ಸ್ವ ಸಾಮರ್ಥ್ಯದಿಂದ ಸಾಧನೆಯ ಶಿಖರವೇರಿದ ವೇಣು

`ಓಹ್ ! ಇದೇನಪ್ಪಾ ಆಶ್ಚರ್ಯ. ಅವಾಗ ಹೇಗಿದ್ರೋ ಹಾಗೇ ಹುಡುಗರಾಗೇ ಇದ್ದೀರಲ್ಲಪ್ಪಾ. ನಾನಾಗ್ಲೆ ಎಪ್ಪತ್ತೈದಕ್ಕೆ ಕಾಲಿಡ್ತಿದ್ದೀನಿ’
`ಇರ್ಲಿಬಿಡಿ , ಇನ್ನೂ ಇಪ್ಪತ್ತೈದು ಬಾಕಿ ಇದೆಯಲ್ಲಾ’
`ಅಯ್ಯಯ್ಯೊ ! ಬೇಡಪ್ಪಾ. ಆದ್ರೆ ನನ್ನ ಬಗ್ಗೆ ನಿಮಗೆ ವಿಪರೀತ ದುರಾಸೆ’
`ದುರಾಸೆ ಅಂತಲ್ಲ. ನಿಮ್ಮಿಂದ ಇನ್ನೂ ಕೆಲಸಗಳಾಗಬೇಕಲ್ಲ , ಅದಕ್ಕೇ’.

ಈ ಮೇಲಿನ ಸಂಭಾಷಣೆ ನಡೆದದ್ದು, ಬಿ.ಎಲ್.ವೇಣು ಮತ್ತು ನನ್ನ ನಡುವೆ. ಮೂರು ತಿಂಗಳ ಹಿಂದೆ ಸಿದ್ದಗಂಗಾ ಶಾಲೆಯಲ್ಲಿ ನಡೆದ ಸಮಾರಂಭಕ್ಕೆ ಮುಂಚಿತವಾಗಿ ಸಿಕ್ಕಾಗ.

ನಗರದ ಸಿದ್ದಗಂಗಾ ಶಾಲೆಯಲ್ಲಿ `ಜಿಲ್ಲಾ ಸಮಾಚಾರ’ ಪತ್ರಿಕೆ ಏರ್ಪಡಿಸಿದ್ದ `ವಾರ್ಷಿಕ ವ್ಯಕ್ತಿ ಪ್ರಶಸ್ತಿ’ಯನ್ನು ಈ ಬಾರಿ ನೀಡಿದ್ದು ಜನಪ್ರಿಯ ಕಾದಂಬರಿಕಾರ ಬಿ.ಎಲ್.ವೇಣುರಿಗೆ. ಸಂಯೋಜಕರ ಪರವಾಗಿ ಮಿತ್ರ ಸಾಲಿಗ್ರಾಮ ಗಣೇಶ್ ಶೆಣೈರವರ ಆಹ್ವಾನದಂತೆ ಹೋದಾಗ ಸಿಕ್ಕ ವೇಣು ಜೊತೆ ನಡೆದದ್ದು ಈ ಮೇಲಿನ ಮಾತುಕತೆ.

ಹಾಗೆ ನೋಡಿದರೆ ನನ್ನ ವೇಣು ಸಂಬಂಧ ನಾಲ್ಕೂವರೆ ದಶಕಕ್ಕೂ ಹಿಂದಿನದು. ಎಪ್ಪತ್ನಾಲ್ಕರ ದಶಕದ ಉತ್ತರಾರ್ಧದಲ್ಲಿ ಇಲ್ಲಿಯ ಪತ್ರಿಕೆಯೊಂದರ ಪ್ರತಿನಿಧಿಯಾಗಿ ಚಿತ್ರದುರ್ಗಕ್ಕೆ ವರ್ಗಾ ವಣೆ ಗೊಂ ಡಾಗ, ವೇಣು ಮೊದಲ ಭೇಟಿ. ಪತ್ರಕರ್ತ ಮಿತ್ರ ಮಂಜುನಾಥ್‌, ನಾನು ವಾಸವಿದ್ದ  ಮೆಜೆ ಸ್ಟಿಕ್ ವೃತ್ತದ ಹೋ ಟೆಲ್‌ಗೆ ಕರೆತಂದು ಪರಿಚಯಿಸಿದ್ದು. `ಇವನು ನನ್ನ ಸ್ನೇಹಿತ ವೇಣು ಅಂತ. ಇಲ್ಲೇ ಡಿ.ಹೆಚ್.ಒ.ಆಫೀಸಿನಲ್ಲಿ ಕೆಲ್ಸ ಮಾಡ್ತಾನೆ. ಕಥೆ – ಗೀತೆ ಬರೆಯೋ ಹುಚ್ಚು’ ಇದು ಅವರ ಪರಿಚಯದ ವರಸೆ.

