ಲಾಕ್‌ಡೌನ್‌ನಿಂದಾಗಿ ಮನೆ ಆಹಾರ-ಆರೋಗ್ಯ ಅಪಾರ

ಹೆಚ್‌.ಬಿ. ಮಂಜುನಾಥ, ಹಿರಿಯ ಪತ್ರಕರ್ತ
_________________________________________________________________________________________________________

`ಲಾಕ್‌ಡೌನ್‌ನಲ್ಲಿ ಗಳಿಸಿದ್ದೇನು?’ ಎಂಬ ಲೇಖನ ಮಾಲೆಯಲ್ಲಿ ಈ ಹಿಂದೆ ವಾಯು ಗುಣಮಟ್ಟ ಸೂಚ್ಯಂಕ, ಶುದ್ಧಗಾಳಿ ಪಡೆಯು ವಂತಾದ ಬಗ್ಗೆ ಮೊದಲ ಲೇಖನದಲ್ಲೂ, ಶಬ್ಧ ಮಾಲಿನ್ಯ ಕಡಿಮೆಯಾದ ಬಗ್ಗೆ ಎರಡನೇ ಲೇಖನದಲ್ಲೂ ಬರೆದಿದ್ದೆ. ಇದೀಗ ಆಹಾರ ಸಂಬಂಧವಾಗಿ ಪ್ರಸ್ತಾಪಿಸುತ್ತಿದ್ದೇನೆ.
ಪ್ರಾಣಕ್ಕಾಗಿ, ಚೈತನ್ಯಕ್ಕಾಗಿ, ಆರೋಗ್ಯ ಕ್ಕಾಗಿ ಜೀವಿಗಳಿಗೆ ಆಹಾರ ಬೇಕೇ ಬೇಕು. ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಎಪ್ಪತ್ತರ ದಶಕದ ಮಧ್ಯಭಾಗದವರೆಗೂ ಅಂದರೆ 1964-65 ನೇ ಇಸವಿ ಸುಮಾರಿನವರೆಗೂ ಆಹಾರ ಧಾನ್ಯಗಳ ಕೊರತೆ ಇತ್ತು.
ಕೀರ್ತಿಶೇಷ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರೀಯವರ `ಜೈ ಕಿಸಾನ್’ ಘೋಷಣೆಯ ತರುವಾಯ ನಡೆದ ಕೃಷಿ ರಂಗದಲ್ಲಿನ ಕ್ರಾಂತಿಯಿಂದಾಗಿ ಭಾರತವೀಗ ಆಹಾರೋತ್ಪಾದನೆಯಲ್ಲಿ ಸ್ವಾವ ಲಂಬಿಯಾಗಿರುವುದಷ್ಟೇ ಅಲ್ಲ ಪರದೇಶ ಗಳಿಗೂ ರಫ್ತು ಮಾಡುವಷ್ಟು ಉತ್ಪಾದಿಸುತ್ತಿದೆ. ವಾರ್ಷಿಕ 28 ಕೋಟಿ ಟನ್‌ಗಳಷ್ಟು ಆಹಾರ ಧಾನ್ಯಗಳನ್ನು (ಹಣ್ಣು ತರಕಾರಿ, ಮಾಂಸ ಇತ್ಯಾದಿ ಹೊರತುಪಡಿಸಿ) ವಾರ್ಷಿಕವಾಗಿ ನಾವೀಗ ಉತ್ಪಾದಿಸುತ್ತಿದ್ದೇವೆ. ಇದು ಹೆಮ್ಮೆ ಪಡುವ ವಿಷಯವಾದರೆ ಉತ್ಪಾದಿತ ಆಹಾರದಲ್ಲಿ ದೊಡ್ಡ ಪ್ರಮಾಣದಷ್ಟು ವ್ಯರ್ಥ ಮಾಡುತ್ತಿದ್ದೇವೆ. ಇದೆಲ್ಲಾ ತ್ಯಾಜ್ಯ ಸೇರುತ್ತಿದೆ.
ಪ್ರತಿನಿತ್ಯ ನಮ್ಮ ದೇಶದಲ್ಲಿ 244 ಕೋಟಿ ರೂಪಾಯಿಯಷ್ಟು ಆಹಾರ ವ್ಯರ್ಥವಾಗುತ್ತಿದ್ದು ಇದರ ಮೊತ್ತ ವರ್ಷವೊಂದಕ್ಕೆ ಸುಮಾರು ಒಂದು ಲಕ್ಷ ಕೋಟಿ ರೂಪಾಯಿಯಷ್ಟು ಆಹಾರ ವ್ಯರ್ಥವಾಗುತ್ತಿದ್ದು, ಇದರಲ್ಲಿ ಸಿದ್ಧ ಪಡಿಸಿದ ಆಹಾರ ಪದಾರ್ಥಗಳ ವ್ಯರ್ಥದ ಪ್ರಮಾಣವೂ ದೊಡ್ಡದಾಗೇ ಇದೆ.
ಹೀಗೆ ವ್ಯರ್ಥವಾಗುವ ಆಹಾರವು ಮನೆಗಳಿಗಿಂತಾ ಹೋಟೆಲ್‌ ಹಾಗೂ ಕಲ್ಯಾಣ ಮಂಟಪಗಳಿಂ ದಲೇ ಹೆಚ್ಚಿದ್ದು ಇದರಲ್ಲೂ ಹೋಟೆಲ್‌ ಗಳಿಗಿಂತಾ ಕಲ್ಯಾಣ ಮಂಟಪಗಳಿಂದ ಹೊರಬೀಳುವ ವ್ಯರ್ಥವೇ ಹೆಚ್ಚು.
