಿಗೆ ದೇವಸ್ಥಾನ ಪ್ರವೇಶಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತಾದರೂ, ಕೇಂದ್ರ ಸರ್ಕಾರವು ಜೂನ್ 8 ರಿಂದ ಧಾರ್ಮಿಕ ಸ್ಥಳಗಳಲ್ಲಿ ಜನರ ಪ್ರವೇಶಕ್ಕೆ ಅನುವು ಮಾಡಿ ಕೊಟ್ಟಿರುವ ಹಿನ್ನೆಲೆಯಲ್ಲಿ ಸದ್ಯ ದೇವಸ್ಥಾನದ ಶುದ್ಧೀಕರಣ ಕಾರ್ಯ ನಡೆಯುತ್ತಿದೆ.
ಮುಂದಿನ ದಿನಗಳಲ್ಲಿ ಮತ್ತೊಮ್ಮೆ ದೇವಸ್ಥಾನ ಶುದ್ಧೀಕರಿಸಿ, ಔಷಧಿ ಸಿಂಪರಣೆ ಮಾಡಿ ಭಕ್ತರ ಪ್ರವೇಶಕ್ಕೆ ಅನುಕೂಲ ಮಾಡಿಕೊಡಲಾಗುವುದು. ಅದಕ್ಕೂ ಮುನ್ನ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಡಾ.ಶಾಮನೂರು ಶಿವಶಂಕರಪ್ಪ, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮುಖದಲ್ಲಿ ದೇವಸ್ಥಾನದ ಉದ್ಘಾಟನೆ ಕಾರ್ಯಕ್ರಮ ನಡೆಸಲಾಗುವುದು ಎಂದು ದೇವಸ್ಥಾನದ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ `ಜನತಾವಾಣಿ’ಗೆ ತಿಳಿಸಿದರು.
ಈಗಾಗಲೇ ಬರುವ ಭಕ್ತರು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ವ್ಯವಸ್ಥೆ ಮಾಡ ಲಾಗಿದೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ದೇವಸ್ಥಾನ ಪ್ರವೇಶಿಸಬೇಕು. ಬರುವಾಗ ಹಣ್ಣು, ಕಾಯಿ, ಪ್ರಸಾದ ಏನನ್ನೂ ತರುವಂತಿಲ್ಲ. ಕೇವಲ ದರ್ಶನಕ್ಕೆ ಮಾತ್ರ ಅವಕಾಶವಿದೆ ಎಂದು ಹೇಳಿದರು.
ದೇವಸ್ಥಾನದಲ್ಲೂ ಸಹ ತೀರ್ಥ, ಪ್ರಸಾದ ಕೊಡುವುದಿಲ್ಲ. ಮಂಗಳಾರತಿ ಮಾತ್ರ ಮಾಡಲಾಗುವುದು. ಭಕ್ತರು ದರ್ಶನ ಪಡೆದು, ನಮಸ್ಕರಿಸಿ ತೆರಳುವ ಮೂಲಕ ಸಹಕರಿಸುವಂತೆ ಅವರು ಕೋರಿದರು. ಕೊರೊನಾ ಸೋಂಕು ದೇವಸ್ಥಾನ ಹಾಗೂ ಭಕ್ತರ ನಡುವಿನ ಬೆಸು ಗೆಯನ್ನೂ ತುಂಡರಿಸಿತ್ತು.
- ದರ್ಶನಕ್ಕೆ ಮಾತ್ರ ಅವಕಾಶ
- ಮಾಸ್ಕ್ ಕಡ್ಡಾಯ, ಸಾಮಾಜಿಕ ಅಂತರ ಪಾಲಿಸಬೇಕು.
- ತೀರ್ಥ-ಪ್ರಸಾದ ಇಲ್ಲ.
