ದಾವಣಗೆರೆಯಲ್ಲಿ ಟಿಕೆಟ್ ಕೌಂಟರ್ ಕಾರ್ಯಾರಂಭ
ದಾವಣಗೆರೆ, ಮೇ 22 – ಲಾಕ್‌ಡೌನ್ ನಂತರ ರಾಜ್ಯದಲ್ಲಿ ಮೊದಲ ಬಾರಿಗೆ ಅಂತರ ಜಿಲ್ಲಾ ರೈಲು ಸೇವೆ ಆರಂಭವಾಗಿದೆ. ಬೆಂಗಳೂರು – ಬೆಳಗಾವಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ನಗರಕ್ಕೂ ಆಗಮಿಸಿದೆ.
ಬೆಂಗಳೂರು – ಬೆಳಗಾವಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಬೆಳಿಗ್ಗೆ 8 ಗಂಟೆಗೆ ಕಾರ್ಯಾರಂಭ ಮಾಡಿದೆ. ಬೆಂಗಳೂರು ಹಾಗೂ ಮೈಸೂರು ನಡುವೆ ಪ್ರತಿನಿತ್ಯ ರೈಲು ಸಂಚರಿಸಲಿದೆ.
ಈ ರೈಲುಗಳಲ್ಲಿ ಸಾಮಾಜಿಕ ಅಂತರ ಹಾಗೂ ಕೊರೊನಾ ತಡೆಗಾಗಿ ವಿಧಿಸಲಾಗಿದ್ದ ಇತರೆ ಕ್ರಮಗಳನ್ನು ಜಾರಿಗೆ ತರಲಾಗಿತ್ತು.
ಈ ನಡುವೆ, ಹೇಳಿಕೆ ಬಿಡುಗಡೆ ಮಾಡಿರುವ ನೈರುತ್ಯ ರೈಲ್ವೆ, ದಾವಣಗೆರೆ ಸೇರಿದಂತೆ ನಾಲ್ಕು ಕಡೆಗಳಲ್ಲಿ ಟಿಕೆಟ್ ಕಾಯ್ದಿರಿಸುವ ಸೇವೆ ಪುನರಾರಂಭಿಸುವುದಾಗಿ ತಿಳಿಸಿದೆ.
ಮೈಸೂರು, ದಾವಣಗೆರೆ, ಶಿವಮೊಗ್ಗ ಟೌನ್ ಮತ್ತು ಹಾಸನ ನಿಲ್ದಾಣಗಳಲ್ಲಿ ಕೌಂಟರ್‌ಗಳು ಪ್ರಾರಂಭ
ಜೂನ್ 1ರಿಂದ ರೈಲ್ವೆಯು 100 ಜೋಡಿ ರೈಲು ಸೇವೆಗಳಿಗೆ ಚಾಲನೆ ನೀಡಲಿದೆ. ಇವುಗಳಿಗೆ ಟಿಕೆಟ್ ಬುಕ್ ಮಾಡಲು ಮೈಸೂರು ವಿಭಾಗದಲ್ಲಿನ ದಾವಣಗೆರೆ, ಮೈಸೂರು, ಶಿವಮೊಗ್ಗ ಹಾಗೂ ಹಾಸನಗಳಲ್ಲಿ ಪಿ.ಆರ್.ಎಸ್. ಕೌಂಟರ್‌ಗಳು ಕಾರ್ಯನಿರ್ವಹಿಸಲಿವೆ ಎಂದು ತಿಳಿಸಲಾಗಿದೆ.
ಮೊದಲಿಗೆ ಪ್ರಮುಖ ನಿಲ್ದಾಣಗಳಲ್ಲಿ ಕೌಂಟರ್ ತೆರೆಯಲಾಗುವುದು. ನಂತರ ಹಂತ ಹಂತವಾಗಿ ಉಳಿದ ನಿಲ್ದಾಣಗಳಲ್ಲೂ ರೈಲ್ವೆ ಕೌಂಟರ್ ತೆರೆಯಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಲಾಕ್‌ಡೌನ್ ಕಾರಣದಿಂದಾಗಿ ರದ್ದುಪಡಿಸಲಾಗಿದ್ದ ರೈಲು ಗಾಡಿಗಳಲ್ಲಿ ಟಿಕೆಟ್ ಹೊಂದಿದ್ದ ಪ್ರಯಾಣಿಕರು, ಅದಕ್ಕಾಗಿ ಮರು ಪಾವತಿ
ಪಡೆಯಲು ಮೇ 25ರಿಂದ ಇದೇ ಕೌಂಟರ್‌ಗಳ ಮೂಲಕ ಅವಕಾಶ ಕಲ್ಪಿಸಲಾಗಿದೆ ಎಂದು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕಿ ಹಾಗೂ ಜನಸಂಪರ್ಕಾಧಿಕಾರಿ ಪ್ರಿಯಾ ಶೆಟ್ಟಿ ತಿಳಿಸಿದ್ದಾರೆ.