ದಾವಣಗೆರೆ, ಮಾ.17- ಜಿಲ್ಲೆಯ ಹರಿಹರ ತಾಲ್ಲೂಕಿನ ಬನ್ನಿಕೋಡು ಗ್ರಾಮದಲ್ಲಿ ಕೋಳಿಗಳಿಗೆ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ಈ ಹಕ್ಕಿಜ್ವರ ರೋಗೋದ್ರೇಕ ದೃಢಪಟ್ಟ ಹಿನ್ನೆಲೆಯಲ್ಲಿ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಬನ್ನಿಕೋಡು ಗ್ರಾಮದ ಸುತ್ತಮುತ್ತ 10 ಕಿ.ಮೀ. ವ್ಯಾಪ್ತಿ ಪ್ರದೇಶಕ್ಕೆ ಅನ್ವಯಿಸುವಂತೆ ಅಗತ್ಯ ಕ್ರಮಗಳನ್ನು ತಕ್ಷಣದಿಂದ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶಿಸಿದ್ದಾರೆ.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಹಕ್ಕಿಜ್ವರ ನಿಯಂತ್ರಣದ ಕುರಿತು ಏರ್ಪಡಿಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಹಕ್ಕಿ ಜ್ವರ ನಿಯಂತ್ರಿಸಲು ಎಲ್ಲಾ ಇಲಾಖೆಗಳು ಒಟ್ಟಾಗಿ ಸಹಕರಿಸಬೇಕು ಎಂದರು.
ಬನ್ನಿಕೋಡು ಗ್ರಾಮದ ಒಂದು ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ರೋಗಪೀಡಿತ ವಲಯ ಎಂದು ಹಾಗೂ 1 ರಿಂದ 10 ಕಿ.ಮೀ ಗಳ ವ್ಯಾಪ್ತಿ ಪ್ರದೇಶವನ್ನು ಜಾಗೃತ ವಲಯ ಎಂದು ಘೋಷಿಸಿರುವುದಾಗಿ ಜಿಲ್ಲಾಧಿಕಾರಿ ಹೇಳಿದರು.
ಸೋಂಕುಪೀಡಿತ ವಲಯ 0 ರಿಂದ 1 ಕಿ.ಮೀ.ಸುತ್ತಮುತ್ತಲಿನ ಪ್ರದೇಶದಲ್ಲಿ ಎಲ್ಲಾ ಕೋಳಿಗಳನ್ನು, ಮೊಟ್ಟೆ, ಕೋಳಿ ಆಹಾರ ಇತ್ಯಾದಿಗಳನ್ನು ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳ ಸಮಕ್ಷಮದಲ್ಲಿ ನಿಯಮಾನುಸಾರ ನಾಶಪಡಿಸುವಂತೆ ಸೂಚಿಸಿ, 10 ಕಿ.ಮೀ ಸುತ್ತಮುತ್ತಲಿನ ಪ್ರದೇಶದಲ್ಲಿ ಕೋಳಿ ಸಾಗಾಣಿಕೆ ನಿಷೇಧಿಸಿರುವುದಾಗಿ ಹೇಳಿದರು.
ಬನ್ನಿಕೋಡು ಗ್ರಾಮದ 1 ಕಿ.ಮೀ ಸರ್ವೇ ಕ್ಷಣಾ ವ್ಯಾಪ್ತಿಯಲ್ಲಿ 1167 ಕೋಳಿಗಳಿದ್ದು, ಇವುಗಳನ್ನು ವೈಜ್ಞಾನಿಕ ರೀತಿಯಲ್ಲಿ ನಾಶಪ ಡಿಸಲು ಪಶುಸಂಗೋಪನೆ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ. ಹತ್ತಿರದಲ್ಲಿ ಭತ್ತದ ಗದ್ದೆಗಳಿರುವುದರಿಂದ ಹೊರಗಿನಿಂದ ಬರುವ ಕೊಕ್ಕರೆ, ಬಾತುಕೋಳಿ ಇನ್ನೂ ವಿವಿಧ ಜಾತಿಯ ಪಕ್ಷಿಗಳ ಬಗ್ಗೆ ವಹಿಸಬೇಕೆಂದರು.
- ಸೋಂಕುಪೀಡಿದ ವಲಯದ 1ಕಿ.ಮೀ. ಸುತ್ತಲಿನ ಪ್ರದೇಶದಲ್ಲಿ ಮೊಟ್ಟೆ, ಕೋಳಿ ಆಹಾರ ನಾಶಕ್ಕೆ ಸೂಚನೆ
ದೇವರಬೆಳೆಕೆರೆ ಪಿಕ್ಅಪ್ ಡ್ಯಾಂ ಬಳಿ ಬರುವ ವಲಸೆ ಹಕ್ಕಿಗಳ ಮೇಲೆ ನಿಗಾ
ಪೌಲ್ಟ್ರಿ ಫಾರಂನವರು ಸ್ವಚ್ಛತೆ ಕಾಪಾಡದಿದ್ದರೆ ಕಠಿಣ ಕ್ರಮ
24x 7 ಸಹಾಯವಾಣಿ : ಹಕ್ಕಿಜ್ವರಕ್ಕೆ ಸಂಬಂಧಿಸಿದಂತೆ ನಗರದ ಪಶುಸಂಗೋಪನೆ ಕಚೇರಿಯಲ್ಲಿ 24×7 ಸಹಾಯವಾಣಿ ತೆರೆಯಲಾಗಿದ್ದು, ಹಕ್ಕಿಜ್ವರ ನಿಯಂತ್ರಣ ಕುರಿತಾದ ಸಂದೇಹ, ಸಲಹೆಗಳು ಹಾಗೂ ಕೈಗೊಳ್ಳ ಬೇಕಾದ ಕ್ರಮಗಳ ಬಗ್ಗೆ 08192-296832ಕ್ಕೆ ಕರೆ ಮಾಡ ಬಹುದು ಎಂದು ಡಿಸಿ ತಿಳಿಸಿದ್ದಾರೆ.
