ಪವಿತ್ರ ಗ್ರಂಥ ಕುರ್ ಆನ್ ಪಠಿಸುವ ತಿಂಗಳು ರಂಜಾನ್‌

ಹರಪನಹಳ್ಳಿ, ಮೇ 25-  ಜಗತ್ತಿನ ಮುಸ್ಲಿಂ ಬಾಂಧವರು  ರಂಜಾನ್‌ಗೆ ದೇವರ ತಿಂಗಳು ಎಂದು ಕರೆಯುತ್ತಾರೆ. 

ಈ ತಿಂಗಳಲ್ಲಿ ಇಸ್ಲಾಂ ಧರ್ಮದ ಪವಿತ್ರ ಗ್ರಂಥ ಕುರ್ ಆನ್  ಪಠಿಸುವ ಪವಿತ್ರ ತಿಂಗಳು ಆಗಿದೆ. ಮನುಷ್ಯನನ್ನು ಎಲ್ಲಾ ವಿಧವಾದ ದೌರ್ಬಲ್ಯಗಳಿಂದ  ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರಗೊಳಿಸುವ ಉಪವಾಸದ ಮಹತ್ವವನ್ನು  ತಿಳಿಸಿ,  ಶಾಂತಿ, ಸೌಹಾರ್ದತೆಯ ಸಂದೇಶ ಸಾರುವ ಪವಿತ್ರ ರಂಜಾನ್ ಹಬ್ಬವನ್ನು ಪ್ರತಿ ವರ್ಷ ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿತ್ತು. ಆದರೆ, ಈ ಬಾರಿ   ಕೊರೊನಾ ವೈರಸ್‌ನಿಂದ ಜನ ತತ್ತರಿಸಿದ್ದು, ಮುಸ್ಲಿಮರಲ್ಲಿ ಹಬ್ಬದ ಸಡಗರ ಇರಲಿಲ್ಲ. ಇತಿಹಾಸದಲ್ಲೇ ಮೊದಲ ಬಾರಿಗೆ ಸಾಮೂಹಿಕ ನಮಾಜ್ ಇರಲಿಲ್ಲ.  

ಬೆಳಿಗ್ಗೆ ಅವರವರ ಮನೆಯ ಒಳಗಡೆ ಕೆಲವರು, ಇನ್ನೂ ಕೆಲವರು ಮನೆಯ ಆರ್‌ಸಿಸಿ ಮೇಲೆ ಕುಟುಂಬಸ್ಥರು ಮಾತ್ರ ಸೇರಿ ಅಲ್ಲಿಯೇ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ.

ಎಲ್ಲೆಡೆ ಪರಸ್ಪರ ಅಪ್ಪಿಕೊಂಡು ಶುಭಾಶಯ ಹೇಳುವುದು ಕಂಡುಬರಲಿಲ್ಲ. ಪಟ್ಟಣದ ನಾಲ್ಕು ಕಡೆ ಇರುವ ಈದ್ಗಾ ಮೈದಾನದಲ್ಲಿ ನಡೆಯುತ್ತಿದ್ದ ಸಾಮೂಹಿಕ ಪ್ರಾರ್ಥನೆ ಇದೇ ಮೊದಲ ಬಾರಿಗೆ ಇಲ್ಲವಾಗಿತ್ತು. 

ಪಟ್ಟಣದಲ್ಲಿ  ವಿವಿಧ ಬಗೆಯ ಹಣ್ಣು ಮಾರುವ ವ್ಯಾಪಾರಿಗಳು ಬಹುತೇಕರು ಮುಸ್ಲಿಮರೇ ಇದ್ದು, ಇವರೆಲ್ಲರೂ ತಮ್ಮ ಹಬ್ಬದಂದು ಎಲ್ಲಾ ಹಣ್ಣಿನ ಅಂಗಡಿಗಳನ್ನು ಮುಚ್ಚಿ ಬಿಡುತ್ತಿ ದ್ದರು. ಆದರೆ, ಇಂದು ಬಹಳಷ್ಟು ಹಣ್ಣಿನ ಅಂಗಡಿಗಳು ತೆರೆದಿದ್ದವು. ಅವರಲ್ಲಿ ಹಬ್ಬದ ಸಂತಸವಿರಲಿಲ್ಲ. 

