ಕೊರೊನಾದಿಂದ ತತ್ತರಿಸಿದ ಭಾರತ

ಮಾನ್ಯರೇ,

ಈ ಹಿಂದೆ ಕಂಡು ಕೇಳರಿಯದಂತಹ ಮಹಾಮಾರಿ ಇಡೀ ವಿಶ್ವವನ್ನೇ ಆವರಿಸಿಕೊಂಡು ಸಾವು – ನೋವುಗಳನ್ನು ಸಂಭವಿಸುವಂತೆ ಮಾಡುತ್ತಿದೆ. ಯಾರ ಹಿಡಿತಕ್ಕೂ, ಕಡಿವಾಣಕ್ಕೂ ಬಗ್ಗದೆ ಎಲ್ಲೆಡೆ ಹಬ್ಬುತ್ತಾ ಕ್ಷಣ ಕ್ಷಣಕ್ಕೂ ತನ್ನ ಕ್ರೂರತೆಯನ್ನು ಮೆರೆಯುತ್ತಿದೆ. ವಿಶ್ವದ ದೊಡ್ಡ ರಾಷ್ಟ್ರಗಳು ತಲೆಬಿಸಿ ಮಾಡಿಕೊಂಡು ಕಡಿವಾಣ ಹಾಕಲು ಯತ್ನಿಸುತ್ತಿದ್ದಾರೆ. ವಿಜ್ಞಾನಿಗಳು ಹಗಲು – ರಾತ್ರಿ ಔಷಧ ಕಂಡು ಹಿಡಿಯುವ ಪ್ರಯತ್ನದಲ್ಲಿದ್ದಾರೆ. 

ದೇಶದಲ್ಲಿ ಕೊರೊನಾ ಸೋಂಕನ್ನು ನಿಯಂತ್ರಿಸುವ ಸಲುವಾಗಿ ಭಾರತ ಸರ್ಕಾರ 21 ದಿನಗಳ ಕಾಲ ಇಡೀ ದೇಶವ್ಯಾಪಿ ಲಾಕ್‌ಡೌನ್ ಮಾಡಿದೆ. ಶೇ.80ರಷ್ಟು ಜನರು  ಲಾಕ್‌ಡೌನ್‌ ಅನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಕೆಲವರು ನಮಗೂ ಇದಕ್ಕೂ ಏನೂ ಸಂಬಂಧವಿಲ್ಲವೇನೋ ಅನ್ನುವ ರೀತಿ ಬದುಕು ನಡೆಸುತ್ತಿದ್ದಾರೆ.

ಗಂಡಸರು ಬೀದಿ ತುದಿಯಲ್ಲಿ ಗುಂಪು ಕಟ್ಟಿಕೊಂಡು  ಮಾತನಾ ಡುವುದು, ಮಕ್ಕಳು ಬೀದಿಯಲ್ಲಿ ಆಟವಾಡುವುದು, ಅಕ್ಕಪಕ್ಕದ ಹೆಂಗಸರು ಒಂದೆಡೆ ಸೇರಿ `ಏನ್ ಕಾಲ ಬಂತಪ್ಪಾ’ ಅಂದು ಮಾತನಾ ಡುವುದನ್ನು ಕಾಣುತ್ತಿದ್ದೇವೆ. ಕೆಲ ಯುವಕರು ಅನಾವಶ್ಯಕವಾಗಿ ಬೈಕ್‌ ಹತ್ತಿ ರೌಂಡ್ಸ್ ಹೊಡೆಯುತ್ತಿದ್ದಾರೆ. ಒಟ್ಟಾರೆ ಇವರುಗಳು ಸಾಮಾಜಿಕ ಅಂತರ ಕಾಪಾಡುವುದನ್ನು ಮರೆತಂತಿದೆ.

ದೇಶದ ಸ್ಥಿತಿ ದಿನೇ ದಿನೇ ಗಂಭೀರಕ್ಕೆ ತಿರುಗುತ್ತಿದ್ದು, ರೇಡಿಯೋ, ಟಿವಿ ವಾಹಿನಿಗಳಲ್ಲಿ ನೋಡುತ್ತಿದ್ದರೂ ಕೂಡ ಇಂತಹವರ ವರ್ತನೆ ಎಷ್ಟು ಸರಿ. ಈಗಾಗಲೇ ಕೊರೊನಾ ಮೂರನೇ ಹಂತವನ್ನು ತಲುಪುವತ್ತ ದಾಪುಗಾಲು ಹಾಕುತ್ತಿದೆ. ಇನ್ನಾದರೂ ಈ ಅಸಡ್ಡೆತನವನ್ನು ಬಿಟ್ಟು, ತಮ್ಮ ತಮ್ಮ ಮನೆಯಲ್ಲಿ ಇರುವಂತಾಗಬೇಕು. ಲಾಕ್‌ಡೌನ್ ಉಲ್ಲಂಘನೆಗೆ ಕಠಿಣ ಕ್ರಮ ಜರುಗಿಸಬೇಕಾಗಿದೆ. ಮೇ ತಿಂಗಳ ಅಂತ್ಯದೊಳಗೆ ಈ ಮಹಾಮಾರಿಗೆ ಔಷಧ ಹಾಗೂ ಲಸಿಕೆ ಸಿಗುವ ಸಾಧ್ಯತೆಗಳು ಇವೆ.

– ಹೆಲ್ಪ್‌ಲೈನ್ ಸುಭಾನ್, ದಾವಣಗೆರೆ.

error: Content is protected !!