ಜ್ಞಾನಾರ್ಜನೆಗೆ ಹಂಬಲವಿರಲಿ…

ಇಂದಿನ ಶಿಕ್ಷಣ ಪದ್ಧತಿಯನ್ನು ಅವಲೋಕಿಸಿದಾಗ, ಇದು ನಿಜವಾಗಲೂ ಒಂದು ನಿರ್ದಿಷ್ಟ ಗುರಿಯತ್ತ ಸಾಗಿದೆಯೇ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುವುದು ಸಹಜ. ಇದಕ್ಕೆ ಉತ್ತರವನ್ನು ಕಂಡು ಕೊಂಡಾಗ   ಉತ್ತರವು ನಕಾರಾತ್ಮಕ ರೀತಿಯಲ್ಲಿ ಇರುತ್ತದೆ ಎನ್ನುವುದು ಕೂಡ ಸತ್ಯ. ಹಾಗಾದರೆ ಶಿಕ್ಷಣದ ಪರಮ ಉದ್ದೇಶವೇನು…? ವಿದ್ಯಾರ್ಥಿ ಅಥವಾ ಒಬ್ಬ ವ್ಯಕ್ತಿಯ ಸರ್ವಾಂಗೀಣ ವ್ಯಕ್ತಿತ್ವದ ಅಭಿವೃದ್ಧಿ ಹಾಗೂ ಭವಿಷ್ಯವನ್ನು ರೂಪಿಸುವುದೇ ಶಿಕ್ಷಣದ ಉದ್ದೇಶ. ಆದರೆ ಇಂದಿನ ಶಿಕ್ಷಣ ಪದ್ಧತಿಯು ಈ ಗುರಿಗಳನ್ನು ತಲುಪುವತ್ತ ಸಾಗಿದೆಯೇ? ಇಲ್ಲವಾದರೆ ಅದಕ್ಕೆ ಕಾರಣಗಳೇನು?. ಒಂದಿಷ್ಟು ಅಕ್ಷರಗಳನ್ನು ಓದಲು ಬರೆಯಲು ಕಲಿಸುವುದು ಪರೀಕ್ಷೆಗಳ ದೃಷ್ಟಿಯಿಂದ ನಿಯಮಿತ ಪಠ್ಯಕ್ರಮವನ್ನು ಗಿಳಿ ಪಾಠದಂತೆ ಕಲಿಸುವುದು ಇದು ಶಿಕ್ಷಣದ ಉದ್ದೇಶವಾಗಿದೆ ಇಷ್ಟಕ್ಕೆ ಶಿಕ್ಷಣ ಮುಗಿಯಿತು ಎಂದು ಹೇಳಿದರೆ ಶಿಕ್ಷಣದ ಮಹತ್ವ ಕಳೆದುಹೋಗುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಜ್ಞಾನ ಸಂಪಾದನೆ ಮಾಡಿಕೊಳ್ಳಬೇಕು ಎಂಬ ಕಾತುರವಾಗಲಿ ಹಂಬಲವಾಗಲೀ ಆಸಕ್ತಿಯಾಗಲಿ ವಿದ್ಯಾರ್ಥಿಗಳಲ್ಲಿ ಕಾಣಸಿಗುವುದು ತುಂಬಾ ವಿರಳವಾಗಿದೆ. ಹಾಗಾಗಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಮತ್ತು ಶಿಕ್ಷಣ ಸಮಸ್ಯೆಗಳು   ಪೈಪೋಟಿಗೆ ನಿಂತ ವಾಣಿಜ್ಯ ಮಳಿಗೆ ಆಗಿಬಿಟ್ಟಿದೆ. ಹಾಗೂ ಶಿಕ್ಷಣವು ಯಾವುದಾದರೂ ಒಂದು ಕೆಲಸ ಗಿಟ್ಟಿಸಿಕೊಳ್ಳುವ ಸಾಧನವಾಗಿ ಪರಿವರ್ತನೆಗೊಂಡಿದೆ.

