ಟಿಟಿಡಿ ಆಸ್ತಿ ಮಾರಾಟ ವಿರೋಧಿಸಿ ಶ್ರೀರಾಮ ಸೇನೆ ಪ್ರತಿಭಟನೆ

ದಾವಣಗೆರೆ, ಮೇ 27- ತಿರುಪತಿ ದೇವ ಸ್ಥಾನದ ಆಸ್ತಿ ಮಾರಾಟ ಮಾಡುವ ನಿರ್ಧಾರಕ್ಕೆ ತಡೆಯಾಜ್ಞೆ ನೀಡಿ ಭಕ್ತರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿರುವ ಆಂಧ್ರ ಪ್ರದೇಶ ಸರ್ಕಾರಕ್ಕೆ ರಾಜ್ಯಪಾಲರು ತಮ್ಮ ನೇತೃತ್ವದಲ್ಲಿ ಸಾಧು ಸಂತರ, ವಿದ್ವಾಂಸರ ಸರ್ಕಾರೇತರ ಸಮಿತಿ ರಚಿಸಲು ಮುಂದಾಗಬೇಕೆಂದು ಒತ್ತಾ ಯಿಸಿ ಶ್ರೀರಾಮ ಸೇನೆ ಜಿಲ್ಲಾ ಸಮಿತಿ ಕಾರ್ಯ ಕರ್ತರು ನಗರದ ತಹಶೀಲ್ದಾರ್ ಕಚೇರಿ ಮುಂ ಭಾಗದಲ್ಲಿ ಇಂದು ಪ್ರತಿಭಟನೆ ನಡೆಸಿದರು. ನಂತರ ತಹಶೀಲ್ದಾರ್ ಮೂಲಕ ಆಂಧ್ರ ಪ್ರದೇಶ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. 

ಆಂಧ್ರ ಪ್ರದೇಶ ಸರ್ಕಾರದ ಅಧೀನದಲ್ಲಿ ರುವ ಟಿಟಿಡಿ ಮಂಡಳಿಯ ಶ್ರೀ ತಿರುಪತಿ ದೇವಸ್ಥಾನಕ್ಕೆ ಭಕ್ತರು ದಾನ ನೀಡಿರುವ 50 ಕ್ಕೂ ಹೆಚ್ಚು ಆಸ್ತಿಗಳನ್ನು ಮಾರಾಟ ಮಾಡುವ ಪ್ರಕ್ರಿಯೆಗೆ ಮುಂದಾಗಿರುವ ಘಟನೆ ಬೆಳಕಿಗೆ ಬಂದಿದೆ ಇದು ಖಂಡನೀಯ. ಭಕ್ತ ಸಮೂಹಕ್ಕೆ, ಹಿಂದೂ ಧರ್ಮಕ್ಕೆ ಮಾಡುವ ದ್ರೋಹವಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. 

ಅಲ್ಲಿನ ಸರ್ಕಾರ ಇದೀಗ ಭಕ್ತರ ಸಾಧು ಸಂತರ ಒತ್ತಡಕ್ಕೆ ಮಣಿದು ಭಕ್ತರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ. ಆದ್ದರಿಂದ ರಾಜ್ಯಪಾಲರು ಮಧ್ಯೆ ಪ್ರವೇಶಿಸಿ ಸರ್ಕಾರೇತರ ಸಮಿತಿ ರಚನೆಗೆ ಮುಂದಾಗಬೇಕು. ದೇವಸ್ಥಾನದ ಯಾವುದೇ ಆಸ್ತಿ, ಸಂಪತ್ತನ್ನು ಮಾರುವ ಅಥವಾ ಒತ್ತೆ ಇಡುವುದನ್ನು ತಕ್ಷಣವೇ ರದ್ದುಗೊಳಿಸಬೇಕು. ಈಗಾಗಲೇ ಭಕ್ತರು ದೇವರಿಗೆ ಅರ್ಪಿಸಿರುವ ಹುಂಡಿ, ಸೇವೆಯ ಹಣವನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ ಇದನ್ನು ತಡೆಯಬೇಕು. ಕೇವಲ ಹಿಂದೂ ಧರ್ಮದ ಆಸ್ತಿ ತೆಗೆದುಕೊಳ್ಳುತ್ತಿರುವುದು ಸಂವಿಧಾನ ವಿರೋಧಿ ನಡೆಯಾಗಿದ್ದು, ಈ ಕೂಡಲೇ ಇದನ್ನು ನಿಲ್ಲಿಸಬೇಕು. ಮಸೀದಿ, ಮದರಸಾ, ದರ್ಗಾ, ಚರ್ಚ್ ಮುಂತಾದ ಧಾರ್ಮಿಕ ಸಂಸ್ಥೆಗಳು ಸಾಕಷ್ಟು ಪ್ರಮಾಣದಲ್ಲಿ ಆಸ್ತಿ ಸಂಪತ್ತು ಹೊಂದಿದ್ದು, ಅವುಗಳನ್ನು ಬಿಟ್ಟು ಕೇವಲ ಹಿಂದೂ ಧರ್ಮದ ಆಸ್ತಿ,ಸಂಪತ್ತನ್ನು ಮಾರಾಟ ಮಾಡುವುದು ಸರಿಯಲ್ಲ. ಆದ್ದರಿಂದ ರಾಜ್ಯಪಾಲರು ತಮ್ಮ ನೇತೃತ್ವದಲ್ಲಿ ಸಾಧು-ಸಂತರ, ಭಕ್ತರ, ದಾನಿಗಳ, ಹಿಂದೂ ವಿದ್ವಾಂಸರನ್ನು ಒಳಗೊಂಡ ಸರ್ಕಾರೇತರ ಕಾಯಂ ಸಮಿತಿ ರಚಿಸಿ ಭಕ್ತರ ಅಭಿಪ್ರಾಯ ಸಂಗ್ರಹಿಸಿ ಸರ್ಕಾರ ಅವುಗಳನ್ನು ಪಾಲಿಸುವಂತೆ ಆದೇಶಿಸಬೇಕೆಂದು ಒತ್ತಾಯಿಸಿದರು.

ಈ ವೇಳೆ ಮಣಿ ಸರ್ಕಾರ್, ವಿನೋದ್ ರಾಜ್, ಪರಶುರಾಮ್ ನಡುಮನಿ, ಕುಮಾರ್ ನಾಯ್ಕ್ ಇದ್ದರು.

error: Content is protected !!