ದರ್ಜಿ ಸಮುದಾಯಕ್ಕೆ ಕೋವಿಡ್ ಪರಿಹಾರ ನೀಡುವಂತೆ ಸರ್ಕಾರಕ್ಕೆ ಆಗ್ರಹ

ಸಿಂಪಿ ಸಮಾಜ ದೈವ ಮಂಡಳಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಕೆ

ದಾವಣಗೆರೆ,ಮೇ 22- ಕೊರೊನಾ ವೈರಸ್ ನಿಂದಾಗಿ ಆಗಿದ್ದ ಲಾಕ್ ಡೌನ್ ಪರಿಣಾಮ ಸಂಕಷ್ಟಕ್ಕೊಳಗಾಗಿರುವ ನಾಮದೇವ ಸಿಂಪಿ (ದರ್ಜಿ) ಸಮುದಾಯಕ್ಕೆ ಪರಿಹಾರ ನೀಡುವಂತೆ ನಗರದ ದೊಡ್ಡಪೇಟೆಯ ನಾಮದೇವ ಸಿಂಪಿ ಸಮಾಜ ದೈವ ಮಂಡಳಿ ಸರ್ಕಾರವನ್ನು ಒತ್ತಾಯಿಸಿದೆ.

ಈ ಸಂಬಂಧ ದೈವ ಮಂಡಳಿ ಅಧ್ಯಕ್ಷ ಜಗನ್ನಾಥ್ ಎಸ್. ಗಂಜಿಗಟ್ಟಿ ಅವರ ನೇತೃತ್ವದ ನಾಮದೇವ ಸಿಂಪಿ ಸಮಾಜದ ಮುಖಂಡರು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರನ್ನು ಇಂದು ಭೇಟಿ ಮಾಡಿ ಅವರ ಮೂಲಕ ಸರ್ಕಾರಕ್ಕೆ ಲಿಖಿತ ಮನವಿ ಪತ್ರ ಸಲ್ಲಿಸಿದರು.

ನಾಮದೇವ ಸಿಂಪಿ ಸಮಾಜವು ಹಿಂದುಳಿದ ವರ್ಗಗಳಲ್ಲೊಂದಾಗಿದ್ದು, ನಮ್ಮ ಸಮಾಜದ ಬಹುತೇಕರು ನಾಮದೇವ ಸಿಂಪಿ ಸಮಾಜದ ಕುಲ ಕಸುಬಾದ ದರ್ಜಿ (ಟೈಲರಿಂಗ್) ಕೆಲಸವನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. 

ಲಾಕ್‌ಡೌನ್ ಸಂದರ್ಭದಲ್ಲಿ ಕೆಲಸ ವಿಲ್ಲದೇ, ಜೀವನ ನಿರ್ವಹಿಸುವುದು ಕ್ಲಿಷ್ಟಕರವಾಗಿದೆ. ಕಾರಣ, ಕೋವಿಡ್ 19 ರ ವಿಶೇಷ ಪ್ಯಾಕೇಜ್‌ನಲ್ಲಿ ನಾಮದೇವ ಸಿಂಪಿ ಸಮಾಜಕ್ಕೂ ಪರಿಹಾರ ನೀಡು ವಂತೆ ಮನವಿ ಪತ್ರದಲ್ಲಿ ಮುಖ್ಯ ಮಂತ್ರಿಗಳನ್ನು ಕೇಳಿಕೊಳ್ಳಲಾಗಿದೆ. 

ಕೋವಿಡ್ 19 ರ ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತವು ನಿರ್ವಹಿಸಿದ ಸೇವೆಯನ್ನು ಮುಕ್ತಕಂಠದಿಂದ ಪ್ರಶಂಸಿಸಿರುವ ಸಮಾಜ ಬಾಂಧವರು, ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾದ ಸಾರ್ವಜನಿಕರಿಗೆ ನೆರವು ನೀಡಿದ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ನಾಮದೇವ ಸಿಂಪಿ ಸಮಾಜ ದೈವ ಮಂಡಳಿ ಗೌರವಾಧ್ಯಕ್ಷ ಜ್ಞಾನದೇವ ಬೋಂಗಾಳೆ, ಉಪಾಧ್ಯಕ್ಷ ಆನಂದರಾವ್ ರಾಕುಂಡೆ, ಸಮಾಜದ ಹಿರಿಯರಾದ ಕೆ.ಬಿ.ಶಂಕರನಾರಾಯಣ, ಸದಸ್ಯರುಗಳಾದ ವಿಜಯಕುಮಾರ್ ರಾಕುಂಡೆ, ಪ್ರದೀಪ್ ಕುಮಾರ್ ಖಟಾವಕರ್, ರಾಜು ಹೋವಳೆ ಮತ್ತಿತರರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

error: Content is protected !!