ಆಮೇಲೆ ಆಗಾಗ ವೇಣು ಭೇಟಿ. ಆನಂತರದ ದಿನಗಳಲ್ಲಿ ಹಿರಿಯ ಬರಹಗಾರ ಕೆ. ವೆಂಕಣ್ಣಾಚಾರ್‌ ರಿಂದಾಗಿ ಮತ್ತಷ್ಟು ಸಮೀಪ. ಸಿಕ್ಕಾಗಲೆಲ್ಲಾ ದುರ್ಗದ ಇತಿಹಾಸದ ರೋಮಾಂಚಕ ಚಿತ್ರಣವನ್ನು ಕಣ್ಮುಂದೆ ರೂಪಿಸುತ್ತಿದ್ದುದು ವೇಣು ಹೆಗ್ಗಳಿಕೆ.

ಆ ದಿನಗಳು ಚಿತ್ರದುರ್ಗದ ನನ್ನ ಬದು ಕಿನಲ್ಲಿ ಅವಿಸ್ಮರಣೀಯ. ಆರಾಸೆ, ಅನಸೂಯಾ ರಾಮರೆಡ್ದಿ, ಕೆ. ವೆಂಕಣ್ಣಾಚಾರ್, ದೊಡ್ದಬಾಣ ಗೆರೆ ಪ್ರಕಾಶ ಮೂರ್ತಿ, ಡಾ|| ಪಿ.ಎಸ್.ರಾಮಾನುಜಮ್, ಪ್ರೊ|| ಸಿದ್ದಲಿಂಗಯ್ಯ, ಟಿ.ಗಿರಿಜಾ, ಗಂಡುಗಲಿ, ಮಂಗ್ಳೂರು ವಿಜಯ್‌ ಮೊದಲಾದವರ ಒಡನಾಟ. ಅದರೊಂದಿಗೆ ತೀವ್ರವಾಗಿ ಬೆಳ ವಣಿಗೆ ಕಾಣುತ್ತಿದ್ದ ವೇಣು.

ದಿನದಿಂದ ದಿನಕ್ಕೆ ವೇಣು ಬೆಳೆದರು.ಇದಕ್ಕೆ ಅವರ ರಕ್ತದ ಕಣ ಕಣದಲ್ಲಿಯೂ ತುಂಬಿದ್ದ ದುರ್ಗದ ಮೇಲಿನ ಅತ್ಯಪಾರ ಒಲವು, ಅಧ್ಯಯನ ಶೀಲತೆ, ಹೊಸದನ್ನು ತಿಳಿಯಬೇಕೆಂಬ ಹಂಬಲ, ವೈಯಕ್ತಿಕ ಬದುಕಿನ ನೂರೆಂಟು ಸಮಸ್ಯೆಗಳನ್ನು ಒತ್ತರಿಸಿ ಬರಹಕ್ಕೇ ಮೀಸಲಾಗಬೇಕೆಂಬ ಛಲ.

ವೇಣು ತಮ್ಮ `ಗಂಡುಗಲಿ ಮದಕರಿ ನಾಯಕ’ ಬಿಡುಗಡೆಗೆ ಕರೆದರು. ಮೇಲ್ಗೋಟೆಯಲ್ಲಿ ಭರ್ಜರಿಯಾಗಿ ನಡೆದ ಸಮಾರಂಭ ಅಕ್ಷರಶಃ ಜಾತ್ರೆಯೇ ಆಯ್ತು. ಕೋಟೆಯ ಮೇಲೊಂದು ಜಾತ್ರೆ ಶೀರ್ಷಿಕೆಯಡಿ ನನ್ನ ಪತ್ರಿಕೆಯಲ್ಲಿ ಬರೆದೆ. 

