ಬುಧವಾರ ಮೂವರ ಬಿಡುಗಡೆ, ನಾಲ್ವರು ನಾನ್ ಕೋವಿಡ್ ಆಸ್ಪತ್ರೆಗೆ ವರ್ಗ, ಹೊಸ ಪ್ರಕರಣ ಶೂನ್ಯ
ದಾವಣಗೆರೆ, ಮೇ 20- ಕೊರೊನಾ ಸೋಂಕು ಹೆಚ್ಚುತ್ತಲೇ ಇರುವ ಸುದ್ದಿಯಿಂದ ಆತಂಕಗೊಂಡಿದ್ದ ದಾವಣಗೆರೆ ಜನತೆಗೆ ಬುಧವಾರ ಶುಭ ದಿನವಾಗಿತ್ತು.
ಯಾವುದೇ ಹೊಸ ಸೋಂಕು ಪ್ರಕರಣ ವರದಿಯಾಗದೇ ಇರುವುದು ಹಾಗೂ ಏಳು ಜನ ಸೋಂಕು ಮುಕ್ತರಾಗಿ ಬಿಡುಗಡೆ ಹೊಂದಿರುವುದು ಜನರಿಗೆ ಒಂದಿಷ್ಟು ಸಂತಸ ಮೂಡಿಸಿದೆ.
ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಒಟ್ಟು ಈ ವರೆಗೆ 9 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಗೊಂಡಿದ್ದಾರೆ.
ಈ ಹಿಂದೆ ವಿದೇಶ ಪ್ರಯಾಣ ಹಿನ್ನೆಲೆ ಹೊಂದಿದ್ದ ಇಬ್ಬರು ರೋಗಿಗಳು ಗುಣಮುಖರಾಗಿ ಬಿಡುಗಡೆ ಹೊಂದಿದ್ದರು. ಬುಧವಾರ ಬೆಳಿಗ್ಗೆ ರೋಗಿ ಸಂಖ್ಯೆಗಳಾದ 585, 616, ಮತ್ತು 635 ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರು.
ಸಂಜೆ ಕೊರೊನಾದಿಂದ ಗುಣಮುಖರಾದ ಆದರೆ ಇತರೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಇರುವ ರೋಗಿ ಸಂಖ್ಯೆಗಳಾದ 580, 584(ಹೃದಯ ರೋಗ) 583 ಮತ್ತು 617 ಇವರನ್ನು ಕೋವಿಡ್ ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಳಿಸಿ ನಾನ್ ಕೋವಿಡ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಅಲ್ಲಿ ಅವರು ಒಂದೆರಡು ದಿನಗಳ ಕಾಲ ಚಿಕಿತ್ಸೆ ಪಡೆದು ಬಿಡುಗಡೆ ಹೊಂದಲಿದ್ದಾರೆ.
13 ಕಂಟೈನ್ಮೆಂಟ್ ವಲಯಗಳು : ಪಾಸಿಟಿವ್ ಪ್ರಕರಣಗಳು ಕಂಡು ಬಂದಿರುವ ಭಾಷಾ ನಗರ, ಜಾಲಿ ನಗರ, ಇಮಾಂ ನಗರ, ಬೇತೂರು ರಸ್ತೆ, ಕೆಟಿಜೆ ನಗರ, ಎಸ್.ಪಿ.ಎಸ್. ನಗರ, ಶಿವ ನಗರ, ರೈತರ ಬೀದಿ, ಪೊಲೀಸ್ ಕ್ವಾಟ್ರಸ್, ಆನೆಕೊಂಡ, ಎಸ್.ಜೆ.ಎಂ. ನಗರ, ವಿನಾಯಕ ನಗರ ಹಾಗೂ ಕೆರೆಬಿಳಚಿ ಸೇರಿ ಒಟ್ಟು 13 ಕಂಟೈನ್ ಮೆಂಟ್ ಝೋನ್ಗಳೆಂದು ಗುರುತಿಸಲಾಗಿದೆ.
