ಕೊರೊನಾ ಇಲ್ಲವೆಂದು ನಿರ್ಲಕ್ಷ್ಯಬೇಡ, ಮುಂಜಾಗ್ರತೆ ಇರಲಿ

ಜಗಳೂರು, ಮೇ 12- ಜ್ವರ ತಪಾಸಣಾ ಕೇಂದ್ರವನ್ನು ನಾಳೆಯಿಂದಲೇ ಆರಂಭಿಸಲಾಗುವುದು.  ಕೊರೊನಾ ಎರಡು ರೀತಿಯಲ್ಲಿ ಹರಡುತ್ತದೆ. ಮೊದಲನೆಯದು ಶೀತ, ಕೆಮ್ಮು, ನೆಗಡಿ, ಜ್ವರ, ಎರಡನೆಯದಾಗಿ  ಉಸಿರಾಟದ ತೊಂದರೆಯಿಂದ ನರಳುವಂತವರಿಗೆ ಗಂಟಲು ದ್ರವ ತೆಗೆದು ಶಿವಮೊಗ್ಗ ಅಥವಾ ಬೆಂಗಳೂರಿಗೆ ಲ್ಯಾಬ್ ಪರೀಕ್ಷೆಗೆ ಕಳಿಸಲಾಗುವುದು ಎಂದು ಆರೋಗ್ಯ ಇಲಾಖೆಯ ರಾಜ್ಯ ಉಪ ನಿರ್ದೇಶಕರಾದ ಡಾ. ನಂದಾ ತಿಳಿಸಿದರು.
ಇಲ್ಲಿನ ಸಾರ್ವಜನಿಕರ ಆಸ್ಪತ್ರೆಗೆ  ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗಳೂರು ತಾಲ್ಲೂಕಿನಲ್ಲಿ ಇದುವರೆಗೂ ಕೊರೊನಾ ಪ್ರಕರಣವಿಲ್ಲವೆಂದು ನಿರ್ಲಕ್ಷ್ಯ ಮಾಡುವಂತಿಲ್ಲ. ಆಕಸ್ಮಿಕವಾಗಿ ಬಂದರೆ ಅದನ್ನು ಎದುರಿಸಲು ವೈದ್ಯರು ಮತ್ತು ಸಿಬ್ಬಂದಿಗಳು ಸಿದ್ದರಾಗಿದ್ದು, ಮುಂಜಾಗ್ರತೆಯಾಗಿ ಐಸೋಲೇಷನ್ ವಾರ್ಡ್‍ಗಳ ಸ್ವಚ್ಛತೆ, ಸ್ಯಾನಿಟೈಜರ್, ಮಾಸ್ಕ್‍ಗಳ ಬಳಕೆ ಮಾಡಲು ಸೂಚನೆ ನೀಡಲಾಗಿದೆ ಎಂದರು.
ಶೀತ, ಕೆಮ್ಮು, ಜ್ವರವಿದ್ದವರು ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳುವುದರಿಂದ ಮುಂದಾಗುವ ತೊಂದರೆಯಿಂದ ದೂರ ಉಳಿಯಲು ಸಾಧ್ಯವಾಗುತ್ತದೆ. ಜನ ಜಾಗೃತರಾಗಿಬೇಕು.
ಐಸೋಲೇಷನ್‍ಗೆ ವಿದ್ಯಾರ್ಥಿ ನಿಲಯ, ಲಾಡ್ಜ್‍ಗಳನ್ನು ನಿಗದಿ ಮಾಡಲಾಗಿದೆ. ಅದರಲ್ಲಿ ರೋಗಿಗಳನ್ನು ಮತ್ತು ಸಿಬ್ಬಂದಿಗಳನ್ನು ಪ್ರತ್ಯೇಕವಾಗಿಡಲಾಗುತ್ತದೆ.  ಗಂಟಲು ದ್ರವ ತೆಗೆದು ಲ್ಯಾಬಿಗೆ ಕಳಿಸಿದಾಗ ಪಾಸಿಟಿವ್ ಬಂದರೆ ಅವರನ್ನು ಐಸೋಲೇಷನ್ ವಾರ್ಡಿನಲ್ಲಿಡಲಾಗುವುದು. ನಂತರ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಕಳಿಸಿಕೊಡಲಾಗುವುದು ಎಂದು ತಿಳಿಸಿದರು.
ಆಸ್ಪತ್ರೆ ಆಡಳಿತಾಧಿಕಾರಿ ಡಾ. ನೀರಜ್ ಮಾತನಾಡಿ, ಸರ್ಕಾರಿ ಆಸ್ಪತ್ರೆಯಲ್ಲಿ 80 ವೈದ್ಯರು ಸಿಬ್ಬಂದಿಗಳಿದ್ದಾರೆ. ಈಗಾಗಲೇ 150 ಪಿಪಿಇ ಕಿಟ್, 150 ಎನ್95 ಮಾಸ್ಕ್, ಸ್ಯಾನಿಟೈಜರ್ ಪೂರೈಕೆಯಾಗಿದೆ. ಜನರಿಗೆ ತೊಂದರೆಯಾಗದಂತೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಡಾ. ಮುರುಳಿಧರ್, ಡಾ. ಮಲ್ಲಪ್ಪ, ಡಾ. ಜಯಕುಮಾರ್, ಸಿಬ್ಬಂದಿಗಳಾದ ಮೀನಾಕ್ಷಮ್ಮ, ಮಹಾದೇವಮ್ಮ ಸೇರಿದಂತೆ ಮತ್ತಿತರಿದ್ದರು.

error: Content is protected !!