ದಾವಣಗೆರೆ, ಏ.21- ಸಂಕಷ್ಟದಲ್ಲಿರುವ ಕುಟುಂಬಗಳಿಗೆ ದಾವಣಗೆರೆ ವಿಶ್ವವಿದ್ಯಾನಿಲಯದ ವತಿಯಿಂದ ಆಹಾರ ಸಾಮಗ್ರಿ ಹಾಗೂ ಮಾಸ್ಕ್ಗಳನ್ನು ವಿತರಿಸಲಾಯಿತು.
ವಿವಿ ಉಪಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಮಾರ್ಗದರ್ಶನದಲ್ಲಿ ಕುಲಸಚಿವ ಪ್ರೊ. ಬಸವರಾಜ ಬಣಕಾರ ಹಳೇ ದಾವಣಗೆರೆ ನಗರದ ವಿವಿಧ ಬಡಾವಣೆಗಳಲ್ಲಿ ಸಂತ್ರಸ್ತ ಕುಟುಂಬಗಳ ಮನೆಮನೆಗೆ ತೆರಳಿ ಆಹಾರ ಸಾಮಗ್ರಿಯನ್ನು ನೀಡಿ, ಆರೋಗ್ಯ ರಕ್ಷಣೆ ಮಾಡಿಕೊಳ್ಳಲು ಸಲಹೆ ನೀಡಿದರು. ಬಂಡಿ ದುರ್ಗಮ್ಮ ದೇವಸ್ಥಾನದ ಸುತ್ತಲಿನ ಬಡಾವಣೆಯ ಕುಟುಂಬಗಳಿಗೂ ನಿತ್ಯ ಉಪಯೋಗದ ಸಾಮಗ್ರಿಗಳನ್ನು ವಿತರಿಸಲಾಯಿತು.
ಪೊಲೀಸ್ ಅಧಿಕಾರಿಗಳಾದ ಸತ್ಯನಾರಾಯಣ, ಗೋವಿಂದಪ್ಪ, ದಾವಣಗೆರೆ ವಿವಿ ಸಂಯೋಜನಾಧಿಕಾರಿ ಡಾ. ಅಶೋಕಕುಮಾರ ಪಾಳೇದ, ಜಿಲ್ಲಾಡಳಿತದ ಮಾಸ್ಕ್ ವಿತರಣೆಯ ನೋಡಲ್ ಅಧಿಕಾರಿ ಡಾ. ಬಸವರಾಜ, ವಿವಿಯ ಪತ್ರಿಕೋದ್ಯಮ ವಿಭಾಗದ ಅಧ್ಯಕ್ಷ ಡಾ. ಶಿವಕುಮಾರ ಕಣಸೋಗಿ, ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ತಿಪ್ಪೇಶ್, ವಿವಿ ಸಿಬ್ಬಂದಿಗಳು ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಂತರ ವಿಶ್ವವಿದ್ಯಾನಿಲಯದ ದತ್ತು ಗ್ರಾಮಗಳಾದ ಹನುಮಂತಪುರ, ಹಿರೆತೊಗಲೇರಿ ಹಾಗೂ ಇನ್ನಿತರ ಗ್ರಾಮಗಳಲ್ಲಿಯೂ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಿನ ಹಸ್ತ ನೀಡಲಾಯಿತು. ಗ್ರಾಮಗಳ ಅಂಗವಿಕಲರು, ವಿಧವೆಯರು, ಅನಾಥ ಮಕ್ಕಳು ವಾಸಿಸುವ ಮನೆಗಳಿಗೆ ಕುಲಸಚಿವರು ಹಾಗೂ ಸಿಬ್ಬಂದಿಗಳು ತೆರಳಿ ವಿತರಣೆ ನಡೆಸಿದರು. ಜೊತೆಗೆ ಜಾಗೃತಿ ಮೂಡಿಸಿದರು.