ಪ್ರಪಂಚದಾದ್ಯಂತ ಜನಜೀವನವನ್ನು ಅಸ್ತವ್ಯಸ್ತ ಗೊಳಿಸಿ, ದೇಶಗಳ ಆರ್ಥಿಕ ಪರಿಸ್ಥಿತಿಯನ್ನು ಬುಡಮೇಲು ಮಾಡಿರುವ ಕೊರೊನಾ ಎಂಬ ಕಣ್ಣಿಗೆ ಕಾಣದ ವೈರಾಣು ಮಹಾಮಾರಿ, ಹೆಮ್ಮಾರಿ ಎಂಬ ನಾಮಾಂಕಿತ ದಿಂದ ಕರೆಯಲ್ಪಡುತ್ತದೆ. ಪ್ರಪಂಚದಾದ್ಯಂತ ಆರ್ಥಿಕ, ಸಾಮಾಜಿಕ, ಆರೋಗ್ಯ ಎಲ್ಲ ಆಯಾಮಗಳಲ್ಲೂ ಅತ್ಯಂತ ಪ್ರಬಲರಾಗಿ ತಮಗೆ ಯಾರೂ ಏನೂ ಮಾಡಲಾಗದು ಎಂದು ಬೀಗುತ್ತಿದ್ದವರಿಂದ ಹಿಡಿದು, ಅತ್ಯಂತ ಅಸಹಾಯಕ ಅಬಲರವರೆಗೆ ಪ್ರತಿಯೊಬ್ಬರೂ ಭಯಭೀತರಾಗಿ ತಲ್ಲಣಿಸುವಂತೆ ಮಾಡಿ, ಮನೆಯಲ್ಲೇ ಮೂಲೆ ಹಿಡಿದು ಕೂರುವಂತೆ ಮಾಡಿದೆ ಈ ಕೊರೊನಾ.
ಇಂತಹ ಸನ್ನವೇಶದಲ್ಲಿ ಅನಾವಶ್ಯಕವಾಗಿ ವಾಹನಗಳಲ್ಲಿ ಬೀದಿ ಬೀದಿ ಸುತ್ತಿ ಪೆಟ್ರೋಲ್ ಸುಟ್ಟು, ವಾಹನ ದಟ್ಟಣೆಗೆ ಇಂಬು ನೀಡುತ್ತಿದ್ದವರು, ಹಬ್ಬ, ಹರಿದಿನಗಳನ್ನೂ ಲೆಕ್ಕಿಸದೆ ದಿನ ದಿನವೂ ಒಂದೊಂದು ಹೋಟೆಲ್‌ಗಳಲ್ಲಿ ಭೋಜನ ಸವಿಯುವುದೇ ಪ್ರತಿಷ್ಠೆ ಎಂದು ಭಾವಿಸಿದ್ದವರು ಹಾಗೂ ಸಂಜೆಯಾಗುತ್ತಲೇ ಪಾನಿ ಪೂರಿ, ಪಿಜ್ಜಾ ಬರ್ಗರ್, ಪಾವ್ ಭಾಜಿ, ಗೋಲ್ ಗೊಪ್ಪ ಇನ್ನಿತರೆ ಹಾಳು ಮೂಳು ತಿನಿಸು ತಿನ್ನಲು ಗಂಡು, ಹೆಣ್ಣು, ಮಕ್ಕಳೆಂಬ ಭೇದವಿಲ್ಲದೆ ಬೀದಿ ಬದಿಯಲ್ಲಿ ದಾಂಗುಡಿಯಿಡುತ್ತಿದ್ದವರನ್ನು ದಂಗು ಬಡಿಸಿದೆ ಈ ಕೊರೊನಾ.
ಇತ್ತೀಚೆಗೆ ಸರಳತೆ ಎಂಬ ಪದ ಜನರ ಸ್ಮೃತಿಪಟಲದಿಂದ ದೂರ ಸರಿದಿದ್ದು, ಮಠ-ಮಾನ್ಯಗಳ ಮಠಾಧೀಶರುಗಳು, ಸಾಮಾಜಿಕ ಚಿಂತಕರು, ಅನುಭವಿ ಹಿರಿಯರು ಸರಳತೆ ಬಗ್ಗೆ ಎಷ್ಟೇ ಹೇಳಿದರೂ ಕೇಳದ ಜನ ಆಡಂಬರಕ್ಕೆ ಮಾರುಹೋಗಿ ಆಚರಿಸುತ್ತಿದ್ದ ನಿಶ್ಚಿತಾರ್ಥ, ಮದುವೆ, ತೊಟ್ಟಿಲು, ನಾಮ ಕರಣ, ವಿವಾಹ ಮಹೋತ್ಸವ, ಹುಟ್ಟು ಹಬ್ಬ ಇನ್ನಿತರೆ ಹತ್ತು, ಹಲವಾರು ಕಾರ್ಯಕ್ರಮಗಳು ತಂತಾನೆ ಮುಂದೂಡಲ್ಪಡುತ್ತಿವೆ ಅಥವಾ ಅತ್ಯಂತ ಸರಳವಾಗಿ ಆಚರಿಸಲ್ಪಡುತ್ತಿವೆ.