ನನಗೆ ಎಲ್ಲಾ ಗೊತ್ತು , ನಾನು ಎಲ್ಲವನ್ನೂ ಕಲಿತಿದ್ದೇನೆ, ಮತ್ತೆ ಕಲಿಯುವುದು ಏನೂ ಇಲ್ಲ ಎಂದು ಹೇಳಿಕೊಳ್ಳುವುದು ಮೂರ್ಖತನ. ಏಕೆಂದರೆ ಜಗತ್ತಿನ ಈ ಸೃಷ್ಟಿಯಲ್ಲಿ ನಾವು ಎಷ್ಟೇ ಕಲಿತರೂ ಏನೇ ಕಲಿತರೂ ಕಲಿಯುತ್ತಿದ್ದರು ಇನ್ನೂ ಕಲಿಯಬೇಕಾಗಿರುವುದು ತುಂಬಾ ಇದೆ. ಸಹಸ್ರಮಾನಗಳವರೆಗೂ ಕಲಿತರು ಕಲಿಯಬೇಕಾಗಿರುವುದು ಇನ್ನೂ ಬಹಳಷ್ಟಿದೆ. ಮನುಷ್ಯ ಜೀವನದ ಕೊನೆಯ ಕ್ಷಣದವರೆಗೂ ಅವನು ವಿದ್ಯಾರ್ಥಿಯೇ. ಒಂದಲ್ಲ ಒಂದು ವಿಷಯದಲ್ಲಿ ಜ್ಞಾನದ ಅವಶ್ಯಕತೆ ಇದ್ದೇ ಇದೆ .ಅದನ್ನು ಪಡೆಯಲು ಆತನಿಗೆ ಹಂಬಲವಿದ್ದರೆ ಸಾಕು. 

ಜೀವನದಲ್ಲಿ ಮನುಷ್ಯನಿಗೆ ಕಲಿಯಬೇಕೆಂಬ ಕಾತುರ ಎಷ್ಟು ಹೆಚ್ಚಾಗಿರುತ್ತದೋ ಅಷ್ಟು ಒಳ್ಳೆಯದು. ಇದರಿಂದ ಮನುಷ್ಯ ಪ್ರಬುದ್ಧರಾಗುತ್ತಾ  ಹೋಗುತ್ತಾನೆ. ಆದರೆ, ಅದಕ್ಕೆ ಜ್ಞಾನ ಪಡೆಯುವ ಹಂಬಲವಿರಬೇಕು, ಕಾತುರ ಇರಬೇಕು, ಜ್ಞಾನದ ದಾಹ ಇರಬೇಕು, ಜ್ಞಾನಾರ್ಜನೆಯ ಹಂಬಲ ಇದ್ದರೆ ಅದು ನಿಮ್ಮ ಜೀವನದ ಗುರಿಯನ್ನು ಸಾಧಿಸಲು ಸೂಕ್ತ ವಾತಾವರಣವನ್ನು ಸೃಷ್ಟಿಸುತ್ತದೆ. ನಿಮ್ಮ ಜೀವನದ ಗುರಿಯನ್ನು ಸಾಧಿಸಲು ಸಹ ಕಾತುರ ಹಂಬಲವಿದ್ದರೆ ಸಾಧ್ಯವಾಗುತ್ತದೆ.

 

