ಮನೆ ಬಾಗಿಲಿಗೆ ವೃದ್ಧಾಪ್ಯ ವೇತನ: ಅಶೋಕ್

ದಾವಣಗೆರೆ ಮೇ.27 – ವೃದ್ಧಾಪ್ಯ ವೇತನ ಪಡೆಯಲು ಇನ್ಮುಂದೆ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ತಹಶೀಲ್ದಾರರ ಕಚೇರಿಗಳಿಗೆ ಫಲಾನುಭವಿ ಗಳು ಮತ್ತು ವಯೋವೃದ್ಧರು ಅಲೆದಾಡಬೇಕಿಲ್ಲ. ಬದಲಾಗಿ 60 ವರ್ಷ ಪೂರೈಸಿದ ಬಡವರಿಗೆ ಮನೆ ಬಾಗಿಲಿಗೇ ಸೌಲಭ್ಯ ತಲುಪಲಿದೆ ಎಂದು  ಕಂದಾಯ ಸಚಿವ ಆರ್.ಅಶೋಕ ಹೇಳಿದರು.

ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,  ಯೋಜನೆಯ ಲಾಭ ಪಡೆಯಲು ವಯೋವೃದ್ಧರು ಅಲೆದಾಡಿಸುವುದನ್ನು ತಪ್ಪಿಸುವ ದೃಷ್ಟಿಯಿಂದ ಅವರ ಮನೆ ಬಾಗಿಲಿಗೇ ಈ ಯೋಜನೆ ತಲುಪಲಿದೆ ಎಂದರು.

ಜಿಲ್ಲಾ ಮತ್ತು ತಾಲ್ಲೂಕು ಕಚೇರಿಯಲ್ಲಿ ಆಧಾರ್ ಕಾರ್ಡ್‍ಗಳ ಪಟ್ಟಿಯಿದ್ದು, ಯಾರಿಗೆ 60 ವರ್ಷ ತುಂಬಿರುತ್ತದೆಯೋ ಅವರಿಗೆ ಅಂಚೆ ಮೂಲಕ, ಇಲ್ಲವೇ ಗ್ರಾಮ ಲೆಕ್ಕಿಗರೇ ಹೋಗಿ ವೃದ್ಧಾಪ್ಯ ವೇತನ ಯೋಜನೆಯ ಸೇರ್ಪಡೆ ಪತ್ರ ನೀಡಬೇಕು ಎಂದು ಸೂಚಿಸಿದರು.

ಪ್ರತಿ ತಿಂಗಳಿಗೆ ಒಂದು ಬಾರಿ ಜಿಲ್ಲಾಧಿಕಾರಿಗಳು ಒಂದು ಗ್ರಾಮಕ್ಕೆ ಭೇಟಿ ನೀಡಬೇಕು. ಬೆಳಗ್ಗೆ 10 ರಿಂದ ಸಂಜೆಯವರೆಗೆ ಗ್ರಾಮದಲ್ಲಿಯೇ ಇದ್ದು ಅಲ್ಲಿನ ಸಮಸ್ಯೆ ಗಳನ್ನು ಅರಿಯಬೇಕು. ಸ್ಥಳದಲ್ಲಿಯೇ ಸಮಸ್ಯೆಗೆ ಪರಿಹಾರ ಒದಗಿಸಬೇಕು. ಅಲ್ಲಿನ ರೈತರ ಮನೆಯಲ್ಲಿ ಊಟ ಮಾಡ ಬೇಕು. ಜಿಲ್ಲಾಧಿಕಾರಿಗಳ ಭೇಟಿ ಸಂದರ್ಭದಲ್ಲಿ ಎಸಿ, ತಹಶೀಲ್ದಾರ್, ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರು ಹಾಜರಿರಬೇಕು. ಈ ವೇಳೆ ಅಂಗನವಾಡಿಗಳು ಸೇರಿದಂತೆ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಬೇಕು. ಈ ಸಮಯದಲ್ಲಿ ಪಿಂಚಣಿ ಸಮಸ್ಯೆ, ರೈತರ ಸಮಸ್ಯೆ, ಖಾತೆ ಸಮಸ್ಯೆ, ನರೇಗಾ ಯೋಜನೆ ಕುರಿತಾಗಿ ಪರಿಶೀಲಿಸಬೇಕು. ಸರ್ಕಾರ ಹಾಗೂ ಕಂದಾಯ ಇಲಾಖೆಗಳು ಜನರ ಮನೆ ಬಾಗಿಲಿಗೆ ಬಂದಿದೆ ಎಂದು ಜನ ಹೇಳಬೇಕು. ಆ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಸ್ಮಶಾನ ಇಲ್ಲದಿರುವ ಹಳ್ಳಿಗಳನ್ನು ಪಟ್ಟಿ ಮಾಡಬೇಕು. ಪ್ರತಿ ಹಳ್ಳಿಗಳಲ್ಲಿ ಜಾಗ ಗೊತ್ತು ಮಾಡಿಸಬೇಕು. ಒಂದು ವೇಳೆ ಸ್ಮಶಾನಕ್ಕಾಗಿ ಜಾಗವಿಲ್ಲದಿದ್ದರೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಬೇಕು ಎಂದು ಸೂಚಿಸಿದರು.

ಕೊರೊನಾ ವೈರಸ್‍ಗೆ ಸಂಬಂಧಪಟ್ಟಂತಹ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಕಂದಾಯ ಇಲಾಖೆ ಯಿಂದ ಆರೋಗ್ಯ ಇಲಾಖೆಗೆ ರೂ.70 ಕೋಟಿ ಹಣ ನೀಡಲಾಗಿದೆ. ದಾವಣಗೆರೆಗೆ ರೂ. 3.24 ಕೋಟಿ ರೂ. ಹಣ ಬಿಡುಗಡೆ ಮಾಡಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ, ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ, ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕರಾದ ಎಸ್.ಎ. ರವೀಂದ್ರನಾಥ್, ಎಸ್.ವಿ.ರಾಮಚಂದ್ರ, ರಾಮಪ್ಪ, ಪ್ರೊ.ಲಿಂಗಣ್ಣ, ಜಿ.ಪಂ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಡಿಸಿ ಪೂಜಾರ ವೀರಮಲ್ಲಪ್ಪ, ಮೇಯರ್ ಅಜಯ್ ಕುಮಾರ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ, ಎಸ್ಪಿ ಹನುಮಂತರಾಯ, ಡಿಎಚ್‍ಓ ಡಾ.ರಾಘವೇಂದ್ರ ಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಉಪಸ್ಥಿತರಿದ್ದರು.

error: Content is protected !!