ಇಂದಿನ ಕರ್ಫ್ಯೂ ಹಿನ್ನೆಲೆ: ಮಾರುಕಟ್ಟೆಯಲ್ಲಿ ಹೆಚ್ಚಿದ ಖರೀದಿ
ದಾವಣಗೆರೆ, ಮೇ 23- ಲಾಕ್ ಡೌನ್ ಸಡಿಲ ಮಾಡಿದ ಹಿನ್ನೆಲೆಯಲ್ಲಿ ನಗರದ ಆರ್ಥಿಕ ಚಟುವಟಿಕೆಗಳು ದಿನೇ ದಿನೇ ಹೆಚ್ಚುತ್ತಾ ಸಾಗುತ್ತಿದ್ದು, ಶನಿವಾರ ಬಹುತೇಕ ಅಂಗಡಿಗಳು ತೆರೆದಿದ್ದವು. ಜನದಟ್ಟಣೆಯೂ ಹೆಚ್ಚಾಗಿತ್ತು.
ಶನಿವಾರ ಸಂಜೆ 7 ರಿಂದ ಸೋಮವಾರ ಬೆಳಿಗ್ಗೆ 7 ಗಂಟೆವರೆಗೆ ಕರ್ಫ್ಯೂ ಇರುವುದರಿಂದ ವಿವಿಧ ವಸ್ತು ಗಳು ಸೇರಿ, ಅಗತ್ಯ ವಸ್ತುಗಳ ಖರೀ ದಿಗೂ ಜನತೆ ಮಾರುಕಟ್ಟೆಗೆ ಮುಗಿ ಬಿದ್ದಿದ್ದರು. ಇದರಿಂದಾಗಿ ಮಾರುಕಟ್ಟೆ ಯಲ್ಲಿ ಹೆಚ್ಚಿನ ಕಲರವ ಕಂಡು ಬಂತು.
ತರಕಾರಿ ಖರೀದಿ: ನಗರದಲ್ಲಿ ಪ್ರತಿ ಭಾನುವಾರ ಸಂತೆ ನಡೆಯುತ್ತದೆ. ಆದರೆ ಈ ಭಾನುವಾರ ಕರ್ಫ್ಯೂ ಇರು ವುದರಿಂದ ಕೊಡು-ಕೊಳ್ಳುವಿಕೆಗೆ ತಡೆ ಬಿದ್ದಿದೆ. ಸಂತೆಗೆ ಬರಲು ನಿರ್ಧರಿಸಿದ್ದ ಹಣ್ಣು, ತರಕಾರಿ ವ್ಯಾಪಾರಿಗಳು, ಗ್ರಾಮೀಣ ಪ್ರದೇಶದಿಂದ ತುಂಡು ಭೂಮಿಯಲ್ಲಿ ತರಕಾರಿ ಬೆಳೆದ ರೈತರು ಶನಿವಾರವೇ ತಮ್ಮ ದಾಸ್ತಾನನ್ನು ಮಾರು ಕಟ್ಟೆಗೆ ತಂದು ಮಾರಾಟಕ್ಕೆ ಇಟ್ಟಿದ್ದರು.
ತೆಂಗಿನಕಾಯಿ, ಕ್ಯಾರೇಟ್, ಟೊಮ್ಯಾಟೋ, ಸೌತೇಕಾಯಿ, ಮಾವಿನ ಹಣ್ಣು, ಪಪ್ಪಾಯ ಹಣ್ಣು ಗಳನ್ನು ಹಳ್ಳಿಗರು ತಂದು ಮಾರಾಟ ಮಾರಿದರು.
ಮೆಡಿಕಲ್ ಶಾಪ್ಗಳಲ್ಲೂ ರಶ್ : ನಗರದ ಔಷಧಿ ಅಂಗಡಿಗಳಲ್ಲೂ ಸಹ ಶನಿವಾರ ಹೆಚ್ಚಿನ ಜನರು ಖರೀದಿಯಲ್ಲಿ ನಿರತರಾಗಿದ್ದರು. ಸರ್ಕಾರವು ಭಾನು ವಾರ ಔಷಧಿ, ಹಾಲು, ದಿನಸಿ ಸೇರಿ ದಂತೆ ಅಗತ್ಯ ವಸ್ತುಗಳಿಗೆ ವಿನಾಯಿತಿ ನೀಡಿದೆಯಾದರೂ, ಜನರು ಸಂಜೆ ಹಾಲನ್ನು ಮುಂಚಿತವಾಗಿಯೇ ಖರೀದಿ ಸುತ್ತಿದ್ದು ಹಲವೆಡೆ ಕಂಡು ಬಂತು.