410 ವರದಿ ನೆಗೆಟಿವ್ : ಜಿಲ್ಲೆಯಲ್ಲಿ ಒಟ್ಟಾರೆ 112 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು ಪ್ರಸ್ತುತ 99 ಸಕ್ರಿಯ ಪ್ರಕರಣಗಳಿವೆ. ಒಟ್ಟಾರೆ ಇಲ್ಲಿಯವರೆಗೆ 5111 ಮಾದರಿ ಸಂಗ್ರಹಿಸಲಾಗಿದ್ದು, 3559 ವರದಿಗಳು ನೆಗೆಟಿವ್ ಬಂದಿವೆ. ಬುಧವಾರ 410 ವರದಿಗಳು ನೆಗೆಟಿವ್ ಬಂದಿವೆ. ಮತ್ತು 420 ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.
ಕಂಟೈನ್ ಮೆಂಟ್ ವಲಯಗಳಿಂದ ಯಾರೂ ಅನಾವಶ್ಯಕವಾಗಿ ಹೊರ ಬರಬಾರದು. ಸರ್ಕಾರದ ಸೂಚನೆ ಪಾಲಿಸಬೇಕು. ಉಳಿದಂತೆ ಲಾಕ್ ಡೌನ್ ಸಡಿಲ ಮಾಡಿದ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. – ಹನುಮಂತರಾಯ, ಎಸ್ಪಿ.
ಹೂ ಮಳೆಯ ಬೀಳ್ಕೊಡುಗೆ :
ದಾವಣಗೆರೆ, ಮೇ 20- ಕೊರೊನಾ ದಿಂದ ಸಂಪೂರ್ಣ ಗುಣಮುಖರಾದ ಮೂವ ರನ್ನು ಬುಧವಾರ ಬೆಳಿಗ್ಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
ಜಿಲ್ಲಾಡಳಿತ ಹಾಗೂ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳು ಹೂ ಮಳೆ ಸುರಿಸಿ, ಚಪ್ಪಾಳೆ ತಟ್ಟುವ ಮೂಲಕ ಗುಣಮುಖರಾದ ವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಇದು ಎರಡನೇ ಕಂತಿನ ಬಿಡುಗಡೆಯಾಗಿದೆ. ಈ ಮೊದಲು ಮೂವರು ಗುಣಮುಖರಾಗಿದ್ದರು. ಬಳಿಕ ಇದೀಗ ಒಟ್ಟು ಏಳು ಜನರನ್ನು ಬಿಡುಗಡೆ ಮಾಡಲು ಸರ್ಕಾರವೂ ಅನುಮತಿಸಿದ್ದು, ಬಿಡುಗಡೆಗೆ ತಯಾರಿ ಮಾಡಿಕೊಳ್ಳಲಾಗಿದೆ. ಅದರಲ್ಲಿ ಇಂದು ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನುಳಿದ ನಾಲ್ವರು ಕೋವಿಡ್ ಅಲ್ಲದೆ ಹೃದಯ ಹಾಗೂ ಇನ್ನಿತರೆ ಬೇರೆ ಸಮಸ್ಯೆಯಿಂದ ಬಳಲುತ್ತಿರುವವರಿದ್ದಾರೆ. ಅವರನ್ನು ಬೇರೆ ಆಸ್ಪತ್ರೆಗೆ ಸೇರಿಸಲು ಸೂಚಿಸಲಾಗಿದ್ದು, ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಗೊಳಿಸ ಲಾಗುವುದು ಎಂದು ತಿಳಿಸಿದರು.
