ಹರಿಹರ: ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಇಳಿಮುಖ

ಹರಿಹರ ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ರೋಗಿಗಳ ಸಂಖ್ಯೆ ಇಳಿಮುಖ ವಾಗಿರುವುದರಿಂದ ವಾರ್ಡ್‌ಗಳು ಬಿಕೋ ಎನ್ನುತ್ತಿವೆ.

ಆಸ್ಪತ್ರೆಯು 100 ಬೆಡ್ ವ್ಯವಸ್ಥೆಯನ್ನು ಹೊಂದಿದೆ. ಆಸ್ಪತ್ರೆಗೆ ದಿನಕ್ಕೆ 1500 ಕ್ಕೂ ಹೆಚ್ಚು ಜನರು ವಿವಿಧ ರೋಗಗಳಿಗೆ ತಪಾಸಣೆ ಮಾಡಿಸಿ ಕೊಳ್ಳಲು ಆಗಮಿಸುತ್ತಿದ್ದು, ಗರ್ಭಿಣಿಯರು ಅಧಿಕ ಸಂಖ್ಯೆಯಲ್ಲಿ ಬರುತ್ತಿದ್ದರು. ಭಾನುವಾರ ಹೊರತುಪಡಿಸಿ ಉಳಿದ ಎಲ್ಲಾ ದಿನಗಳಿಂದ ಆಸ್ಪತ್ರೆ ತುಂಬಿ ತುಳುಕುತ್ತಿತ್ತು, ಇದೀಗ ಖಾಲಿ ಖಾಲಿಯಾಗಿದೆ. 

ಕೊರೊನಾ ವೈರಸ್ ರೋಗದ ಬಾಧೆ ಹೆಚ್ಚಾಗುತ್ತಿದ್ದಂತೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ಹೊರಗಡೆ ಒಂದು ಪ್ರತ್ಯೇಕ ಕೌಂಟರ್ ತೆರೆದು ತಪಾಸಣೆ ಮಾಡಿ, ಅವರಿಗೆ ಚಿಕಿತ್ಸೆ ನೀಡಿ ಹೊರಗಿನಿಂದ ಹೊರಗೆ ಕಳಿಸುವ ವ್ಯವಸ್ಥೆ ಮಾಡಿದ್ದು, ಜೊತೆಗೆ ಔಷಧದ ಕೌಂಟರ್ ಸಹ ಆಸ್ಪತ್ರೆಯ ಬಾಗಿಲ ಬಳಿ ಮಾಡಲಾಗಿದೆ. 

ಅತಿಯಾದ ತೊಂದರೆಗೆ ಒಳಗಾಗಿದ್ದರೆ ಅಂತಹವರಿಗೆ ಮಾತ್ರ ವಾರ್ಡ್‌ಗಳಲ್ಲಿ  ಅವಕಾಶಗಳನ್ನು ನೀಡಲಾಗಿದೆ ಮತ್ತು ಹೆರಿಗೆ ಮಾಡಿಸಿಕೊಂಡವರಿಗೆ ಮಾತ್ರ ವಾರ್ಡ್‌ಗಳಲ್ಲಿ  ತಂಗುವುದಕ್ಕೆ ಅವಕಾಶ ನೀಡಲಾಗಿದೆ.

ಆಸ್ಪತ್ರೆ ಆವರಣದಲ್ಲಿ ಚೀಟಿ ಕೊಡುವ ಕೌಂಟರ್, ಲ್ಯಾಬ್, ಎಕ್ಸ್‌ರೇ, ಚುಚ್ಚುಮದ್ದು ಕೊಠಡಿ ಸೇರಿದಂತೆ ಇತರೆ ಕೌಂಟರ್‌ಗಳನ್ನು  ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಇನ್ನು ರಾತ್ರಿ ಸಮಯದಲ್ಲಿ ಯಾವ ರೋಗಿಯು ಕೂಡಾ ಆಸ್ಪತ್ರೆಯ ಬೆಡ್ ಮೇಲೆ ಮಲಗುವುದಕ್ಕೆ ಆಸಕ್ತಿಯನ್ನು ತೋರಿಸುತ್ತಿಲ್ಲ.

ಸಂಜೆ ಆಗುತ್ತಿದ್ದಂತೆ ತಮ್ಮ ತಮ್ಮ ಮನೆಗಳಿಗೆ ತೆರಳಿ ಮತ್ತೆ ಪುನಃ ಬೆಳಿಗ್ಗೆ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದುವರೆಗೂ ಯಾವುದೇ ಕೊರೊನಾ ರೋಗದ ಬಾಧೆ ಇರುವಂತಹ ವ್ಯಕ್ತಿಗಳು ಪತ್ತೆ ಆಗಿಲ್ಲ. ಕಾರಣ ಈಗಾಗಲೇ ನಗರದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ತೆರೆದು ದಿನ ನಿತ್ಯದ ಚಟುವಟಿಕೆಗಳನ್ನು ಪ್ರಾರಂಭಿಸಿರುವುದರಿಂದ, ಮತ್ತು ಆಟೋ, ಬಸ್ ಓಡಾಟ ಪ್ರಾರಂಭಿಸಿದ್ದು, ಇದರಿಂದಾಗಿ ರೋಗಿಗಳ ಸಂಖ್ಯೆ ಯಾವ ರೀತಿಯಲ್ಲಿ ತಿರುವು ಪಡೆಯುತ್ತದೆ ಕಾದು ನೋಡಬೇಕಾಗಿದೆ.

_____________________________________________________________________________________________________________

ಎಂ. ಚಿದಾನಂದ ಕಂಚಿಕೇರಿ,
8867867610
[email protected]

error: Content is protected !!