ಕೆರೆ, ಬಾವಿಗಳ ಹೂಳೆತ್ತಿಸಿ ಅಂತರ್ಜಲ ಹೆಚ್ಚಿಸಿ

ಮಾನ್ಯರೇ,

ಮುಂಗಾರು ಮಳೆ ಇನ್ನೇನು ಒಂದೆರಡು ವಾರಗಳಲ್ಲೇ ಪ್ರಾರಂಭ ವಾಗಲಿದೆ. ದಾವಣಗೆರೆ ಸೇರಿದಂತೆ ಎಲ್ಲಾ ಆರು ತಾಲ್ಲೂಕುಗಳಲ್ಲಿ ಅನೇಕ ಬತ್ತಿದ ಕೆರೆ, ಬಾವಿ, ಹೊಂಡಗಳು ಸಾಕಷ್ಟು ಇವೆ. ತಕ್ಷಣದಿಂದಲೇ ಮಹಾ ನಗರ ಪಾಲಿಕೆ, ಜಿಲ್ಲಾಡಳಿತ, ಮುಂದಿನ ದಿನಗಳಲ್ಲಿ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಬತ್ತಿದ ಕೆರೆ, ಬಾವಿಗಳ ಹೂಳೆತ್ತಿದರೆ ಮುಂದಿನ ದಿನಮಾನ ಗಳಲ್ಲಿ ಕುಡಿಯುವ, ಬೇಸಾಯಕ್ಕೆ ನೀರಿನ ಕೊರತೆ ನೀಗಿಸಬಹುದು. 

ದಾವಣಗೆರೆ  ಕೆ.ಬಿ. ಬಡಾವಣೆಯ ಬಳ್ಳಾರಿ ಸಿದ್ದಮ್ಮ ಪಾರ್ಕ್‌, ರಾಜ ವೀರ ಮದಕರಿ ನಾಯಕ (ಹೊಂಡದ ಸರ್ಕಲ್‌) ವೃತ್ತದ ಹಿಂಭಾಗ, ಪುರಾತನ ಪುಟ್ಟ ಪುಷ್ಕರಣಿ ಇದ್ದು, ಅದಕ್ಕು ಒಂದು ಇತಿಹಾಸವಿದೆ. ಇಲ್ಲಿಯೂ ಹೂಳೆತ್ತುವ ಕಾರ್ಯ ಆಗಬೇಕಿದೆ. ಈ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅನೇಕ ದಿನಗೂಲಿ ಕಾರ್ಮಿಕರಿಗೆ ಕೆಲಸವಿಲ್ಲದೇ ಬಳಲುತ್ತಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಅವರುಗಳನ್ನು ಬಳಸಿಕೊಂಡರೆ ಅವರ ಅನ್ನದ ತುತ್ತಿಗೆ ಆಧಾರವಾಗುತ್ತದೆ. ಈ ಹೂಳೆತ್ತುವ ಕಾಯಕಕ್ಕೆ ಅವರನ್ನು ಬಳಸಿಕೊಳ್ಳಬಹುದು. ಹೂಳೆತ್ತಿದ ಆ ಮಣ್ಣು ಸಾವಯವ ಗೊಬ್ಬರದಂತೆ ರಸವತ್ತಾದ ಮಣ್ಣನ್ನು ರೈತರು ಬಳಸಿಕೊಳ್ಳಬಹುದು.

ಅನೇಕ ಹಳ್ಳಿಗಳಲ್ಲಿ ಆಯಾ ಊರಿನ ಯುವಕರು, ರೈತರು, ಸ್ವಯಂ ಪ್ರೇರಣೆ ಯಿಂದ ತಮ್ಮ ಊರಿನ ಕೆರೆ, ಬಾವಿ, ಪುಷ್ಕರಣೆಗಳನ್ನು ಹೂಳೆತ್ತುವ ಕಾಯಕವು ನಿಜಕ್ಕೂ ಶ್ಲಾಘನೀಯ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ, ಕಾರ್ಯಪ್ರವೃತ್ತವಾಗಿ  ಮುಂದಿನ ದಿನಮಾನಗಳಲ್ಲಿ ಕುಡಿಯುವ, ಬೇಸಾ ಯಕ್ಕೆ ಅಂತರ್ಜಲ ಹೆಚ್ಚಿಸುವ ಸತ್ಕಾರ್ಯಕ್ಕೆ ಸ್ಪಂದಿಸಬೇಕಾಗಿ ವಿನಂತಿ.

– ಸಾಲಿಗ್ರಾಮ ಗಣೇಶ್‌ ಶೆಣೈ, ದಾವಣಗೆರೆ.

error: Content is protected !!