ದಾವಣಗೆೆರೆ, ಮೇ 18-ಕೊರೊನಾ ವೈರಸ್ ಕಾರಣ ಆಗಿರುವ ಲಾಕ್ ಡೌನ್ ಪರಿಣಾಮ ಸಂಕಷ್ಟಕ್ಕೊಳಗಾಗಿರುವ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ನೆರವು ನೀಡುವಂತೆ ಒತ್ತಾಯಿಸಿ ಹಾಗೂ ಸರ್ಕಾರದ ಜಾಹೀರಾತುಗಳನ್ನು ಸಣ್ಣ ಪತ್ರಿಕೆಗಳಿಗೆ ನೀಡುವಲ್ಲಿ ತಾರತಮ್ಯ ನೀತಿಯನ್ನು ಅನುಸರಿಸು ತ್ತಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಇಂದಿಲ್ಲಿ ಪತ್ರಕರ್ತರು ಮೌನ ಪ್ರತಿಭಟನೆ ನಡೆಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ದಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಲಿಖಿತ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಲಾಕ್ ಡೌನ್ ನಿಂದಾಗಿ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದರೆ, ಮತ್ತೊಂದೆಡೆ ಪತ್ರಕರ್ತರ ದೈನಂದಿನ ಬದುಕು ಆರ್ಥಿಕ ಸಂಕಷ್ಟದಿಂದ ನಲುಗಿ ಹೋಗಿದೆ. ಹಲವು ಸಂಸ್ಥೆಗಳಲ್ಲಿ ಸಕಾಲದಲ್ಲಿ ಸಂಬಳವನ್ನು ನೀಡಲಾಗದ ಕಾರಣ, ಪತ್ರಕರ್ತರ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ವಿಶೇಷ ಪ್ಯಾಕೇಜ್ ಮೂಲಕ ಕನಿಷ್ಠ 10 ಸಾವಿರ ರೂ.ಗಳನ್ನು ತಾತ್ಕಾಲಿಕವಾಗಿ ನೆರವು ನೀಡಬೇಕು ಎಂದು ಸರ್ಕಾರಕ್ಕೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ವೀರಪ್ಪ ಎಂ. ಬಾವಿ ಅವರು, ಜಾಹೀ ರಾತು, ಮಾಧ್ಯಮಗಳಿಗೆ ಮೂಲ ಆರ್ಥಿಕ ನೆಲೆ ಯಾಗಿದೆ. ಕಳೆದೊಂದು ವರ್ಷದಿಂದ 50 ಕೋಟಿ ರೂ.ಗಳಿಗೂ ಹೆಚ್ಚು ಜಾಹೀರಾತು ಬಾಕಿ ಉಳಿದಿದ್ದು, ತೀವ್ರ ಸಮಸ್ಯೆ ಎದುರಿಸುವಂತಾಗಿದೆ ಎಂದರು.
ಗುಜರಾತ್ ರಾಜ್ಯ ಸರ್ಕಾರ ಬಾಕಿ ಇದ್ದ ಸರ್ಕಾರಿ ಜಾಹೀರಾತು ಬಿಲ್ ಮೊತ್ತವನ್ನು ಪೂರ್ಣ ಬಿಡುಗಡೆ ಮಾಡುವ ಮೂಲಕ ಮಾಧ್ಯಮಗಳಿಗೆ ವಿಶೇಷ ಪ್ಯಾಕೇಜ್ ರೂಪ ದಲ್ಲಿ ನೆರವು ನೀಡಿ ಸಹಕರಿಸಲಾಗಿದೆ. ರಾಜ್ಯದ ಲ್ಲಿಯೂ ಇದೇ ಮಾದರಿಯಲ್ಲಿ ಪ್ಯಾಕೇಜ್ ರೀತಿಯಲ್ಲಿ ಕೂಡಲೇ ಜಾಹೀರಾತು ಬಾಕಿ ಮೊತ್ತ ಬಿಡುಗಡೆ ಮಾಡಬೇಕು ಹಾಗೂ ಸಣ್ಣ ಮತ್ತು ದೊಡ್ಡ ಪತ್ರಿಕೆ ಎಂದು ತಾರತಮ್ಯ ಮಾಡದೇ ಜಾಹೀರಾತು ಬಿಡುಗಡೆ ಮಾಡಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸಂಘದ ರಾಜ್ಯ ಪ್ರತಿನಿಧಿ ಕೆ. ಚಂದ್ರಣ್ಣ ಅವರೂ ಕೂಡ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಇ.ಎಂ.ಮಂಜುನಾಥ ಮನವಿ ಪತ್ರವನ್ನು ಓದಿದರು. ಖಜಾಂಚಿ ಮಾಗನೂರು ಮಂಜಪ್ಪ ಸ್ವಾಗತಿಸಿದರು. ನಿರ್ದೇಶಕ ಎಲ್. ವಿವೇಕಾನಂದ ಬದ್ದಿ ವಂದಿಸಿದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮತ್ತು ಜಿಲ್ಲಾ ವಾರ್ತಾ ಇಲಾಖೆ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕೆ. ಅಶೋಕ್ ಕುಮಾರ್ ಅವರುಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
`ಮಲ್ನಾಡವಾಣಿ’ ಸಂಪಾದಕ ಕೆ. ಏಕಾಂತಪ್ಪ, `ಜಿಲ್ಲೆ ಸಮಾಚಾರ’ ಉಪ ಸಂಪಾದಕ ವೆಂಕಟೇಶ್, `ಇಂದಿನ ಸುದ್ದಿ’ ಸಹ ಸಂಪಾದಕ ವಿ.ಬಿ. ಅನಿಲ್ಕುಮಾರ್, `ಇಮೇಜ್’ ಸಂಪಾದಕ ಎ. ಫಕೃದ್ದೀನ್, `ದಾವಣಗೆರೆ ಟೈಮ್ಸ್’ ಸಂಪಾದಕ ಜೆ.ಎಸ್. ವೀರೇಶ್, `ಸುಭಾಷಿತ’ ಸಂಪಾದಕ ಡಾ. ಕೆ. ಜೈಮುನಿ, `ನಮ್ಮ ಗುರಿ’ ಸಂಪಾದಕ ಜಿ.ಎಂ. ಮಂಜುನಾಥ್, `ಜನ ಸ್ಪಂದನ’ ಸಂಪಾದಕ ಕೆ. ಉಮೇಶ್, `ವಿಸ್ಮಯವಾಣಿ’ ಸಂಪಾದಕ ಜಿ. ವಾಸುದೇವ, `ದಾವಣಗೆರೆ ಕನ್ನಡಿಗ’ ಸಂಪಾ ದಕ ರವಿ, `ಹರಿಹರ ನಗರವಾಣಿ’ ಸಂಪಾದಕ ಸುರೇಶ್ ಕುಣೆಬೆಳಕೆರೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.