ಕೊರೊನಾ ವಕ್ಕರಿಸದಂತೆ ಹಳ್ಳಿಗಳಲ್ಲಿ ಅಜ್ಜಿ ಹಬ್ಬ

ಮಲೇಬೆನ್ನೂರು, ಮೇ 24- ಮಹಾಮಾರಿ ಕೊರೊನಾ ವೈರಸ್‌ ಹರಡುವುದನ್ನು ತಡೆಯಲು ಸರ್ಕಾರ ನಾನಾ ಪ್ರಯತ್ನ ಮಾಡುತ್ತಿದೆ. ಅಲ್ಲದೆ ಹಲವು ದೇಶಗಳಲ್ಲಿ ಔಷಧಿ ಕಂಡು ಹಿಡಿಯಲು ಸಾಕಷ್ಟು ಕಸರತ್ತು ನಡೆದಿವೆ. ಇದರ ನಡುವೆ ಹಳ್ಳಿಗಳಲ್ಲಿ ಕೊರೊನಾ ಓಡಿಸುವುದಕ್ಕಾಗಿ ಜನರು ಅಜ್ಜಿ ಹಬ್ಬದ ಮೊರೆ ಹೋಗಿದ್ದಾರೆ.

ಬೇವಿನ ಮರಕ್ಕೆ ವಿಶೇಷ ಪೂಜೆ ಮಾಡಿ, ಅದರ ಮುಂಭಾಗ ಎಡೆ ಇಟ್ಟು ಪೂಜೆ ಸಲ್ಲಿಸುತ್ತಾರೆ. ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಉತ್ತಮ ಮಳೆ, ಬೆಳೆ ಆಗಲಿ ಮತ್ತು ಯಾವುದೇ ರೋಗ, ರುಜಿನಗಳು ಬಾರದಿರಲಿ ಎಂದು ಅಜ್ಜಿ ಹಬ್ಬ ಆಚರಿಸುತ್ತಿದ್ದರು.

ಈ ಹಿಂದೆ ಪ್ಲೇಗ್‌, ಕಾಲರಾದಂತಹ ಮಹಾಮಾರಿ ಕಾಯಿಲೆಗಳು ವಕ್ಕರಿಸಿದಾಗ ಊರನ್ನೇ ಖಾಲಿ ಮಾಡುತ್ತಿದ್ದ ಜನರು, ದೇವರ ಆರಾಧನೆ ಮಾಡಿ, ಕಾಯಿಲೆಯನ್ನು ಹೊಡೆ ದೋಡಿಸು ತಾಯಿ ಅಂತಾ ಪೂಜಿಸುತ್ತಿದ್ದರು. ಮತ್ತೆ ಕೆಲವೆಡೆ `ಅಮ್ಮ’ನನ್ನು ಕಳುಹಿಸುವ ಹಬ್ಬ ಮಾಡುತ್ತಿದ್ದರು. ಆದರೀಗ ಕೊರೊನಾ ವೈರಸ್‌ ಗ್ರಾಮಕ್ಕೆ ವಕ್ಕರಿಸದೇ ಇರಲಿ ಎಂದು ಪ್ರಾರ್ಥಿಸಿ ಅಜ್ಜಿ ಹಬ್ಬವನ್ನು ಎಲ್ಲಾ ಕಡೆ ವಿಶೇಷವಾಗಿ ಆಚರಿಸುತ್ತಿದ್ದಾರೆ.

ಇನ್ನೂ ಈ ವಿಚಾರ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕ ಚರ್ಚೆಗೂ ಗ್ರಾಸವಾಗಿದೆ. ಕೆಲವರು ಇದೊಂದು ಮೂಢನಂಬಿಕೆ, ಇಂತಹ ಪೂಜೆಗಳ ಆಚರಣೆಯಿಂದ ಕೊರೊನಾ ಹೋಗು ವುದಿಲ್ಲ ಎಂದರೆ, ಮತ್ತೆ ಕೆಲವರು ಪೂಜೆಯಿಂದ ಕೊರೊನಾ ಹೋಗುವುದಾದರೆ ಹೋಗಲಿ ಎನ್ನುತ್ತಿದ್ದಾರೆ. ಹೀಗಾಗಿ ವಿಶೇಷ ಮಹತ್ವ ಪಡೆದು ಕೊಂಡಿರುವ ಅಜ್ಜಿ ಹಬ್ಬವನ್ನು ಶುಕ್ರವಾರ ಜಿಗಳಿ ಗ್ರಾಮದಲ್ಲೂ ಗ್ರಾಮಸ್ಥರು ಶ್ರದ್ಧಾ-ಭಕ್ತಿಯಿಂದ ಆಚರಿಸಿ, ನಂತರ ಗ್ರಾಮದ ದೇವರುಗಳ ಸಮ್ಮು ಖದಲ್ಲಿ ಅಮ್ಮನನ್ನು ಗಡಿ ದಾಟಿಸಲಾಯಿತು.

error: Content is protected !!