- ಹಣ್ಣು, ಕಾಯಿ, ಪ್ರಸಾದ ತರುವಂತಿಲ್ಲ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ದೇವಸ್ಥಾನ ಗಳಿಗೆ ಭಕ್ತರ ಪ್ರವೇಶ ನಿಷೇಧಿಸಲಾಗಿತ್ತು. ಆದರೆ ಇದೀಗ ಕೇಂದ್ರ ಸರ್ಕಾರ ಧಾರ್ಮಿಕ ಕೇಂದ್ರಗಳ ಆರಂಭಕ್ಕೆ ಜೂನ್ 8 ರಿಂದ ಅನುಮತಿ ನೀಡಿರುವುದಾಗಿ ಹೇಳಿದ ಹಿನ್ನೆಲೆಯಲ್ಲಿ ದೇವಸ್ಥಾನಗಳ ಸ್ವಚ್ಛತಾ ಕಾರ್ಯಗಳು ನಡೆಯತ್ತಿವೆ.
ಧಾರ್ಮಿಕ ದತ್ತಿ ಇಲಾಖೆ ಸೂಚನೆ : ಏತನ್ಮಧ್ಯೆ ಧಾರ್ಮಿಕ ದತ್ತಿ ಇಲಾಖೆಯು ತನ್ನ ವ್ಯಾಪ್ತಿಗೆ ಒಳಪಡುವ ದೇವಸ್ಥಾನಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ.
ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಭಕ್ತರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲಾ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ನೀಡಲಿರುವ ಹಿನ್ನೆಲೆಯಲ್ಲಿ ಕೆಲ ಪೂರ್ವ ತಯಾರಿ ಮಾಡಿಕೊಳ್ಳಲು ತಿಳಿಸಿದೆ.
ದೇವಾಲಯಗಳನ್ನು ಸ್ವಚ್ಛತೆ ಕಾಪಾಡಿಕೊಳ್ಳಲು ಪ್ರತಿ ದಿನ ಒಳ ಮತ್ತು ಹೊರ ಆವರಣಗಳನ್ನು ಕೋವಿಡ್ ವೈರಾಣು ತಡೆಯಲು ಡಿಸ್‌ಇನ್ಫೆಕ್ಷನ್ ಮಾಡಬೇಕು. ಹೆಚ್ಚುವರಿ ಸಿಬ್ಬಂದಿ ನೇಮಿಸಿ ವೆಚ್ಚವನ್ನು ಆಯಾ ದೇವಾಲಯದ ನಿಧಿಯಿಂದ ಭರಿಸಬೇಕು. ದೇವಾಲಯದ ಅಧಿಕಾರಿ, ನೌಕರರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅರ್ಚಕರು, ಆಗಮಿಕರು, ಪರಿಚಾರಕರು ಮುಂತಾದ ಒಳಾಂಗಣ ಸಿಬ್ಬಂದಿಗಳು ಒಳಾಂಗಣ ಹೊರತುಪಡಿಸಿ ಉಳಿದ ಕಡೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪ್ರವೇಶ ದ್ವಾರದಲ್ಲಿ ದೇಹದ ಉಷ್ಣತೆ ತಪಾಸಣೆ, ಕೈಗಳಿಗೆ ಸ್ಯಾನಿಟೈಸರ್ ನೀಡಬೇಕು. ಮಾಸ್ಕ್ ಧರಿಸಿದವರಿಗೆ ಮಾತ್ರ ಪ್ರವೇಶ ಕಲ್ಪಿಸುವ ಬಗ್ಗೆ ಸೂಚನಾ ಫಲಕಗಳ ಮೂಲಕ ತಿಳಿಸುವುದು. ಭಕ್ತರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಮಾರ್ಕ್ ಮಾಡುವುದು. ದೇವಾಲಯದ ಶೌಚಾಲಯಗಳನ್ನು ಆಗಾಗ್ಗೆ ಶುಚಿಗೊಳಿಸಬೇಕು ಎಂದು ಇಲಾಖೆ ಸೂಚಿಸಿದೆ.