ಯಾವುದೇ ಗುರಿಯನ್ನು ಸಾಧಿಸಲು ಅದಕ್ಕೆ ಇರಬೇಕಾದಂತಹ ಕಾತುರ ಇಲ್ಲದಿದ್ದರೆ ತುಂಬಾ ಕಷ್ಟ. ಇಂದು ಮಾಡುವ ಕೆಲಸ ನಾಳೆ ಮಾಡಿದರಾಯ್ತು ಇನ್ನೊಂದು ದಿನ ಮಾಡಿದರಾಯಿತೆಂದು ಸಮಯವನ್ನು ದೂಡುತ್ತಾ ಸೋಮಾರಿ ಆದರೆ ಯಾವ ಸಾಧನೆಯೂ ಸಾಧ್ಯವಾಗದು. ಜೀವನದಲ್ಲಿ ಒಮ್ಮೆ ಹೋದ ಸಮಯ ಮತ್ತೆ ಬರುವುದಿಲ್ಲ ಎಂಬ ಸತ್ಯ ತಿಳಿದಿದ್ದರೂ ನೀವು ಆ ರೀತಿ ಮಾಡಿದರೆ ನಂತರ ಪಶ್ಚಾತ್ತಾಪ ಪಟ್ಟರೆ ಏನು ಪ್ರಯೋಜನವಿಲ್ಲ.

ಸ್ವಾಮಿ ವಿವೇಕಾನಂದರಿಗೆ ಭಾರತದೇಶವನ್ನು ಆಧ್ಯಾತ್ಮಿಕ ಗುರುವನ್ನಾಗಿ ಪ್ರಪಂಚಕ್ಕೆತೋರಿಸಬೇಕು ಎಂಬುದು ಬಹಳ ದೊಡ್ಡ ಗುರಿ ಇತ್ತು. ಅದಕ್ಕಾಗಿ ಅವರು ಹಗಲಿರಳು ಕಾರ್ಯೋನ್ಮುಖರಾಗಿ ಇದ್ದರು. ಅವರು ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರಲು ಕಾರಣವೇನು ಎಂದು ಯೋಚಿಸಿದರೆ ಅವರಲ್ಲಿದ್ದ ಹಂಬಲ  ಅದಕ್ಕೆ ಕಾರಣ. ಅವರನ್ನು ಕಾರ್ಯೋನ್ಮುಖಗೊಳಿಸಿದ ಈ ಹಂಬಲ ಮತ್ತು ಕಾತರದಿಂದ ಅದಕ್ಕೆ ಬೇಕಾದ ಎಲ್ಲಾ ರೀತಿಯ ಅಧ್ಯಯನ ನಡೆಸಿ ಅವರ ಗುರಿಯನ್ನು ಸಾಧಿಸಲು ಸಾಧ್ಯವಾಯಿತು.

ಇಂದಿನ ಮಕ್ಕಳು ಯಾವುದೇ ಒಂದು ವಸ್ತುವನ್ನು ಕಂಡಾಗ ಅದು ಏನು? ಇದೆ ಹೇಗೆ ಹೀಗಾಯಿತು ? ಇದರ ಪ್ರಯೋಜನವೇನು? ಎಂದು ತಂದೆತಾಯಿಗಳನ್ನು ಕೇಳುವುದು ಸಹಜ. ಈ ಎಲ್ಲಾ ಪ್ರಶ್ನೆಗಳಿಗೆ ತಂದೆ-ತಾಯಿಗಳು ಸಮಂಜಸವಾದ ರೀತಿಯಲ್ಲಿ ಮಕ್ಕಳಿಗೆ ಉತ್ತರ ನೀಡಿದರೆ ಅವರ ಕಾತರತೆ  ಹಾಗೂ ಮಕ್ಕಳಲ್ಲಿ ಜ್ಞಾನಾರ್ಜನೆಯ ಹಂಬಲ ಹೆಚ್ಚಾಗುತ್ತದೆ. ಆದರೆ ಇಂದಿನ ತಂದೆತಾಯಿಗಳು ತಮ್ಮ ಬಿಡುವಿಲ್ಲದ ಜೀವನದಲ್ಲಿ ಮಕ್ಕಳು ಕೇಳುವ ಪ್ರಶ್ನೆಗಳಿಗೆ ಸಮಂಜಸವಾದ ಉತ್ತರ ನೀಡದೆ ಹಾರಿಕೆ ಉತ್ತರ ನೀಡಿ ಅವರ ಹಂಬಲ ಏಳೆಯ ವಯಸ್ಸಿನಲ್ಲಿ ಚಿವುಟಿ ಹಾಕುವಂತಾಗಿದೆ. ಹಾಗಾಗಿ ತಂದೆ-ತಾಯಿಗಳು ಮಕ್ಕಳು ಕೇಳುವ ಪ್ರಶ್ನೆಗಳಿಗೆ  ಅವರ ಜ್ಞಾನಾರ್ಜನೆಗೆ ಸಹಾಯ ಸಹಾಯಕವಾಗುವಂತೆ ಉತ್ತರ ನೀಡಬೇಕು. ಈ ತರದ ಪ್ರಶ್ನೆಗಳು ನಮ್ಮಲ್ಲಿ ಅಥವಾ ಮಕ್ಕಳಲ್ಲಿ ಬರದೆ ಇದ್ದರೆ ನಮ್ಮಲ್ಲಿ ಸಂವೇದನೆ, ಸ್ಪಂದನ ಶಕ್ತಿಯೇ ಇಲ್ಲದಂತೆ, ನಾವೊಂದು ಜೀವವಿರುವ ಜೀವಿಯಾದರೂ ನಿರ್ಜೀವ ಕಲ್ಲಿನಂತೆ. ಜ್ಞಾನದಾಹ ಕಾತರ ನಮ್ಮಲ್ಲಿ ಇಲ್ಲದಿದ್ದರೆ ನಮ್ಮ ಜೀವನವು ಶೂನ್ಯವಾದಂತೆ.

