ನಾನೇ ಎಂಬುದನು ಬಿಡೋ ಮನುಜ

ನಾನೇ ಎಂಬುದನು ಬಿಡೋ ಮನುಜ
ನೀ ಬೆಳೆದೆಯಾ ಮತ್ತಂತೆ ಅನ್ಯರನು ಬೆಳೆಸು 

ಬೀಗದೆ ಕೃತಿಸು ಭೂಮಿಯೆಂಬುದು ನಿನ್ನೊಬ್ಬನಾ…
ವಿಜೃಂಭಣೆಗಾಗಿ ಉದಿಸಿಲ್ಲ.

ಉದಯನವನು ನಿತ್ಯ
ತಾನೆಂಬುದನೇ ಮರೆತು ಬರಿ ಬೆಳಗುತಿಹನು !

ಅಹಂಕಾರದಲ್ಲಿ ತುಕ್ಕಿಡಿದ
ಕಬ್ಬಿಣದಂತಾಗಬೇಡ…

ಗೆಲುವು ಘನವಾಗಲು
ಸುಮ್ಮನೇ ಹೊಳೆಯಂತೆ ಪಯಣಿಸು…

ಕಾದ ನೆಲವೆಲ್ಲ ತಣಿವು ಮುಡಿಯಲಿ
ಬಾಯಾರಿದ ಬಯಲು
ಜೀವನ ಪಡೆಯಲಿ !

ಅಸಂಖ್ಯಾತ ಜೀವರಾಶಿಗಳಲಿ
ನಾನೆಂಬುದೇ ಬಲು ತೃಣವು ಕಣೊ !

ಕುರಿತು ಹರಟಬೇಡ ಹೊರಡು…
ಹೊತ್ತು ಮುಳುಗುವ ಮುನ್ನ
ನಿನ್ನ ಬುತ್ತಿ ಹೊತ್ತು ತಾ !

ಚಿತ್ತಕ್ಕಿಷ್ಟು ಬೆಳಕು ಮುಡಿದು ಬಾ
ಸ್ವಾರ್ಥವೆಲ್ಲಾ ಕರಗಲಿ ನಿಸರ್ಗ ಉಳಿಯಲಿ!

ಮಾಲಿನ್ಯವೆಲ್ಲ ಹೊರಗೆ ಭ್ರಮೆಯು:
ಇರುವುದೆಲ್ಲ ಬರಿ ನಾನೆಂಬ ಕೊಳೆಯು ಒಳಗೆ !
ತೊಳೆದು ಬಿಡು!

ಮೂಡಲಿ ಕಾರುಣ್ಯದಾ ಸೊಬಗು
ಕರ್ಮವೆಲ್ಲ ಬಗೆಹರಿಯಲಿ ಬರೀ ಹಸಿರೇ ಹುಟ್ಟಲಿ.

ಬಂದ ಬಂದ ಕಳೆಯನು ಮೊಳಕೆಯಲ್ಲೇ  ಚಿವುಟು
ಪರಮಾನ್ನ ಫಲಿಸಲಿ !

ನಿನ್ನ ಪಾಡೆಲ್ಲ ಹಾಡಾಗಲಿ
ಕತೆಯಾಗುವುದೇ ಬೇಡ ಕಣೋ ಮನುಜ

ಬದುಕಿದು ನಾಲ್ಕು ದಿನ !
ಬರೀ ನಾಲ್ಕೇ ನಾಲ್ಕು ದಿನ !!?


ನಾನೇ ಎಂಬುದನು ಬಿಡೋ ಮನುಜ - Janathavaniಎ.ಸಿ.ಶಶಿಕಲಾ ಶಂಕರಮೂರ್ತಿ
ಶಿಕ್ಷಕಿ, ದಾವಣಗೆರೆ.
[email protected]

error: Content is protected !!