ಈ ಕುರಿತು ಪ್ರತಿಕ್ರಿಯೆ ನೀಡಿದ ಪುರಸಭಾ ಸದಸ್ಯ ಡಿ. ಅಬ್ದುಲ್ ರಹಿಮಾನ್ ಸಾಬ್,  ಇಸ್ಲಾಂ ಧರ್ಮ ಹೇಳುವುದು ಜೀವ ರಕ್ಷಣೆಯ ಬಗ್ಗೆ, ಈ ಬಾರಿ ಕೊರೊನಾ ಭೀತಿಯಿಂದ ಹಾಗೂ ಸರ್ಕಾರದ ಲಾಕ್‌ಡೌನ್ ಆದೇಶದಂತೆ ಮನೆಯಲ್ಲಿಯೇ ರಂಜಾನ್ ಹಬ್ಬವನ್ನು ಆಚರಿಸಿದೆವು. ಕೋವಿಡ್‌ನಿಂದ ನಮ್ಮನ್ನು ರಕ್ಷಿಸಿಕೊಳ್ಳುವುದು ಹಾಗೂ ಮತ್ತೊಬ್ಬರನ್ನು ರಕ್ಷಣೆ ಮಾಡುವುದು ಮುಖ್ಯವಾಗಿದೆ ಎಂದು ಹೇಳಿದರು.

ತಾಲ್ಲೂಕು ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಎ. ಮೂಸಾ ಸಾಬ್, ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಸದಸ್ಯ ಬಿ. ನಜೀರ್, ಅಂಜುಮಾನ್ ಸಂಸ್ಥೆಯ ಮಾಜಿ ಅಧ್ಯಕ್ಷ ಸಿ.ಜಾಹಿದ್, ಪುರಸಭೆ ಸದಸ್ಯರುಗಳಾದ  ಲಾಟಿ ದಾದಾಪೀರ್, ಎಂ.ಕೆ.ಜಾವೇದ್, ಮುಖಂಡ ಎಚ್.ಎಸ್ ಅಮಾನುಲ್ಲಾ ಮಾತನಾಡಿ, ಇಸ್ಲಾಮಿನ ನಾಲ್ಕನೆಯ ಕಡ್ಡಾಯ ಕರ್ಮ ಒಂದು ತಿಂಗಳ ವ್ರತಾಚರಣೆ ನಂತರ ಬರುವ  ದಿನವೇ
ಪವಿತ್ರ ರಂಜಾನ್ ಆಗಿದ್ದು, ಈ ಬಾರಿ ಲಾಕ್‌ಡೌನ್‌ನಿಂದ ಹೊಸ ಬಟ್ಟೆ ಖರೀದಿಯನ್ನು  ತ್ಯಾಗ ಮಾಡಿ, ಅದೇ  ಹಣ ವನ್ನು ಬಡವರಿಗೆ ಆಹಾರ ಸಾಮಗ್ರಿಗಳನ್ನು ಹಾಗೂ ಇನ್ನಿತರೆ ಸಹಾಯ ಮಾಡಿ,  ರಂಜಾನ್‌ ಹಬ್ಬವನ್ನು ತಮ್ಮ ತಮ್ಮ ಮನೆಗಳಲ್ಲಿ  ನಮಾಜ್ ಮಾಡುವ  ಮೂಲಕ  ಸಾಮಾಜಿಕ ಅಂತರ ಕಾಪಾಡಿಕೊಂಡು ಸರಳವಾಗಿ  ಆಚರಿಸಿದ್ದೇವೆ ಎಂದು ತಿಳಿಸಿದರು.

error: Content is protected !!