ದಾವಣಗೆರೆ, ಮೇ 6- ಕೊರೊನಾ ಸೋಂಕು ನಿಯಂತ್ರಣದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ 5 ಕಂಟೈನ್ಮೆಂಟ್ ಝೋನ್ಗಳನ್ನು ಈಗಾಗಲೇ ಸೀಲ್ಡೌನ್ ಮಾಡಲಾಗಿದ್ದು, ಅಲ್ಲಿನ ಜನರ ಸ್ಥಿತಿಗತಿ ಪರಿಶೀಲಿಸಲು ಜಿಲ್ಲಾಡಳಿತದಿಂದ ಡ್ರೋನ್ಗಳ ಬಳಕೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ತಂಡದೊಂದಿಗೆ ಸೀಲ್ಡೌನ್ ಪ್ರದೇಶವಾದ ಜಾಲಿನಗರದಲ್ಲಿ ಡ್ರೋನ್ ಪರಿವೀಕ್ಷಣೆ ಮತ್ತು ಸರ್ವೇಕ್ಷಣಾ ತಂಡದ ತಪಾಸಣೆ ಕಾರ್ಯ ಪರಿಶೀಲಿಸಲು ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಜನರು ಗುಂಪು ಸೇರುವುದನ್ನು ನಿಯಂತ್ರಿಸಲು ಹಾಗೂ ಅವರಿಗೆ ಎಚ್ಚರಿಸಲು ಡ್ರೋನ್ ಬಳಕೆ ಮಾಡಲಾಗಿದೆ. ಜನರು ತಮ್ಮ ಮನೆಗಳಲ್ಲಿ ಇದ್ದಾರಾ ಅಥವಾ ರಸ್ತೆಯಲ್ಲಿ ಅನಾವಶ್ಯಕವಾಗಿ ಸಂಚರಿಸುತ್ತಿದ್ದಾರಾ, ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡಿರುವುದರ ಬಗ್ಗೆ ಪರಿಶೀಲಿಸಲು ಡ್ರೋನ್ ಕ್ಯಾಮೆರಾದ ಸಹಾಯ ತೆಗೆದುಕೊಂಡಿದ್ದೇವೆ ಎಂದರು.
ಅತ್ಯಂತ ಹೆಚ್ಚಿನ ರೆಸಲ್ಯೂಷನ್ ಇರುವಂತಹ ಈ ಡ್ರೋನ್ ಕ್ಯಾಮೆರಾದ ಸಹಾಯದಿಂದ ಇಲ್ಲಿಯೇ ನಿಂತು ಎಲ್ಲೆಡೆ ಏನೇನು ನಡೆಯುತ್ತಿದೆ ಎಂದು ತಿಳಿಯಬಹುದಾಗಿದೆ. ಎಲ್ಲ ರೀತಿಯ ಉನ್ನತ ಮಟ್ಟದ ತಂತ್ರಜ್ಞಾನ ಹಾಗೂ ಮಾನವ ಸಂಪನ್ಮೂಲ ಬಳಸಿಕೊಳ್ಳುವ ಮೂಲಕ ಹಾಗೂ ಜಿಲ್ಲೆಯಲ್ಲಿ ಇರುವಂತಹ ವೈದ್ಯಕೀಯ ಸೌಲಭ್ಯದೊಂದಿಗೆ ನಾವು ವ್ಯವಸ್ಥಿತವಾಗಿ ಕೊರೊನಾ ನಿಯಂತ್ರಣ ಮಾಡುತ್ತೇವೆ ಎನ್ನುವ ವಿಶ್ವಾಸ ನಮ್ಮಲಿದೆ. ಮುಂಬರುವ ದಿನಗಳಲ್ಲಿ ಈ ಕುರಿತು ಏನು ಫಲಿತಾಂಶ ಬರುತ್ತದೆ ಎನ್ನುವುದನ್ನು ಹಂಚಿಕೊಳ್ಳುತ್ತೇನೆ ಎಂದರು.
