ಆಹಾರ ಸಿಗದ ಹಿನ್ನೆಲೆ ಬೀದಿಗಿಳಿದು ಹೋರಾಟ
ದಾವಣಗೆರೆ, ಮೇ 17- ಕೊರೊನಾ ವೈರಸ್ ನಿಂದ ಸಾಯುವುದು ಒಂದೆಡೆಯಾದರೆ, ಇನ್ನೊಂದೆಡೆ ಆಹಾರ ಇಲ್ಲದೆ ಸಾಯುತ್ತಿದ್ದೇವೆ. ಹಾಗಾಗಿ ಸೀಲ್ ಡೌನ್ ತೆರವುಗೊಳಿಸುಂತೆ ಆಗ್ರಹಿಸಿ ನಗರದ ಹೊಂಡದ ವೃತ್ತದ ಬಳಿ ಜಾಲಿ ನಗರದ ನಿವಾಸಿಗಳು ಇಂದು ಪ್ರತಿಭಟನೆ ನಡೆಸಿದರು.
ನಮಗೆ ಅಗತ್ಯ ವಸ್ತುಗಳು ಸಿಗುತ್ತಿಲ್ಲ. ನಮ್ಮ ಕಷ್ಟ ಕೇಳುವರು ಯಾರೂ ಇಲ್ಲ. ನಮಗೆ ತರಕಾರಿಯಲ್ಲಿ ಸ್ವಲ್ಪ ವಿಷ ಕೊಟ್ಟು ಸಾಯಿಸಿ. ಈ ರೀತಿ ಸೀಲ್ ಡೌನ್ ಮಾಡಿ ತಿನ್ನುವುದಕ್ಕೆ ಆಹಾರ ನೀಡದೆ ಸಾಯಿಸುತ್ತೀರಿ ಎಂದು ಮಹಿಳೆಯರು ಕಣ್ಣೀರು ಹಾಕಿದರು.
ಪ್ರತಿಭಟಗಿಳಿದ ನಿವಾಸಿಗಳನ್ನು ಸಮಾಧಾನ ಪಡಿಸಲು ಪೊಲೀಸರು ಒಂದು ತಾಸು ಹರಸಾಹಸ ಪಟ್ಟರು. ಸಮಾಧನ ಹೇಳಲು ಬಂದ ಪೊಲೀಸರ ವಿರುದ್ಧವೇ ಇಲ್ಲಿನ ನಿವಾಸಿಗಳು ವಾಗ್ವಾದಕ್ಕೆ ಇಳಿದಿದ್ದರು. ಯಾರು ಹೊರ ಬರದಂತೆ ಬ್ಯಾರಿಕೇಡ್ ಹಾಕಿದ್ದರೂ ಬ್ಯಾರಿಕೇಡ್ ಒಳಗಡೆ ಗುಂಪಾಗಿ ಒಂದೆಡೆ ಸೇರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಂಡಿರಲ್ಲಿಲ್ಲ.
ಜಾಲಿ ನಗರದಲ್ಲಿ ಅತಿ ಹೆಚ್ಚು ಕೊರೊನಾ ವೈರಸ್ ಪ್ರಕರಣ ದಾಖಲು ಹಿನ್ನೆಲೆಯಲ್ಲಿ ಇಡೀ ಜಾಲಿನಗರ ಸಂಪೂರ್ಣ ಸೀಲ್ ಡೌನ್ ಆಗಿದೆ. ಏ. 29ವರೆಗೆ ಗ್ರೀನ್ ಝೋನ್ ನಲ್ಲಿದ್ದ ದಾವಣಗೆರೆಯಲ್ಲಿ ಒಂದೇ ದಿನ ಬಾಷಾನಗರ ಮತ್ತು ಜಾಲಿನಗರದಲ್ಲಿ ಕೊರೊನಾ ಕೇಸ್ ಪತ್ತೆಯಾಗುವ ಮೂಲಕ ದಾವಣಗೆರೆ ರೆಡ್ ಝೋನ್ ಹಂತಕ್ಕೆ ಬಂದು ನಿಂತಿದೆ.
ಇವರೆಗೆ ದಾವಣಗೆರೆಯಲ್ಲಿ ಬರೋಬ್ಬರಿ 89 ಕೊರೊನಾ ಪ್ರಕರಣ ಪತ್ತೆಯಾಗಿವೆ. ಅದರಲ್ಲೂ ಜಾಲಿನಗರದಲ್ಲಿಯೇ 50ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
ಒಂದು ರೀತಿಯಲ್ಲಿ ಜಾಲಿನಗರ ದಾವಣಗೆರೆಯ ಕೊರೊನಾ ಹಾಟ್ ಸ್ಪಾಟ್ ಆಗಿದೆ. ಆದರೆ, ಇಲ್ಲಿನ ಜನರು ಸೀಲ್ ಡೌನ್ ನಿಂದ ತತ್ತರಿಸಿ ಹೋಗಿದ್ದಾರೆ.