ಹರಿಹರ: ಸ್ಥಗಿತಗೊಂಡಿದ್ದ ರಸ್ತೆ ಕಾಮಗಾರಿ ಶೀಘ್ರವೇ ಆರಂಭ

ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಶಾಸಕ ಎಸ್.ರಾಮಪ್ಪ

ಗ್ರಾಮೀಣಾಭಿವೃದ್ಧಿ ಇಲಾಖೆ ಕಾಮಗಾರಿಗಾಗಿ ತಾಲ್ಲೂಕು ಪಂಚಾಯ್ತಿ ಇ.ಒ. ರೂಪಿಸಿರುವ ಪಟ್ಟಿಗೆ ತೀವ್ರ ತರಾಟೆ

ಹರಿಹರ, ಡಿ. 29 – ಹಣ ಬಿಡುಗಡೆಯಾಗದೇ ಸ್ಥಗಿತಗೊಂಡಿದ್ದ ತಾಲ್ಲೂಕಿನ ವಿವಿಧ ರಸ್ತೆ ಕಾಮಗಾರಿಗಳು ಇನ್ನೊಂದು ವಾರದಲ್ಲಿ ಆರಂಭವಾಗಲಿವೆ ಎಂದು ಶಾಸಕ ಎಸ್.ರಾಮಪ್ಪ ಹೇಳಿದ್ದಾರೆ.

ನಗರದ ತಾ.ಪಂ. ಕಚೇರಿಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಬಿಜೆಪಿ ಸರ್ಕಾರ ಬಂದ ಮೇಲೆ ತಾಲ್ಲೂಕಿನ ವಿವಿಧ ರಸ್ತೆ ಕಾಮಗಾರಿಗಳ ಟೆಂಡರ್ ಆಗಿದ್ದರೂ ಹಣ ಬಿಡುಗಡೆ ಆಗಿರಲಿಲ್ಲ. ಸಾಕಷ್ಟು ಹೋರಾಟ ಮಾಡಿ ಯಕ್ಕೆಗೊಂದಿ – ಭಾನುವಳ್ಳಿ ರಸ್ತೆ, ಸಾರಥಿ ಚಿಕ್ಕಬಿದರಿ ಸೇತುವೆ, ರಾಜನಹಳ್ಳಿ ರಸ್ತೆ ಸೇರಿದಂತೆ ವಿವಿಧ ಗ್ರಾಮದಲ್ಲಿ ಸ್ಥಗಿತಗೊಳಿಸಿರುವ ಕಾಮಗಾರಿಗಳ ಚಾಲನೆಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಗ್ರಾಮೀಣ ಅಭಿವೃದ್ಧಿ ಇಲಾಖೆಯಿಂದ ತಾಲ್ಲೂಕಿಗೆ 2 ಕೋಟಿ ರೂ. ಹಣ ಬಿಡುಗಡೆ ಆಗಿದ್ದು, ಕಾಮಗಾರಿಗಳ ಕ್ರಿಯಾ ಯೋಜನೆ ಪಟ್ಟಿಯನ್ನು ನಾನು ಸಿದ್ಧತೆ ಮಾಡಿ ಕಳಿಸಿದ್ದೆ. ಆದರೆ ತಾ.ಪಂ. ಇ.ಓ. ಗಂಗಾಧರನ್ ಅವರು ನಮ್ಮ ಪಟ್ಟಿಯನ್ನು ಕಡೆಗಣಿಸಿ, ತಾವೇ ತಯಾರಿಸಿದ ಪಟ್ಟಿಯಂತೆ ಕಾಮಗಾರಿ ಪ್ರಾರಂಭ ಮಾಡಲು ಹೊರಟಿದ್ದಾರೆ. ಇದನ್ನು ಎರಡು ದಿನಗಳಲ್ಲಿ ಸರಿಪಡಿಸದೇ ಇದ್ದರೆ ಶಿಸ್ತುಕ್ರಮ ತೆಗೆದುಕೊಳ್ಳ ಲಾಗುವುದು ಎಂ ದವರು ಎಚ್ಚರಿಸಿದರು.

ಅತಿವೃಷ್ಟಿಯಿಂದ ಆದ ಬೆಳೆ ಹಾನಿಯ ಪಟ್ಟಿಯಲ್ಲಿ 440 ರೈತರ ದಾಖಲೆಗಳು ಸರಿಯಾಗಿಲ್ಲ ಎಂದು ವರದಿಯನ್ನು ಕಳಿಸಿಲ್ಲ. ರೈತರಿಂದ ಸರಿಯಾದ ದಾಖಲೆಗಳನ್ನು ಪಡೆದುಕೊಂಡು ಸರ್ಕಾರಕ್ಕೆ ಈ ಕೂಡಲೇ ವರದಿಯನ್ನು ಕಳಿಸಿಕೊಡಿ ಎಂದು ರಾಮಪ್ಪ ಸೂಚಿಸಿದರು.

