ಗ್ರಾ.ಪಂ.ಗಳಿಗೆ ಆಡಳಿತ ಸಮಿತಿ ನೇಮಕ ಬೇಡ : ಜಿಗಳಿ ಗ್ರಾ.ಪಂ. ಹಕ್ಕೊತ್ತಾಯ

ಮಲೇಬೆನ್ನೂರು, ಮೇ 17- ಕೋವಿಡ್‌-19ರ ಹಿನ್ನೆಲೆಯಲ್ಲಿ ಗ್ರಾ.ಪಂ. ಚುನಾವಣೆಗಳನ್ನು ಮುಂದೂಡಿರುವುದು ಅನಿವಾರ್ಯವಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಗ್ರಾ.ಪಂ.ಗಳಿಗೆ ಆಡಳಿತಾಧಿಕಾರಿ ಅಥವಾ ಆಡಳಿತ ಸಮಿತಿ ನೇಮಕ ಮಾಡುವ ಬದಲು ಈಗಿರುವ ಸದಸ್ಯರನ್ನೇ ಮುಂದುವರೆಸಬೇಕು ಎಂದು ಜಿಗಳಿ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಹಕ್ಕೊತ್ತಾಯ ಮಾಡಲಾಗಿದೆ.
ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿ ಗಳು ಸರ್ಕಾರದ ರಥದ ಎರಡು ಗಾಲಿಗಳಿದ್ದಂತೆ. ಸರ್ಕಾರದ ರಥ ಮುನ್ನಡೆಸುವಲ್ಲಿ ಇಬ್ಬರ ಪಾತ್ರವೂ ಪ್ರಮುಖವಾಗಿದೆ. ಗ್ರಾ.ಪಂ. ಸ್ಥಳೀಯ ಸ್ವಯಂ ಸರ್ಕಾರ ಇದ್ದಂತೆ. ಹೀಗಾಗಿಯೇ ಕೋವಿಡ್‌-19ರ ಪರಿಸ್ಥಿತಿ ಘೋಷಣೆಯ ನಂತರ ಮೊಟ್ಟ ಮೊದಲಿಗೆ ಸರ್ಕಾರ ಗ್ರಾ.ಪಂ. ಮಟ್ಟದಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು, ಸ್ವಯಂ ಸೇವಕರು ಹಾಗೂ ಗ್ರಾ.ಪಂ. ಸ್ಥಳೀಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ನೇತೃತ್ವದಲ್ಲಿ ಕೊರೊನಾ ಟಾಸ್ಕ್‌ ಫೋರ್ಸ್‌ ರಚನೆ ಮಾಡಿ, ಸೋಂಕು ಹರಡದಂತೆ ನೋಡಿಕೊಳ್ಳುವ ಜವಾಬ್ದಾರಿ ನೀಡಿತು.
ನಾವು ಸಹ ಪರಿಣಾಮಕಾರಿಯಾಗಿ ಕೆಲಸ ಮಾಡಿ, ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಸೋಂಕು ಹರಡದಂತೆ ನಿಗಾವಹಿಸಿದ್ದೇವೆ. ಇಂತಹ ತುರ್ತು ಪರಿಸ್ಥಿತಿಯಲ್ಲಿ ಸರ್ಕಾರ ನಮ್ಮನ್ನು ಬಿಟ್ಟು, ಆಡಳಿತ ಸಮಿತಿಯನ್ನು ನಾಮ ನಿರ್ದೇಶನ ಮಾಡುವುದು ಸೂಕ್ತವಲ್ಲ ಎಂದು ಗ್ರಾ.ಪಂ. ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.
ಜನರಿಂದ ಚುನಾಯಿತರಾದ ನಾವು ಸ್ಥಳೀಯ ಸರ್ಕಾರದ ಭಾಗವಾಗಿ ನಮ್ಮ ಗ್ರಾಮದ ಜನರಿಗೆ ಹಾಗೂ ಗ್ರಾಮದ ಅಭಿವೃದ್ಧಿಗೆ ಬದ್ಧರಾಗಿ ಕೆಲಸ ಮಾಡಿದ್ದೇವೆ. ಸರ್ಕಾರ ಗ್ರಾ.ಪಂ. ಚುನಾವಣೆ ಘೋಷಣೆ ಮಾಡುವವರಿಗೂ ನಮ್ಮನ್ನೇ ಮುಂದುವರೆಸಿದರೆ ಎಲ್ಲಾ ದೃಷ್ಟಿಯಿಂದಲೂ ಸೂಕ್ತವಾಗಿರುತ್ತದೆ ಎಂದು ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಜಿಗಳಿ ಗ್ರಾ.ಪಂ. ಅಧ್ಯಕ್ಷ ಬಿ.ಕೆ. ಮಹೇಶ್ವರಪ್ಪ, ಉಪಾಧ್ಯಕ್ಷೆ ಪದ್ದಮ್ಮ ಮಂಜಪ್ಪ, ಸದಸ್ಯರಾದ ಬಿ.ಎಂ. ದೇವೇಂದ್ರಪ್ಪ, ಎಂ.ವಿ. ನಾಗರಾಜ್‌, ಡಿ.ಎಂ. ಹರೀಶ್‌, ಎ.ಕೆ. ಅಡಿವೇಶ್‌, ಸೌಮ್ಯ ಮಂಜುನಾಥ್‌, ವನಜಾಕ್ಷಮ್ಮ, ಅಕ್ಕಮ್ಮ, ಗೀತಮ್ಮ, ರತ್ನಮ್ಮ ಸೇರಿದಂತೆ ಬಹುತೇಕ ಸದಸ್ಯರು ಸಾಮಾನ್ಯ ಸಭೆಯಲ್ಲಿ ಹಾಜರಿದ್ದರು.

error: Content is protected !!