ಬಿಸಿಯೂಟ ತಯಾರಕರ ಸಂಭಾವನೆ ಪರಿಹಾರವಾಗಿ ನೀಡಲು ಆಗ್ರಹ

ದಾವಣಗೆರೆ, ಮೇ 23- ಬಿಸಿಯೂಟ ತಯಾರಿಸುವ ಅಡುಗೆ ಸಿಬ್ಬಂದಿಗಳಿಗೆ ಮೂರು ತಿಂಗಳ ಸಂಭಾವನೆಯನ್ನು ಪರಿಹಾರವಾಗಿ ಘೋಷಿಸಬೇಕೆಂದು ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ (ಎಐಟಿಯುಸಿ) ಜಯದೇವ ವೃತ್ತದಲ್ಲಿಂದು ಪ್ರತಿಭಟನೆ ನಡೆಸಿದರು. ನಂತರ ಉಪವಿಭಾಗಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. 

ರಾಜ್ಯದಲ್ಲಿ ಮಧ್ಯಾಹ್ನದ ಬಿಸಿಯೂಟ ಉಪಹಾರ ಯೋಜನೆಯಲ್ಲಿ 1.18 ಲಕ್ಷ ಮಂದಿ ಬಡ ಮಹಿಳೆಯರು ಕಳೆದ 17 ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿದ್ದಾರೆ. ಮುಖ್ಯ ಅಡುಗೆಯವರಿಗೆ ಮಾಸಿಕ 2700 ರೂ. ಹಾಗೂ ಇತರೆ ಸಿಬ್ಬಂದಿಯವರಿಗೆ ಮಾಸಿಕ 2600 ರೂ. ಸಂಭಾವನೆ ಇದೆ. ಇದರಲ್ಲಿ ಕೇಂದ್ರ ಸರ್ಕಾರ ಕೇವಲ 600 ರೂ. ಮಾತ್ರ ನೀಡುತ್ತಿದೆ. ಉಳಿದ ಹಣವನ್ನು ರಾಜ್ಯ ಸರ್ಕಾರವೇ ಹಲವು ಹಂತಗಳಲ್ಲಿ ಭರಿಸಿದೆ. ಬಿಸಿಯೂಟ ತಯಾರಕರು ಕನಿಷ್ಠ ವೇತನ ಹಾಗೂ ಸಾಮಾಜಿಕ ಭದ್ರತಾ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಹಲವಾರು ಹೋರಾಟಗಳನ್ನು ನಿರಂತರವಾಗಿ ನಡೆಸಿದರೂ ನ್ಯಾಯಯುತ ಸೌಲಭ್ಯಗಳು ದೊರಕುತ್ತಿಲ್ಲ. 2020 ಜನವರಿ 21, 22ರಂದು ಅಹೋರಾತ್ರಿ ಧರಣಿ ನಡೆಸಿದ ಸಂದರ್ಭದಲ್ಲಿ ಬಜೆಟ್‌ನಲ್ಲಿ ವೇತನ ಹೆಚ್ಚಿಸುವುದಾಗಿ ಭರವಸೆ ನೀಡಿದ್ದರೂ ಸಹ ಕಾರ್ಯಗತವಾಗಿಲ್ಲ ಎಂದು ಪ್ರತಿಭಟನಾಕಾರರು ಅಳಲಿಟ್ಟರು.

ಪ್ರಸ್ತುತ ಕೋವಿಡ್ -19 ನಿಂದಾಗಿ ಬಿಸಿಯೂಟ ತಯಾರಿಕಾ ಸಿಬ್ಬಂದಿ ಬಲಿಪಶುಗಳಾಗಿದ್ದಾರೆ. ಕೂಲಿಯೂ ಇಲ್ಲದೇ, ಅನ್ನವೂ ಇಲ್ಲದೇ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅಸಂಘಟಿತ ವಲಯದ ಹಲವಾರು ವರ್ಗಗಳಿಗೆ ರಾಜ್ಯ ಸರ್ಕಾರದಿಂದ 5 ಸಾವಿರ ರೂ ಪರಿಹಾರ ನೀಡಿರುವುದು ಉತ್ತಮ ಕಾರ್ಯ. ಅದರಂತೆ, ಬಿಸಿಯೂಟ ಸಿಬ್ಬಂದಿಗಳಿಗೆ ಪರಿಹಾರ ನೀಡಬೇಕು ಎಂದು ಪ್ರತಿಭಟನಾ ನಿರತರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಬಿಸಿಯೂಟ ಅಡುಗೆ ಸಿಬ್ಬಂದಿಗೆ ಪ್ರತಿ ವರ್ಷ ಏಪ್ರಿಲ್ ಹಾಗೂ ಮೇ ತಿಂಗಳ ಬೇಸಿಗೆ ರಜೆ ಪ್ರಯುಕ್ತ ಸಂಭಾವನೆ ಸಿಗುವುದಿಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿ ಜೂನ್, ಜುಲೈ ತಿಂಗಳಿನಲ್ಲಿಯೂ ಶಾಲೆಗಳು ಪ್ರಾರಂಭವಾಗುವುದಿಲ್ಲ ಆದ್ದರಿಂದ 3 ತಿಂಗಳ ಸಂಭಾವನೆಯನ್ನು ಪರಿಹಾರ ಧನವಾಗಿ ನೀಡಬೇಕೆಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಗೌರವಾಧ್ಯಕ್ಷ ಹೆಚ್.ಕೆ. ರಾಮಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು, ಖಜಾಂಚಿ ರುದ್ರಮ್ಮ ಬೆಳಲಗೆರೆ, ಜ್ಯೋತಿ ಲಕ್ಷ್ಮಿ, ಚೆನ್ನಮ್ಮ, ಸರೋಜ, ರಾಮಣ್ಣ, ರಂಗನಾಥ್, ಹನುಮಕ್ಕ ಸೇರಿದಂತೆ ಇತರರು ಇದ್ದರು.

error: Content is protected !!