ಪರಿಣಾಮ, ಪರಿಸರದ ಒಡಲು ಸೇರುತ್ತಿದ್ದ ಲಕ್ಷಾಂತರ ನೀರಿನ ಬಾಟಲ್, ತಟ್ಟೆ, ಲೋಟ, ಪೇಪರ್ ರೋಲ್ ಇನ್ನಿತರೆ ಸಾಮಗ್ರಿಗಳು ಪರಿಸರ ಕಲುಷಿತಗೊಳಿಸುವ ಕ್ರಿಯೆಯಿಂದ ಹಿಂದೆ ಸರಿದು, ಪರಿಸರ ಪರಿಶುದ್ಧವಾಗುವಂತಾಗಿದೆ. ಇದರ ನಡುವೆ ವಾಹನಗಳಿಂದ ಬಿಡುಗಡೆಯಾಗುತ್ತಿದ್ದ ಕಪ್ಪು ಕಾರ್ಬನ್ ಕಡಿಮೆಯಾಗಿ, ಗಿಡ, ಮರಗಳು ಹಚ್ಚ ಹಸಿರಿನಿಂದ ಕಂಗೊಳಸುತ್ತಿದ್ದು, ಸ್ವಚ್ಛ ಗಾಳಿ ಬಿಡುಗಡೆಯಾಗುತ್ತಿದೆ. ಪರಿಶುದ್ಧವಾಗಿ ಹರಿಯು ತ್ತಿರುವ ಉತ್ತರದ ಗಂಗೆ, ಯಮುನೆ ಮತ್ತು ನಮ್ಮಲ್ಲಿಯ ತುಂಗೆ, ಭದ್ರೆ ಎಲ್ಲವೂ ಶುಭ್ರವಾಗಿ ತಮ್ಮ ಮೂಲ ಸ್ವರೂಪವನ್ನು ಪಡೆದು ಮೈದುಂಬಿ ಹರಿಯುತ್ತಿವೆ. ಕೈಗಾರಿಕೆ ಗಳು, ವಾಹನಗಳು ಉಗುಳುತ್ತಿದ್ದ ದಟ್ಟ ಹೊಗೆ ಮತ್ತು ಧೂಳಿನ ಕಣಗಳಿಂದ ಕಲುಷಿತಗೊಂ ಡಿದ್ದ ಪರಿಸರ ಶುಭ್ರವಾಗಿದ್ದು, ಪ್ರಖರವಾದ ಬೆಳಕು ಚೆಲ್ಲಿ ಊರ ಅಂಚಿನಿಂದ ದೂರದ ಬೆಟ್ಟ ಗುಡ್ಡಗಳು ಗೋಚರಿಸುವಂತಾಗಿದೆ.
ಇನ್ನು ಮನೆಯ ವಿಚಾರಕ್ಕೆ ಸಂಬಂಧಿಸಿ ದಂತೆ ಪತಿಯೆಂಬ ಪುರುಷ ಬೆಳಗಾಗೆದ್ದು ವಾಯು ವಿಹಾರಕ್ಕೆ ತೆರಳಿ ಸ್ನೇಹಿತರೊಡಗೂಡಿ ಹರಟೆ ಹೊಡೆದು `ಚಾ’ ಹೀರಿ ಮನೆಗೆ ಬಂದು ಮಡದಿಯ ಕೈ ಕಾಫಿಯನ್ನು ಮತ್ತೊಮ್ಮೆ ಹೀರಿ ನಿತ್ಯಕರ್ಮಗಳನ್ನು ಪೂರೈಸಿ, ಮನೆಯ ಯಾವ ಕೆಲಸ, ಕಾರ್ಯಗಳೂ ತನಗೆ ಸಂಬಂಧವೇ ಇಲ್ಲವೇನೋ ಎಂಬಂತೆ ಬೀಗುತ್ತಾ ಹೊರ ನಡಯುತ್ತಿದ್ದವನು. ಇಂದು ಮನೆಗೆಲಸದವರ ಅನುಪಸ್ಥಿತಿಯಲ್ಲಿ ಕಸ, ನೆಲ, ಬಟ್ಟೆ ತೊಳೆಯುವುದರಿಂದ ಹಿಡಿದು ಇನ್ನಿತರೆ ಸಣ್ಣ ಪುಟ್ಟ ಕೆಲಸ, ಕಾರ್ಯಗಳಲ್ಲಿ ಸತಿಗೆ ಸಹಾಯಕ ನಾಗಿ, ಸ್ವಪ್ರೇರಣೆಯಿಂದಲೋ ಅಥವಾ ಸತಿಯ ಆದೇಶ ಪಾಲಕನಾಗಿಯೋ ಕ್ರಿಯಾ ಶೀಲನಾಗಿದ್ದಾನೆ. ಇನ್ನೂ ಕೆಲವು ಮಹಾಪುರು ಷರು ಇಂದಿಗೂ ತಮ್ಮ ವೈಭೋಗದ ಜೀವನವನ್ನು ಬಿಡಲಾಗದೆ, ತಮ್ಮ ದುಶ್ಚಟಗಳ ಸರಮಾಲೆಯನ್ನು ಮನೆಯಲ್ಲಿ ಆಚರಿಸಲೂ ಆಗದೆ ಕೈ ಕೈ ಹೊಸಕಿಕೊಳ್ಳುವಂತಾಗಿದೆ.