ಆರೋಗ್ಯ ಇಲಾಖೆಯು ಕಿಲ್ಲಿಂಗ್ ಕಾರ್ಯ ನಿರ್ವಹಿಸಲು ರಾಪಿಡ್ ರೆಸ್ಪಾನ್ಸ್ ಟೀಂ ರಚಿಸಿ, ಟೀಮ್ನಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗಳಿಗೆ ಆರೋಗ್ಯ ತಪಾಸಣೆ ಮತ್ತು ಐಸೋಲೇಷನ್ ಸೌಲಭ್ಯವನ್ನು ಒದಗಿಸಬೇಕು. ಹಾಗೂ ಈ ತಂಡವು ಕಾರ್ಯ ನಿರ್ವಹಿಸಿದ ನಂತರ 14 ದಿನಗಳ ವರೆಗೆ ನಿಗಾವಣೆಯಲ್ಲಿ ಇಡಬೇಕು. ರಾಪಿಡ್ ರೆಸ್ಪಾನ್ಸ್ ತಂಡಕ್ಕೆ ಅಗತ್ಯವಿರುವ ಸುರಕ್ಷಾ ಸಾಮಗ್ರಿಗಳನ್ನು ಹೊಂದಿರುವ ಪಿ.ಪಿ ಕಿಟ್ಗಳ ನೆರವು ನೀಡಲಾಗುವುದು ಎಂದರು.
ಹರಿಹರ ತಾಲ್ಲೂಕಿನ ಕೆಲವು ಡಾಬಾಗಳಲ್ಲಿ ಬೇಯಿಸಿದ ಮಾಂಸವನ್ನು ಸಹ ನಾಶಪಡಿಸಬೇಕು. ಹೆಬ್ಬಾಳು ಬಳಿ ಇರುವ ಕೋಳಿ ಫಾರಂಗಳಲ್ಲಿ ಸ್ವಚ್ಚತೆ ಇಲ್ಲದೇ ನೊಣಗಳ ಹಾವಳಿ ಹೆಚ್ಚಿದ್ದು ಸುತ್ತಮುತ್ತಲ ಗ್ರಾಮಗಳಿಗೆ ನೊಣಗಳು ಕಾಡುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಿಸಿದ ಪೌಲ್ಟ್ರಿ ಫಾರಂನವರು ಶುಚಿತ್ವ ಕಾಪಾಡಬೇಕು. ಇಲ್ಲದಿದ್ದರೆ ಸಿಆರ್ಪಿಸಿ ಸೆಕ್ಷನ್ 133 ರನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವುದು ಹಾಗೂ ಪರವಾನಗಿಯನ್ನು ಕೂಡ ರದ್ದುಪಡಿಸಲಾಗುವುದು ಎಂದರು.
ದೇವರಬೆಳೆಕೆರೆ ಪಿಕ್ಅಪ್ ಡ್ಯಾಂ ಬಳಿ ಹಕ್ಕಿಗಳು ಹೆಚ್ಚಾಗಿ ವಲಸೆ ಬರುತ್ತಿದ್ದು ಅವುಗಳ ಬಗ್ಗೆಯೂ ನಿಗಾ ವಹಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಾಗೂ ಪೌಲ್ಟ್ರಿ ಫಾರಂನವರು ಒಂದು ಕೋಳಿಯನ್ನು ಸಹ ಇಟ್ಟುಕೊಳ್ಳುವ ಹಾಗಿಲ್ಲ. ಸತ್ತಿರುವ ಕೋಳಿಯನ್ನು ಎಲ್ಲೆಂದರಲ್ಲಿ ಎಸೆಯುವ ಹಾಗಿಲ್ಲ. ಹಾಗೂ ಹೊಸ ಕೋಳಿಯನ್ನೂ ಸಾಕುವಂತಿಲ್ಲ ಎಂದರು.
ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ ಮಾತನಾಡಿ, ಆರ್ಆರ್ ಟೀಮ್ಗಳಿಗೆ ಅಗತ್ಯ ಸೌಲಭ್ಯವನ್ನು ಒದಗಿಸಲಾಗುವುದು. ಮತ್ತು ಆರ್ಆರ್ ಸಿಬ್ಬಂದಿಗಳಿಗೆ ಪ್ರತ್ಯೇಕ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಮಮತಾ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಹೊಸಗೌಡರ್, ಡಿವೈಎಸ್ಪಿ ಮಂಜುನಾಥ್ ಗಂಗಲ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಡಿಹೆಚ್ಓ ಡಾ.ರಾಘವೇಂದ್ರ ಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಪಶುಸಂಗೋಪನೆ ಇಲಾಖೆ ಉಪ ನಿರ್ದೇಶಕ ಡಾ.ಭಾಸ್ಕರ್ ನಾಯಕ್, ಪಿಡಬ್ಲ್ಯುಡಿ ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ್, ಹರಿಹರ ತಹಶೀಲ್ದಾರ್ ರಾಮಚಂದ್ರಪ್ಪ, ದಾವಣಗೆರೆ ತಹಶೀಲ್ದಾರ್ ಸಂತೋಷ್ಕುಮಾರ್ ಹಾಗೂ ಇ ತರೆ ಅಧಿಕಾರಿಗಳು ಹಾಜರಿದ್ದರು.