ಅತ್ಯಂತ ಪರಿಣಿತಿ ಹೊಂದಿದ ವೈದ್ಯರು ನಮ್ಮ ಜಿಲ್ಲೆಯಲ್ಲಿದ್ದಾರೆ. ಎಲ್ಲರ ಪ್ರಯತ್ನ, ಉತ್ಸಾಹ ಮತ್ತು ಹುಮ್ಮಸ್ಸಿನಿಂದ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುವ ವಿಶ್ವಾಸವಿದೆ. ಸಾರ್ವಜನಿಕರು ಯಾವುದೇ ರೀತಿಯಲ್ಲಿ ಭಯ ಪಡಬಾರದು. ನಮ್ಮ ಸರ್ವೇಕ್ಷಣಾ ತಂಡ ಎಪಿಸೆಂಟರ್ ಭಾಗದ ಸುತ್ತಮುತ್ತಲಿನ ಪ್ರತಿಯೊಂದು ಬೀದಿ ಬೀದಿಯ ಮನೆಗಳಲ್ಲಿನ ಜನರ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದರು.
ಸಾಕಷ್ಟು ಕೊರೊನಾ ರೋಗಿಗಳನ್ನು ಗುಣಮುಖರನ್ನಾಗಿಸಿ ಆಸ್ಪತ್ರೆಯಿಂದ ಶೀಘ್ರವೇ ಬಿಡುಗಡೆ ಮಾಡಿ ಕಳುಹಿಸುವ ವಿಶ್ವಾಸವಿದೆ. ಮಹಾನಗರ ಪಾಲಿಕೆ ಮೇಯರ್ ನಮಗೆ ಕೈಜೋಡಿಸಿ ಬೆನ್ನೆಲುಬಾಗಿ ನಿಂತಿದ್ದಾರೆ. ಅವರ ಎಲ್ಲಾ ಪ್ರಯತ್ನ ಹಾಗೂ ಕೆಲಸಗಳಿಗೆ ನಾವು ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಕಳೆದ ಎರಡು ತಿಂಗಳು ಮನೆಯಲ್ಲಿಯೇ ಇದ್ದು ಕೊರೊನಾ ನಿಯಂತ್ರಣಕ್ಕೆ ಸಹಕರಿಸಿದ್ದೀರಿ. ಇನ್ನು ಮನೆಯಿಂದ ಹೊರ ಬಂದು ತಮ್ಮ ತಮ್ಮ ವ್ಯವಹಾರದಲ್ಲಿ ಪಾಲ್ಗೊಳ್ಳಿ. ಕೊರೊನಾ ಜೊತೆಯೇ ಬದುಕಿ ಗೆದ್ದು ತೋರಿಸೋಣ ಎಂದು ಮಹಾನಗರ ಪಾಲಿಕೆ ಮೇಯರ್ ಬಿ.ಜಿ. ಅಜಯ್ ಕುಮಾರ್ ಕರೆ ನೀಡಿದರು.
ಇಂದು ಮೂವರು ಕೊರೊನಾ ಸೋಂಕಿನಿಂದ ಮುಕ್ತರಾಗಿ ಹೊರ ಬರುತ್ತಿದ್ದಾರೆ. ಮತ್ತಷ್ಟು ಜನರು ಶೀಘ್ರವೇ ಗುಣಮುಖರಾಗಿ ಹೊರ ಬರಲಿದ್ದಾರೆ. ಇದೆಲ್ಲಾ ಶ್ರೇಯಸ್ಸು ಶ್ರದ್ಧೆಯಿಂದ ಕಾರ್ಯನಿರ್ವಹಿಸಿದ ವೈದ್ಯರಿಗೆ ಸಲ್ಲಬೇಕಿದೆ ಎಂದು ಹೇಳಿದರು. ಸದ್ಯ ದಾವಣಗೆರೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಆದರೆ ಯಾರೂ ಭಯ ಪಡಬೇಕಾಗಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಿಎಚ್ಒ ಡಾ.ರಾಘವೇಂದ್ರಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಜಿಲ್ಲಾ ಶಸ್ತ್ರಚಿತ್ಸಕ ಸುಭಾಷ್ ಚಂದ್ರ ಇದ್ದರು.