ಇತ್ತ ಹೆಂಗಳೆಯರು ಗಂಡಸರಿಗಿಂತ ನಾವೇನು ಕಡಿಮೆ ಎಂದೋ ಅಥವಾ ಸಮಾನತೆ ಎಂದೋ ಮನೆ ಕೆಲಸದಾಕೆಗೆ ಜವಾಬ್ದಾರಿ ವಹಿಸಿ ವಾಕಿಂಗ್, ಶಾಪಿಂಗ್, ಬ್ಯೂಟಿಪಾರ್ಲರ್, ಕಿಟ್ಟಿ ಪಾರ್ಟಿ ಎಂದು ತಿರುಗುತ್ತಿದ್ದವರು ತಮ್ಮ ಕಪ್ಪನೆ ಕೂದಲನ್ನು ಬೆಳ್ಳಗಾಗಿಸಿಕೊಂಡು, ತೀಡದ ಹುಬ್ಬನ್ನು ದಪ್ಪವಾಗಿಸಿಕೊಂಡು, ತಮ್ಮ ಮೂಲ ರೂಪ ವನ್ನು ಉಳಿಸಿಕೊಂಡು, ಅಡುಗೆ ಬೇಯಿಸಿ, ಬಡಿಸುವುದರಲ್ಲಿ ತಲ್ಲೀನರಾಗಿದ್ದಾರೆ.
ಇನ್ನು ಸದಾ ಕಾಲೇಜ್ ಟ್ಯೂಷನ್‌ನ ನೆಪ ಹೇಳಿ, ಅನಾವಶ್ಯಕವಾಗಿ ವಾಹನಗಳಲ್ಲಿ ತಿರುಗುವುದು, ಬೀದಿ ಬದಿಯಲ್ಲಿ ಬಗೆ ಬಗೆಯ ತಿನಿಸು ತಿನ್ನುವುದು ಹಾಗೂ ಮೊಬೈಲ್‌ನಲ್ಲಿ ಮುಳುಗಿರುತ್ತಿದ್ದ ಮಕ್ಕಳು ಮನೆಯಲ್ಲೇ ಮಾಡಿದ್ದನ್ನು ತಿಂದು, ಸಣ್ಣ ಪುಟ್ಟ ಕೆಲಸ ಮಾಡುತ್ತಾ ಓದು ಮತ್ತು ಹಿಂದಿನ ಕಾಲದ ಆಟಗಳಾದ ಬುಗುರಿ, ಲಗೋರಿ, ಕುಂಟಪಿಲ್ಲೆ, ಕವಡೆ, ಕೇರಂ, ಚೆಸ್ ಮುಂತಾದ ಆಟಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಜಗತ್ತಿನಲ್ಲಿ ಸೃಷ್ಟಿಕರ್ತನ ಆಜ್ಞೆಯ ಪ್ರಕಾ ರವೇ ಎಲ್ಲಾ ಘಟನೆಗಳು ನಡೆಯುತ್ತಿದ್ದರೂ ಸಹ, ಇಂದಿನ ಸನ್ನಿವೇಶದಲ್ಲಿ, ಮನುಷ್ಯನ ಜೀವನದಲ್ಲಿ ಇಂತಹ ಮಹತ್ತರ ಬದಲಾವಣೆ ತರಲು ಕಣ್ಣಿಗೆ ಕಾಣದ ದೇವರಿಂದ ಸಾಧ್ಯವಾ ಗದ್ದು ವೈರಾಣುವಿನಿಂದ ಸಾಧ್ಯವಾದಂತೆ ಗೋಚರಿಸುತ್ತಿದೆ. ಮನುಷ್ಯ ದೈವತ್ವಕ್ಕಿಂತ ದೆವ್ವತ್ವಕ್ಕೇ ಹೆದರುತ್ತಾನೆಂಬುದು ಸಾಬೀತಾ ಗಿದೆ. ಒಂದು ನಾಣ್ಯಕ್ಕೆ ಎರಡು ಮುಖಗಳಿ ದ್ದಂತೆ. ಕೊರೊನಾದ ಒಂದು ಮುಖ ಕೆಲವ ರಿಗೆ ಕೆಡುಕು ಮಾಡಿ ಮಹಾಮಾರಿ ಆಗಿದ್ದರೆ, ಇನ್ನೊಂದು ಮುಖ ಇಡೀ ಪರಿಸರಕ್ಕೆ ಹಾಗೂ ಜೀವ ಜಗತ್ತಿಗೆ ಒಳಿತು ಮಾಡಿ ಸುಕುಮಾರಿ ಆಗಿದೆ.
– ಐಗೂರು ಸಿ. ಚಂದ್ರಶೇಖರ್, ದಾವಣಗೆರೆ.