ದಾವಣಗೆರೆ, ಮೇ 26 – ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ವಿದ್ಯುತ್ (ತಿದ್ದುಪಡಿ) ಮಸೂದೆ ವಿರುದ್ಧ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದಿಂದ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗಿದೆ.
ಸಚಿವರು ನಗರದ ಸರ್ಕೀಟ್ ಹೌಸ್‌ಗೆ ಆಗಮಿಸಿದ ಸಮಯದಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ್ ಶಿವಗಂಗಾ, ಕೊರೊನಾ ಸಂದರ್ಭ ದುರುಪಯೋಗ ಮಾಡಿಕೊಂಡು ಬಿಕ್ಕಟ್ಟಿನ ಮಧ್ಯೆ ಕೇಂದ್ರ ಸರ್ಕಾರ ಹೊಸ ವಿದ್ಯುತ್ ಮಸೂದೆ ಮಂಡಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಉದ್ಯಮಿ ಗೌತಮ್ ಅದಾನಿ ಹಾಗೂ ಇತರರಿಗೆ ಲಾಭ ಮಾಡಿಕೊಡಲು ಹುನ್ನಾರ ನಡೆಸಲಾಗುತ್ತಿದೆ. ಗಂಭೀರವಾದ ಈ ವಿಚಾರದಲ್ಲಿ ಕೇಂದ್ರ ಸರ್ಕಾರ ರೈತರ ಜೊತೆ ಚಲ್ಲಾಟವಾಡುತ್ತಿದೆ ಎಂದವರು ದೂರಿದ್ದಾರೆ.
ಕೃಷಿ ಕ್ಷೇತ್ರಕ್ಕೆ ಇದುವರೆಗೂ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಈ ಹಿನ್ನೆಲೆ ಯಲ್ಲಿ ರಾಜ್ಯ ಸರ್ಕಾರವು ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರಕ್ಕೆ ಅಭಿಪ್ರಾಯ ತಿಳಿಸಲು ನೀಡಿರುವ 21 ದಿನಗಳ ಗಡುವು ಮುಗಿಯುವ ಹಂತದಲ್ಲಿದೆ. ರಾಜ್ಯ ಸರ್ಕಾರ ಈ ತಿದ್ದುಪಡಿಗೆ ಒಪ್ಪಿಗೆ ಸೂಚಿಸಬಾರದು. ಇಲ್ಲದಿದ್ದರೆ ರೈತರ ಜೊತೆಗೂಡಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಬಸವರಾಜು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್ .ಕೆ. ಪ್ರವೀಣ್ ಕುಮಾರ್, ಯುವ ಮುಖಂಡರಾದ ಬಾತಿ ಶಿವಕುಮಾರ್, ಬಸವ ರಾಜ್ ತೋಟದ, ಆವರಗೊಳ್ಳ ಯೋಗೇಶ್ ಮತ್ತಿತರರು ಉಪಸ್ಥಿತರಿದ್ದರು.