ರೈತ ಸಂಘ – ಹಸಿರು ಸೇನೆ ಜಿಲ್ಲಾ – ತಾಲ್ಲೂಕು ಘಟಕಗಳ ಆಗ್ರಹ
ದಾವಣಗೆರೆ, ಮೇ 21- ಖರೀದಿ ಕೇಂದ್ರದ ದ್ವಂದ್ವ ನೀತಿ ಸರಿಪಡಿಸುವುದು ಸೇರಿದಂತೆ ಸಂಕಷ್ಟದಲ್ಲಿರುವ ಜಿಲ್ಲೆಯ ರೈತರ ನೆರವಿಗೆ ಜಿಲ್ಲಾಡಳಿತ ಧಾವಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳು ಆಗ್ರಹಿಸಿವೆ.
ನಗರದ ಎಪಿಎಂಸಿ ಸಭಾಂಗಣದಲ್ಲಿ ಇಂದು ಸಂಘದ ರಾಜ್ಯ ಕಾರ್ಯದರ್ಶಿ ರವಿಕುಮಾರ್ ಬಲ್ಲೂರ್ ಹಾಗೂ ರೈತ ಮುಖಂಡರ ನೇತೃತ್ವದಲ್ಲಿ ಕೊರೊನಾ ಪರಿಣಾಮ ಸಂಕಷ್ಟದಲ್ಲಿನ ರೈತರಿಗೆ ಸೂಕ್ತ ನ್ಯಾಯ ಒದಗಿಸುವ ಸಂಬಂಧ ಸಭೆ ನಡೆಸಿ ಚರ್ಚಿಸಲಾಯಿತು.
ಈ ವೇಳೆ ಮಾತನಾಡಿದ ರವಿಕುಮಾರ್ ಬಲ್ಲೂರು, ಸರ್ಕಾರದ ಖರೀದಿ ಕೇಂದ್ರದಲ್ಲಿ ಭತ್ತಕ್ಕೆ 1740 ರಿಂದ 1820 ರೂ. ದರವಿದೆ. ಆದರೆ ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಕುಸಿದಿದ್ದು, 1400 ರಿಂದ 1500 ರೂ.ಗೆ ಮಾತ್ರ ದರವಿದ್ದು, ಕೇಳುವ ವರೇ ಇಲ್ಲವಾಗಿದೆ. ಇದರಿಂದ ರೈತರಿಗೆ ನಷ್ಟವುಂಟಾಗಲಿದೆ. ಆದ್ದರಿಂದ ಮಾರುಕಟ್ಟೆಯಲ್ಲೂ ಸಹ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಕಡಿಮೆಗೆ ಭತ್ತ ಖರೀದಿಸಬಾರದೆಂದು ಆದೇಶಿಸಬೇಕೆಂದು ಒತ್ತಾಯಿಸಿದರು.
ತೋಟಗಾರಿಕೆ, ಕೃಷಿ ಬೆಳೆಗಳು ಹಾಗೂ ಮುಂಗಾರು ಹಂಗಾಮಿನ ಬೆಳೆಗಳು ಸಕಾಲಕ್ಕೆ ಮಾರಾಟವಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರದ ಖರೀದಿ ಕೇಂದ್ರದಲ್ಲಿ ದ್ವಂದ್ವ ನೀತಿ ಇದ್ದು, ಭತ್ತ ಖರೀದಿಯಲ್ಲಿ ಪ್ರತಿ ರೈತನ ಒಂದು ಎಕರೆಗೆ 16 ಕ್ವಿಂಟಾಲ್ ನಿಗದಿಪಡಿಸಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಹಾಗಿದ್ದರೆ ಉಳಿದ ಭತ್ತವನ್ನು ಎಲ್ಲಿ ಮಾರಾಟ ಮಾಡಬೇಕೆಂಬುದು ರೈತರಿಗೆ ತಿಳಿಯುತ್ತಿಲ್ಲ. ಹಾಗಾಗಿ ಈ ದ್ವಂದ್ವ ನೀತಿ ಬದಲಿಗೆ ಉಳಿದ ಭತ್ತವನ್ನೂ ಸಹ ಖರೀದಿ ಕೇಂದ್ರದಲ್ಲೇ ಖರೀದಿಸಬೇಕು.
