ದುಡಿಯುವ ಕೈಗಳಿಗೆ
ದುಡಿಮೆಯೇ ದೇವರು
ದೇಶ ಕಟ್ಟೋ ಕೈಗಳಿಗೆ
ಉದ್ಯೋಗವೇ ಉಸಿರು.
ಬೇಡುತ ತಿಂದು ಭೂಮಿಗೆ
ಹೊರೆಯಾಗಲಾರರು
ದುಡಿಯುತ ಬೆಳೆದು ನಾಡಿಗೆ
ದೊರೆಯಾಗುವರು.
ಶ್ರದ್ಧೆಯಲಿ ದುಡಿಯೋ
ಶ್ರಮಿಕರಿಗೆ ಶ್ರಮವೇ ಶಕ್ತಿ
ಶುದ್ಧ ಮನದ ಕಾಯಕ
ಯೋಗಿಗಳಿಗೆ ಬೆವರೇ ಭಕ್ತಿ.
ಕುಟುಂಬ ಭಾರವ ಹೊತ್ತು
ದಿನವು ದುಡಿಯುವರು
ಕಷ್ಟಪಟ್ಟು ತಮ್ಮವರಿಗಾಗಿ
ಅನುದಿನ ಬಾಳುವರು.
ವಿಧವಿಧದ ಕಾಯಕಗಳಲಿ
ಕೈಲಾಸ ಕಂಡವರು
ವಿವಿಧ ಕೌಶಲ್ಯಗಳ ಕರಗತವ
ಮಾಡಿಕೊಂಡವರು.
ವಿಶ್ವದೆಲ್ಲೆಡೆ ಹಗಲಿರುಳೆನ್ನದೆ
ದುಡಿಯುವ ವರ್ಗ
ವಿಶ್ವದಿ ಕರ್ಮಗಳಲಿ ದುಡಿದು
ಕಾಣುವರು ಸ್ವರ್ಗ.
ಕೈ ಕೆಸರಾದರೆ ತಾನೇ
ಬಾಯಿ ಮೊಸರು ಆಗುವುದು
ಮೈ ಮುರಿದು ದುಡಿದರೆ
ಬಾಳು ಬೆಳಗುವುದು.
ಮಾತಾ ಪಿತಾ ಗುರು
ದೈವಗಳ ಪೂಜಿಸುವ
ಕೃಷಿಕ ಸೈನಿಕ ಶಿಕ್ಷಕ
ಕಾರ್ಮಿಕರ ಗೌರವಿಸುವ.
ಶಿವಮೂರ್ತಿ.ಹೆಚ್. ಕನ್ನಡ ಶಿಕ್ಷಕರು
ಅನುಭವ ಮಂಟಪ, ದಾವಣಗೆರೆ.