ನಿನ್ನೆ 12 ಪಾಸಿಟಿವ್ ಕೇಸ್ ಬಂದಿದೆ. ಅದರಲ್ಲಿ ಹೆಚ್ಚಿನವು ಜಾಲಿನಗರಕ್ಕೆ ಸಂಬಂಧಪಟ್ಟಿವೆ. ಇನ್ನೊಂದು ಪ್ರಕರಣ ಕೆಟಿಜೆ ನಗರಕ್ಕೆ ಸಂಬಂಧಿಸಿದ್ದಾಗಿದ್ದು ಅಲ್ಲಿ ಹೊಸ ಕಂಟೈನ್ಮೆಂಟ್ ಜೋನ್ ಮಾಡಲಾಗಿದೆ. ಜಾಲಿನಗರದ ಎಲ್ಲಾ ಪ್ರಕರಣಗಳು ಪಿ-556 ಅವರಿಗೆ ಸಂಬಂಧಿಸಿವೆ. ಈ ಹಿನ್ನೆಲೆಯಲ್ಲಿ ತಪಾಸಣೆಯಲ್ಲಿ ಆಶಾ ಕಾರ್ಯಕರ್ತೆಯರ ಜೊತೆ ಆರೋಗ್ಯಾಧಿಕಾರಿಗಳನ್ನು ನೇಮಿಸಲಾಗಿದ್ದು ಇವರು ಪಿಪಿಇ ಕಿಟ್ ಧರಿಸಿ ಎಲ್ಲ ಮನೆಗಳ ಪ್ರತಿ ಸದಸ್ಯರ ಆರೋಗ್ಯ ತಪಾಸಣೆ ಮಾಡಲಿದ್ದಾರೆ ಎಂದರು.
ಆರೋಗ್ಯ ತಪಾಸಣೆಗಾಗಿ ಇಷ್ಟು ದಿನ ನಾವು ಮನೆ ಮನೆಗೆ ಸರ್ವೇಕ್ಷಣಾ ತಂಡ ಕಳುಹಿಸಿದಾಗ ಅವರು ಮನೆಯ ಎದುರಿಗೆ ಹೋಗಿ ಕೇಳಿಕೊಂಡು ಬರುತ್ತಿದ್ದರು. ಈ ಸಂದರ್ಭದಲ್ಲಿ ಬಹಳಷ್ಟು ಜನರು ತಮಗೆ ಇದ್ದಂತಹ ಜ್ವರ, ಕೆಮ್ಮು, ನೆಗಡಿ ವಿಷಯ ಹೇಳದೆ ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದರು. ಅಕ ಸ್ಮಾತಾಗಿ ಹೇಳಿದಲ್ಲಿ ನಮ್ಮನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ ಜೊತೆಗೆ ಕ್ವಾರಂಟೈನ್ಲ್ಲಿ ಇಡುತ್ತಾರೆ ಎನ್ನುವ ದೃಷ್ಟಿಯಿಂದ ಮರೆ ಮಾಚುತ್ತಿದ್ದರು. ಆದರೆ ಈಗ ಹಾಗೆ ಮುಚ್ಚಿಡಲು ಬರುವುದಿಲ್ಲ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತ ರಾಯ ಮಾತನಾಡಿ, ಸೋಂಕಿನ ಮೂಲದ ಕುರಿತು ಮುಖ್ಯವಾಗಿ ಹಾಸನ, ಚಿತ್ರದುರ್ಗ, ಬಳ್ಳಾರಿ ಹಾಗೂ ಬಾಗಲಕೋಟೆಗೆ ಗೂಡ್ಸ್ ವಾಹನದಲ್ಲಿ ಹೋಗಿ ಬಂದಂತಹವರ ಮಾಹಿತಿ ಸಿಕ್ಕಿದೆ. ಈರುಳ್ಳಿ ತುಂಬಿದ ಲಾರಿಗಳಲ್ಲಿ ಹೋಗಿ ಬಂದವರಿಗೆ ಲಕ್ಷಣ ಕಂಡುಬಂದಿದೆ. ಅದನ್ನು ಪರಿಶೀಲಿಸಲಾಗುತ್ತಿದೆ. ಇನ್ನೂ ಸ್ಪಲ್ಪ ಸಮಯ ಬೇಕಾಗಿದೆ. ವೈದ್ಯಾಧಿಕಾರಿಗಳ ಸಹಾಯದಿಂದ ವಿಚಾರಣೆ ಮಾಡಿ ಕೂಡಲೇ ಪತ್ತೆ ಹಚ್ಚಲಾಗುವುದು ಎಂದು ಹೇಳಿದರು.