ಮುಂಗಾರಿನ ಖರೀದಿ ಕೇಂದ್ರ ಈ ತಿಂಗಳ 31ಕ್ಕೆ ಮುಗಿಯುತ್ತಿದ್ದು, ಇದರ ಅವಧಿಯನ್ನು ಮುಂದುವರೆಸ ಬೇಕೆಂದು ಮನವಿ ಮಾಡಿದರು.
ಸರ್ಕಾರದ ಆದೇಶವಿದ್ದರೂ ಸಹ ಎಸ್ ಬಿಐ ಮತ್ತು ಇತರೆ ಬ್ಯಾಂಕ್ ಗಳು ಸಾಲ ಕಟ್ಟುವಂತೆ ರೈತರಿಗೆ ಹಿಂಸಿಸುತ್ತಿವೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ಇದು ಸರಿಯೇ?. ಈ ಬಗ್ಗೆ ಗಮನ ಹರಿಸಿ ರೈತರನ್ನು ಕಾಪಾಡಬೇಕು.
ಜಿಲ್ಲೆಯಲ್ಲಿ ಕೆರೆಗಳ ಒತ್ತುವರಿ ಬಗ್ಗೆ ಈವರೆಗೂ ಯಾವುದೇ ನಿಖರ ಮಾಹಿತಿ ನೀಡಿಲ್ಲ. ಈ ಬಗ್ಗೆ ಸಾಕಷ್ಟು ಚರ್ಚೆಯಾದರೂ ಏನೂ ಪ್ರಯೋಜನವಾಗಿಲ್ಲ. ಅಡಿಕೆ ಬೆಳೆಗಾರರು ಸಹ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆಗಳು ನಾಶವಾಗಿ ಕೈಗೆ ಸಿಗದಂತಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಸಂಘದ ಜಿಲ್ಲಾ ಗೌರವಾಧ್ಯಕ್ಷ ಚಿಕ್ಕನಹಳ್ಳಿ ರೇವಣಸಿದ್ದಪ್ಪ, ಜಿಲ್ಲಾ ಉಪಾಧ್ಯಕ್ಷ ಲಿಂಗರಾಜ್ ಪಾಮೇನಳ್ಳಿ, ಜಿಲ್ಲಾ ಕಾರ್ಯದರ್ಶಿ ಭೀಮಣ್ಣ ಆನಗೋಡು, ತಾಲ್ಲೂಕು ಅಧ್ಯಕ್ಷ ಮಾಯಕೊಂಡ ನಿಂಗಪ್ಪ, ತಾಲ್ಲೂಕು ಗೌರವಾಧ್ಯಕ್ಷ ಭೀಮನಾಯ್ಕ ಚಿನ್ನಸಮುದ್ರ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎ.ಎಂ. ಕುಮಾರ ಸ್ವಾಮಿ ಅಣಬೇರು, ತಾಲ್ಲೂಕು ಉಪಾಧ್ಯಕ್ಷ ಅಣ್ಣಪ್ಪ ಬಲ್ಲೂರು, ತಾಲ್ಲೂಕು ಕಾರ್ಯಾಧ್ಯಕ್ಷ ಬಲ್ಲೂರು ಪರಶುರಾಮ್ ರೆಡ್ಡಿ, ತಾಲ್ಲೂಕು ಉಪಾಧ್ಯಕ್ಷ ಕೊಟ್ರಪ್ಪ ಬೂದಾಳ್ ಸೇರಿದಂತೆ ಇತರರು ಇದ್ದರು.