ಹಂಬಲ, ಕಾತರ, ವ್ಯಾಕುಲತೆ ಎಂದರೆ ಕೆಲವೊಂದು ಸಮಯದಲ್ಲಿ ದುರಾಸೆ ಎಂದು ಅರ್ಥಮಾಡಿಕೊಳ್ಳಬಹುದು. ಆದರೆ ಇಲ್ಲಿ ಆ ರೀತಿ ಅರ್ಥೈಸುವ ಬದಲಾಗಿ ರಚನಾತ್ಮಕವಾಗಿ, ಧನಾತ್ಮಕವಾಗಿ, ನ್ಯಾಯಸಮ್ಮತವಾದ ಮಾರ್ಗದಲ್ಲಿ ಮನುಷ್ಯ ತನ್ನ ಇಷ್ಟಾರ್ಥ ಸಿದ್ಧಿಗಾಗಿ ಹಂಬಲಿಸುವುದರಲ್ಲಿ ಯಾವ ತಪ್ಪೂ ಇಲ್ಲ.  ಅದರಲ್ಲೂ ಜ್ಞಾನಾರ್ಜನೆಗೆಂದು ಹಂಬಲಿಸಿದರೆ ತಪ್ಪೇ ಅಲ್ಲ. ಜ್ಞಾನವೆಂಬುದು ಲೋಕಕಲ್ಯಾಣಕ್ಕಾಗಿ ಇತರರಿಗಾಗಿ ಬೇರೆಯವರಿಗೆ ಸನ್ಮಾರ್ಗವನ್ನು ತೋರಿಸಲು ಇರುವ ಒಂದು ಬಹುದೊಡ್ಡ ಸಾಧನ.

ಪ್ರತಿಯೊಬ್ಬರಲ್ಲೂ ಇನ್ನೂ ಹೆಚ್ಚು ಹೆಚ್ಚು ಕಲಿಯಬೇಕು ಎಂಬ ಜ್ಞಾನದಾಹ ಲವಲವಿಕೆ ಕಾತುರತೆ ಹಂಬಲ ಅವಶ್ಯಕವಾಗಿ ಬೇಕು ಅದರಿಂದ ನಮ್ಮ ಜೀವನದ ಗುರಿ ಸಾಧ್ಯ.


ವೆಂಕಟೇಶ್ ಬಾಬು
ಸಹಾಯಕ ಪ್ರಾಧ್ಯಾಪಕರು
ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ದಾವಣಗೆರೆ.
[email protected]

error: Content is protected !!