ತಾಲ್ಲೂಕಿನಲ್ಲಿ ನಲ್ಲಿಗಳನ್ನು ಹಾಕುವ ಕಾಮಗಾರಿ ಬಹಳ ವಿಳಂಬವಾಗುತ್ತಿದ್ದು, ಇದರಿಂದ ಗ್ರಾಮಸ್ಥರಿಗೆ ತೊಂದರೆಯಾಗಿದೆ. ಕೂಡಲೇ ಎಲ್ಲಾ ಗ್ರಾಮದಲ್ಲಿ ನಿಗದಿ ಪಡಿಸಿರುವ ದಿನಾಂಕ ದೊಳಗೆ ನಲ್ಲಿಗಳನ್ನು ಅಳವಡಿಕೆ ಮಾಡುವಂತೆ ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿ ಗಣೇಶ ಬಾಬು ಸಭೆಯಿಂದ ಗೈರಾಗಿದ್ದರಿಂದ ಅವರಿಗೆ ಮತ್ತು ಸಭೆಗೆ ಗೈರಾಗಿರುವ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವಂತೆ ಶಾಸಕರು ತಿಳಿಸಿದರು.

ಜಿಲ್ಲಾ ಪಂಚಾಯತಿ ಮುಖ್ಯ ಲೆಕ್ಕಾಧಿಕಾರಿ ಸಿ.ಪಿ. ಸೌಮ್ಯಶ್ರೀ ಮಾತನಾಡಿ, ತಾಲ್ಲೂಕಿನಲ್ಲಿ ನಡೆಯುತ್ತಿರುವ ಕುಡಿಯುವ ನೀರಿನ ಕಾಮಗಾರಿ ಫೆಬ್ರವರಿ ತಿಂಗಳ 15 ಕ್ಕೆ ಮುಗಿಸಬೇಕಿದೆ. ಹೆಚ್ಚುವರಿ ಅವಧಿಯಲ್ಲೂ ಕಾಮಗಾರಿ ವಿಳಂಬ ಮಾಡಿದರೆ ಏಜೆನ್ಸಿಯನ್ನು ರದ್ದು ಮಾಡಲಾಗುತ್ತದೆ ಎಂದವರು ಎಚ್ಚರಿಸಿದರು.

ಕುಂಬಳೂರು ಹಾಗೂ ಹೊಳೆ ಸಿರಿಗೆರೆ ಗ್ರಾಮದಲ್ಲಿ ಇದುವರೆಗೂ ಒಂದು ನಲ್ಲಿಯನ್ನು ಅಳವಡಿಸಿಲ್ಲ. ಗ್ರಾಮಸ್ಥರನ್ನು ವಿಶ್ವಾಸಕ್ಕೆ ತಗೆದುಕೊಂಡು ಆದಷ್ಟು ಬೇಗನೆ ಕಾಮಗಾರಿ ಪ್ರಾರಂಭ ಮಾಡುವಂತೆ ಅವರು ಸೂಚಿಸಿದರು.

ಕೃಷಿ ಅಧಿಕಾರಿ ನಾರನಗೌಡ ಮತ್ತು ತಹಶಿಲ್ದಾರ ಶಶಿಧರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅಕಾಲಿಕವಾಗಿ ಸುರಿದ ಮಳೆಯಿಂದಾಗಿ 4219 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಈ ಸಂಬಂಧ 5851 ರೈತರ ಪೈಕಿ 4432 ರೈತರಿಗೆ ಈಗಾಗಲೇ 3. 28 ಕೋಟಿ ರೂ.ಬೆಳೆ ಪರಿಹಾರ ನೀಡಲಾಗಿದೆ. ಇನ್ನೂ 441 ರೈತರ ದಾಖಲೆಗಳನ್ನು ಸರಿಪಡಿಸಿ ಪರಿಹಾರ ನೀಡಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಪಂ ಇಓ ಆರೋಗ್ಯ ಇಲಾಖೆಯ ಡಾ ಚಂದ್ರಮೋಹನ್, ಡಾ ಹನುಮನಾಯ್ಕ್, ಬೆಸ್ಕಾ ಇಲಾಖೆ ಲಕ್ಷ್ಮಪ್ಪ, ಸಿಡಿಪಿಓ ನಿರ್ಮಲಾ, ಅರಣ್ಯ ಇಲಾಖೆಯ ಶ್ವೇತಾ, ಮಂಜುನಾಥ್, ತಾಪಂ ಇಲಾಖೆಯ ಲೆಕ್ಕಾಧಿಕಾರಿ ಲಿಂಗರಾಜ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!