ರಜೆ ಹಿನ್ನೆಲೆಯಲ್ಲಿ ಮಕ್ಕಳ ಸೈಕಲ್ಗೆ ಬೇಡಿಕೆ: ಲಾಕ್ಡೌನ್ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಿದ್ದು, ಮಕ್ಕಳು ಚಿಕ್ಕ ಚಿಕ್ಕ ಸೈಕಲ್ಗಳಿಗಾಗಿ ಪೋಷಕರಿಗೆ ಬೇಡಿಕೆ ಇಡುತ್ತಿದ್ದಾರೆ. ಪರಿಣಾಮ ಪುಟಾಣಿ ಸೈಕಲ್ಗಳಿಗೆ ಬೇಡಿಕೆ ಹೆಚ್ಚಿದೆ. ಕೆಲವು ಬೆಳ್ಳಿ-ಬಂಗಾರದ ಅಂಗಡಿಗಳು ತೆರೆದಿದ್ದವಾದರೂ, ಅಲ್ಲಿ ಅಷ್ಟಾಗಿ ಗ್ರಾಹಕರು ಕಂಡು ಬಂದಿರಲಿಲ್ಲ.
ಮಾವಿಗೆ ಮುಗಿಬಿದ್ದ ಜನ : ದಾವಣಗೆರೆ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಶನಿವಾರ ಬೆಳಿಗ್ಗೆ ಮಾವಿನ ಹಣ್ಣಿನ ಮಾರಾಟ ನಡೆಯಿತು. ರೈತ ಉತ್ಪಾದಕ ಕಂಪನಿಯೊಂದರಿಂದ ಅಲ್ಫೋನ್ಸೋ ಮಾವುಗಳ ಮಾರಾಟ ನಡೆಯಿತು.
ಬೆಳಿಗ್ಗೆ 9.30ರಿಂದಲೇ ಜನರು ಮಾವು ಖರೀದಿಗೆ ಮುಗಿ ಬಿದ್ದಿದ್ದರು. ಒಂದು ಗಂಟೆಯೊಳಗೆ ಮಾವುಗಳು ಖಾಲಿ ಆಗಿ, ನಂತರ ಬಂದವರು ನಿರಾಸೆಗೊಳಗಾದರು.
ಕಟ್ಟಡ ಸಾಮಗ್ರಿ ಖರೀದಿ ಜೋರು: ನಗರ ಹಾಗೂ ಗ್ರಾಮೀಣ ಪ್ರದೇಶ ಗಳಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಕಬ್ಬಿಣ, ಸಿಮೆಂಟು, ಟೈಲ್ಸ್, ಪೈಪ್ ಮತ್ತಿತರೆ ಸಾಮಗ್ರಿಗಳ ಖರೀದಿ ನಡೆಯಿತು.
ಜಿಲ್ಲಾ ಚಿಗಟೇರಿ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಿರುವುದರಿಂದ ಇದೀಗ ಖಾಸಗಿ ಆಸ್ಪತ್ರೆಗಳ ಒಪಿಡಿ ವಿಭಾಗಗಳಲ್ಲಿ ವಿವಿಧ ರೀತಿಯ ಕಾಯಿಲೆಗಳನ್ನು ತೋರಿಸಿಕೊಳ್ಳಲು ಬರುವವರ ಸಂಖ್ಯೆ ಹೆಚ್ಚಾಗಿದೆ. ಅಂತೆಯೇ ಶನಿವಾರ ಕೆಲ ಖಾಸಗಿ ಆಸ್ಪತ್ರೆಗಳ ಮುಂದೆ ಜನದಟ್ಟಣೆ ಹೆಚ್ಚಾಗಿ ಕಂಡು ಬಂತು. ಕಳೆದ ನಾಲ್ಕಾರು ದಿನಗಳಿಗೆ ಹೋಲಿಸಿದರೆ ಇಂದು ಆಟೋಗಳ ಸಂಚಾರ ತುಸು ಹೆಚ್ಚಾಗಿತ್ತು.