ಮಾನ್ಯರೇ,
ಅಮೆರಿಕ ಮುಂತಾದ ವಿದೇಶಗಳಲ್ಲಿ ಕೊರೊನಾ ಕೋವಿಡ್-19 ಪೇಷೆಂಟ್ಗಳನ್ನು ಆರೈಕೆ ಮಾಡುತ್ತಿರುವ ಭಾರತೀಯ ಮೂಲಗಳ ಡಾಕ್ಟರ್ಗಳ ಬಗ್ಗೆ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ಪ್ರಶಂಸಾತ್ಮಕ ವರದಿಗಳು ಬಂದಿರುವುದನ್ನು, ಬರುತ್ತಿರುವುದನ್ನು ಗಮನಿಸಿರುವೆ. ಇವರುಗಳ ಸೇವೆ ನಿಜಕ್ಕೂ ಪ್ರಶಂಸನೀಯ.
ಸಂಬಂಧದಲ್ಲಿ ನನಗೆ ಅಣ್ಣನ ಮಗ ಹಾಗೂ ತಮ್ಮನ ಮಗಳಾಗಬೇಕು. ಅಂದರೆ ನನ್ನ ತಂಗಿಯ ಅಳಿಯ ಮತ್ತು ಸೊಸೆ. ಇವರೀರ್ವರೂ ಅಮೆರಿಕಾದಲ್ಲಿ ವೈದ್ಯರುಗಳಾಗಿದ್ದು, ಒಬ್ಬರು ನ್ಯೂಯಾರ್ಕ್ನಲ್ಲೂ ಮತ್ತೊಬ್ಬರು ಹೋಸ್ಟನ್ನಲ್ಲೂ ವಿಶೇಷವಾಗಿ ನೂರಾರು ಸಂಖ್ಯೆಯ ಕೊರೊನಾ ಕೋವಿಡ್ ಪೀಡಿತರಿಗೆ ನಿರಂತರ ಚಿಕಿತ್ಸೆ ನೀಡುತ್ತಾ ಅನೇಕರ ಜೀವ ರಕ್ಷಣೆ ಮಾಡುತ್ತಿದ್ದಾರೆ. ಅದರಲ್ಲೂ ನನ್ನ ತಂಗಿಯ ಸೊಸೆಯಂತೂ ಕೊರೊನಾ ಸೋಂಕಿತರ ಆರೈಕೆ ಡ್ಯೂಟಿಯನ್ನು ತಾನೇ ಕೇಳಿ ಹಾಕಿಸಿಕೊಂಡು ಸೇವೆ ಮಾಡುತ್ತಿದ್ದಾಳೆ. ಆದರೂ ಇವರೀರ್ವರೂ ಇದನ್ನು ಪ್ರಚಾರವಾಗಿಸಿಕೊಳ್ಳಲು ಇಷ್ಟಪಡುತ್ತಿಲ್ಲ. ವೈದ್ಯರಾಗಿ ಇದು ನಮ್ಮ ಕರ್ತವ್ಯವೆನ್ನುತ್ತಾರೆ.
ಇವರೀರ್ವರು ಡಾಕ್ಟರುಗಳು ನನ್ನ ಸಂಬಂಧಿಗಳೇ ಆದರೂ ನಾನೂ ಸಹಾ ಇವರ ಹೆಸರು, ಇವರು ಆರೈಕೆ ನೀಡಿರುವ ಸಂಖ್ಯೆ, ಜೀವ ಉಳಿಸಿರುವ ದಾಖಲೆ ಸಂಖ್ಯೆ ಯಾವುದನ್ನೂ ಪ್ರಚುರಪಡಿಸಲು ಇಷ್ಟಪಡುವುದಿಲ್ಲ. ಏಕೆಂದರೆ ಹೊರ ದೇಶಗಳಿಗೆ ಹೋಗಿ, ಅಲ್ಲಿನ ನೂರಾರು ಸೋಂಕಿತರ ಆರೈಕೆ ಮಾಡಿ ಜೀವ ಉಳಿಸುತ್ತಿರುವ ನಮ್ಮ ದೇಶ, ನಮ್ಮ ರಾಜ್ಯದ ಮೂಲದ ಡಾಕ್ಟರ್ಗಳ ಸೇವೆ ಎಷ್ಟು ಪ್ರಶಂಸನೀಯವೋ ಅದಕ್ಕಿಂತಾ ನಮ್ಮ ದೇಶ, ರಾಜ್ಯದಲ್ಲೇ ಇದ್ದು, ಇಲ್ಲಿನ ಸೋಂಕಿತರ ಆರೈಕೆ, ಜೀವ ರಕ್ಷಣೆ ಮಾಡುತ್ತಿರುವ ಡಾಕ್ಟರುಗಳ, ನರ್ಸ್ಗಳ ಸೇವೆ ಒಂದು ಗುಂಜಿ ಹೆಚ್ಚು ಪ್ರಶಂಸನೀಯ.
-ಹೆಚ್.ಬಿ. ಮಂಜುನಾಥ, ಹಿರಿಯ ಪತ್ರಕರ್ತ.