ದಿನಗಳು ಉರುಳಿವೆ. ಆರಂಭದ  ದಿನಗಳ ವೇಣು ಅವರನ್ನು ಸಮೀಪದಿಂದ ಕಂಡಿದ್ದ ನನಗೆ ಸಾಹಿತ್ಯ, ಸಿನಿಮಾದಲ್ಲಿ ತ್ರಿವಿಕ್ರಮನಾಗಿ ಬೆಳೆದು ನಿಂತದ್ದನ್ನೂ ನೋಡುವ ಅವಕಾಶ. ಒಮ್ಮೆ ಸಿಕ್ಕಾಗ ಕೇಳಿದ್ದೆ. `ಸಿನಿಮಾದಲ್ಲೂ ಸಕತ್ತಾಗಿ ಮಿಂಚ್ತಾ ಇದ್ದೀರಿ, ಮುಂದೆ ನಿಮ್ಮನ್ನು ನೋಡ್ಬೇಕು ಅಂದ್ರೆ ಬೆಂಗಳೂರೋ, ಮದ್ರಾಸ್‌ಗೋ ಬಂದು ಕ್ಯೂ ಹಚ್ಚ್ ಬೇಕಾಗುತ್ತೇನೋ’. ತಕ್ಷಣ ಬಂತು ಉತ್ತರ `ಹರ್ಷದ ಕೂಳು ನೆಚ್ಗೊಂಡು ವರ್ಷದ ಕೂಳ್ ಕಳ್ಕೊಳೋ ಮೂರ್ಖತನ ಮಾಡೊಲ್ಲ. ಸರ್ಕಾರಿ ಕೆಲ್ಸ, ದುರ್ಗ ಎರ್ಡ್ನೂ ಬಿಡಲ್ಲ’ ಎಂದು. ಬದುಕಿನಲ್ಲಿ ಕಂಡುಂಡ ಸಂಕಷ್ಟಗಳ ಸರಮಾಲೆ ವೇಣುರವರ ಈ ನಿರ್ಧಾರಕ್ಕೆ ಕಾರಣವಾಗಿತ್ತು.

ಮೇ ತಿಂಗಳ 27 ಕ್ಕೆ ವೇಣು 75 ಕ್ಕೆ ಕಾಲಿರಿಸುತ್ತಿ ದ್ದಾರೆ. ಅಕ್ಯಾಡೆಮಿಕ್ ಅಲ್ಲದ, ಯಾವೊಬ್ಬ ಗಾಡ್ ಫಾದರ್ ಇಲ್ಲದೆಯೂ ಸ್ವಸಾಮರ್ಥ್ಯದಿಂದಲೇ ಸಾಧನೆಯ ಶಿಖರ ವೇರಿದ ವೇಣು, ವೈದ್ಯ ಇಲಾ ಖೆಯಲ್ಲಿ ಕೆಲಸ ಮಾಡಿದರೂ ವೈದ್ಯಕೀಯ ಓದ ಲಿಲ್ಲ, ಆದ್ರೂ ಡಾಕ್ಟರ್ ಆದ್ರು. (ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್) ಇವರ ಬಗ್ಗೆ ಅಧ್ಯಯನ ಮಾಡಿ, ಹಲವಾರು ವಿದ್ಯಾರ್ಥಿಗಳೂ ವೈದ್ಯಕೀಯ ಓದದೆ ಡಾಕ್ಟರ್ ಆದ್ರು ( ಪಿ.ಹೆಚ್.ಡಿ.)

ಶುಭಾಶಯ ಪ್ರಿಯ ವೇಣು. ಇನ್ನೂ ಹತ್ತಾರು ವರ್ಷಗಳ ಕಾಲ ಕುಟುಂಬ ವರ್ಗ ದವರೊಂದಿಗೆ ಆರೋಗ್ಯ- ಸಂತೋಷದಿಂದಿರಿ‌. ಮತ್ತಷ್ಟು ಉತ್ಕೃಷ್ಟ ಬರಹಗಳು ನಿಮ್ಮಿಂದ ನಾಡಿಗೆ ಅರ್ಪಣೆಯಾಗಲಿ. ನಾಡ ಜನ ಸಂಪ್ರೀತಿಯಿಂದ ಶತಮಾನೋತ್ಸವ ಆಚರಿ ಸುವಂತಾಗಲಿ. ಮತ್ತೊಮ್ಮೆ ಶುಭಾಶಯಗಳು.


ಹಳೇಬೀಡು ರಾಮಪ್ರಸಾದ್
9742095430

error: Content is protected !!