ಉದಾಹರಣೆಗೆ ಹೇಳಬೇಕೆಂದರೆ ಯುವ ವಿಜ್ಞಾನಿಗಳ ತಂಡವೊಂದು ಬೆಂಗಳೂರಿನ ಕಲ್ಯಾಣ ಮಂಟಪಗಳಲ್ಲಿ ನಡೆಸಿದ ಸಮೀಕ್ಷೆ ಯಿಂದ ತಿಳಿದು ಬಂದದ್ದು ಕೇವಲ ಬೆಂಗ ಳೂರು ನಗರವೊಂದರಲ್ಲಿನ ಕಲ್ಯಾಣ ಮಂಟಪ ಗಳಲ್ಲಿ ಪ್ರತಿವರ್ಷ ಸುಮಾರು 943 ಟನ್‌ ನಷ್ಟು ಆಹಾರ ವ್ಯರ್ಥವಾಗಿ ತಿಪ್ಪೆ ಸೇರುತ್ತಿದ್ದು, ಇದರ ಮೌಲ್ಯ ಸುಮಾರು 333 ಕೋಟಿ ರೂಪಾಯಿಗಳಷ್ಟಾಗುತ್ತಿದ್ದು, ಇದು ಬರೀ ಆರ್ಥಿಕ ನಷ್ಟವಷ್ಟೇ ಅಲ್ಲ ಹೀಗೆ ತಿಪ್ಪೆ ಸೇರುವ ಆಹಾರ ಪದಾರ್ಥಗಳು ಕೊಳೆತು ಅಪಾಯ ಕಾರಿ ಮಿಥೇನ್ ಅನಿಲವಾಗಿ ವಾತಾವರಣದ ಉಷ್ಣಾಂಶವನ್ನು ಹೆಚ್ಚಿಸುತ್ತಿದೆ.
ಬೆಂಗಳೂರಲ್ಲೇ ಇಷ್ಟಾದರೆ ಇನ್ನು ಇಡೀ ದೇಶದ ಕಲ್ಯಾಣ ಮಂಟಪಗಳಲ್ಲಾಗುವ ಆಹಾರ ವ್ಯರ್ಥದ ಪ್ರಮಾಣ ಗಾಬರಿ ಹುಟ್ಟಿಸುತ್ತದೆ.
ಕೊರೊನಾ ಲಾಕ್‌ಡೌನ್‌ನಿಂದಾಗಿ ಮದುವೆ, ಮುಂಜಿ ಮುಂತಾದ ಸಮಾರಂಭಗಳು ಸದ್ಯಕ್ಕೆ ರದ್ದಾಗಿದ್ದರಿಂದ ದೊಡ್ಡ ಮೊತ್ತದ ಆಹಾರ ವ್ಯರ್ಥ ಇಲ್ಲವಾಗಿದೆ. ಸಮಾರಂಭಗಳು ರದ್ದಾಗಿದ್ದರಿಂದ ಅನೇಕ ಉದ್ಯೋಗಿಗಳಿಗೆ ನಷ್ಟವಾಗಿದೆ. ಇದು ಸುಳ್ಳಲ್ಲ, ಆದರೂ ವ್ಯರ್ಥವಾಗುತ್ತಿದ್ದ ದೊಡ್ಡ ಪ್ರಮಾಣದ ಆಹಾರ ಉಳಿತಾಯವಾಗಿದ್ದು, ಅಷ್ಟೇ ಪ್ರಮಾಣದ ಪ್ಲಾಸ್ಟಿಕ್‌ ಬಾಟಲ್‌ ಮುಂತಾದ ತ್ಯಾಜ್ಯ ತಪ್ಪಿದ್ದು ಲಾಕ್‌ಡೌನ್‌ನ ಸಕಾರಾತ್ಮಕ ಪರಿಣಾಮವಲ್ಲವೇ?
ರುಚಿ ಅಂತಲೋ, ಸೋವಿ ಅಂತಲೋ ರಸ್ತೆ ಬದಿಯ ಆಹಾರ ತಿಂಡಿಗಳು, ಕರಿದ ತಿಂಡಿಗಳನ್ನು ನಿತ್ಯವೂ ತಿನ್ನುತ್ತಿದ್ದವರು ಅಂತಹ ಆಹಾರ, ತಿಂಡಿ ತಿನಿಸುಗಳಲ್ಲಿ ಅಪಾಯಕಾರಿ ಅಜಿನೋ ಮೋಟೋದಂತಹ ಕೃತಕ ರುಚಿಕಾರಕ ರಾಸಾಯನಿಕಗಳ ಬಳಕೆಯಾಗು ತ್ತಿದ್ದು, ರೀಸೈಕಲ್ಡ್‌ ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ತಿಂದು ಆರೋಗ್ಯ ಕೆಡುತ್ತಿದ್ದುದು ಲಾಕ್‌ಡೌನ್‌ನಿಂದಾಗಿ ತಪ್ಪಿದ್ದು ಮನೆ ತಿಂಡಿ, ಮನೆ ಊಟ ತಿನ್ನುತ್ತಾ ಆರೋಗ್ಯ ಸುಧಾರಿಸಿದೆ. ಅಂದಾಕ್ಷಣ ಲಾಕ್‌ಡೌನ್‌ ಶಾಶ್ವತವಾಗಲಿ ಎಂದು ನನ್ನ ಅಭಿಪ್ರಾಯವಲ್ಲ. ಇದರಿಂದ ಗಳಿಸಿದ್ದೇನು ಎಂಬುದನ್ನು ತಿಳಿಸುವುದಷ್ಟೇ.
ಮುಂದಿನ ಲೇಖನದಲ್ಲಿ ಪೆಟ್ರೋಲ್‌, ಇಂಧನ ಉಳಿತಾಯದ ಬಗ್ಗೆ ಹೇಳುವೆ…

error: Content is protected !!