ಬೇಸಿಗೆ ಹಂಗಾಮಿನ ಬೆಳೆಗಳಿಗೆ ಭದ್ರಾ ನೀರು

ಶಿವಮೊಗ್ಗ, ಡಿ. 28- ಭದ್ರಾ ಜಲಾಶಯದಿಂದ ಭದ್ರಾ ಅಚ್ಚುಕಟ್ಟಿನ ಬೇಸಿಗೆ ಹಂಗಾಮಿನ ಬೆಳೆಗಳಿಗೆ ಡಿ. 29 ರಿಂದ ಎಡದಂಡೆ ನಾಲೆಗೆ ಮತ್ತು ಡಿ. 30ರಿಂದ ಬಲದಂಡೆ ನಾಲೆಗೆ ನೀರು ಹರಿಸಲು ಮಂಗಳವಾರ ನಡೆದ ಭದ್ರಾ ಕಾಡಾ ಸಭೆ ನಿರ್ಧರಿಸಿತು.

ಮಲವಗೊಪ್ಪದಲ್ಲಿರುವ ಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಛೇರಿಯ ಸಭಾಂಗಣದಲ್ಲಿ ಪ್ರಾಧಿಕಾರದ ಅಧ್ಯಕ್ಷೆ ಶ್ರೀಮತಿ ಪವಿತ್ರ ರಾಮಯ್ಯ ಅವರ ಅಧ್ಯಕ್ಷತೆಯಲ್ಲಿ 79ನೇ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆ ನಡೆಯಿತು.

ಸಭೆಯ ಆರಂಭದಲ್ಲಿ ಭದ್ರಾ ಅಧೀಕ್ಷಕ ಅಭಿಯಂತರ ಚಂದ್ರಹಾಸ್ ಅವರು ದಾವಣಗೆರೆ ಮತ್ತು ಮಲೇಬೆನ್ನೂರು ವಿಭಾಗದಲ್ಲಿ ನಾಲೆ ಸೇತುವೆ ಕಾಮಗಾರಿಗಳು ನಡೆಯುತ್ತಿರುವುದ ರಿಂದ ಜನವರಿ 6ರ ನಂತರ ನೀರು ಹರಿಸಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಂತೆಯೇ ರೈತ ಸಂಘದ ಹೆಚ್.ಆರ್. ಬಸವರಾಜಪ್ಪ ಅವರು ಗರಂ ಆಗಿ ನೀವು ಹೇಳಿದಂತೆ ಕೇಳಲು ನಾವು ಇಲ್ಲಿಗೆ ಬಂದಿಲ್ಲ. ನೀರು ಹರಿಸುವ ತೀರ್ಮಾನ ಕಾಡಾ ಸಮಿತಿಗೆ ಸೇರಿದ್ದು, ನಾಲೆಯಲ್ಲಿ ನೀರು ನಿಂತಾಗ ಕಾಮಗಾರಿ ಮಾಡಿ ಮುಗಿಸಬೇಕಿತ್ತು. ನೀರು ಬಿಡುಗಡೆ ಮಾಡುವ ಸಂದರ್ಭದಲ್ಲಿ ಕಾಮಗಾರಿಯ ನೆಪ ಹೇಳಿದರೆ ತೋಟಗಳ ರೈತರಿಗೆ ತೊಂದರೆ ಆಗುವುದಿಲ್ಲವೇ? ಎಂದು ಪ್ರಶ್ನಿಸಿದರು.

ಇದಕ್ಕೆ ಧ್ವನಿಗೂಡಿಸಿದ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಅವರು, ಎಡ ಮತ್ತು ಬಲದಂಡೆ ನಾಲೆಗಳಿಗೆ ಇಂದಿನಿಂದಲೇ ನೀರು ಬಿಡಿ. ಕುಡಿಯುವ ನೀರಿಗೂ ತೊಂದರೆ ಆಗುತ್ತಿದೆ. ರೈತರೂ ಸಹ ತಕ್ಷಣ ನೀರು ಹರಿಸಿ ಎಂಬ ಒತ್ತಡ ಹಾಕುತ್ತಿದ್ದಾರೆ. ಡ್ಯಾಂ ತುಂಬಿರುವುದರಿಂದ ನೀರು ಹರಿಸುವ ಬಗ್ಗೆ ವಿಳಂಬ ಬೇಡ ಎಂದರು.

ಜೊತೆಗೆ ಕಾಡಾ ಸದಸ್ಯರಾದ ಷಡಾಕ್ಷರಪ್ಪ, ರಘುಮೂರ್ತಿ, ರೈತ ಸಂಘದ ವೈ.ಜಿ. ಮಲ್ಲಿಕಾರ್ಜುನ್, ಯಶವಂತರಾವ್  ಧ್ವನಿ ಸೇರಿಸಿ, ಇಂದಿನಿಂದಲೇ ನಾಲೆಗಳಿಗೆ ನೀರು ಹರಿಸಿ, ಇಲ್ಲದಿದ್ದರೆ ಪ್ರತಿಭಟನೆ ಮಾಡುವುದಾಗಿ ಬೆದರಿಕೆ ಹಾಕಿದರು.

ಆಗ ಭದ್ರಾ ಅಧೀಕ್ಷಕ ಅಭಿಯಂತರ ಚಂದ್ರಹಾಸ್ ಮಾತನಾಡಿ, ಜಲಾಶಯದಿಂದ ನಾಲೆಗೆ ನೀರು ಬಿಡುಗಡೆ ಮಾಡುವ ಮೊದಲ ಅಧಿಸೂಚನೆ ಹೊರಡಿಸಬೇಕು. ಅದಕ್ಕಾಗಿ ಎರಡು ದಿನ ಸಮಯ ಬೇಕು ಎಂದಾಗ, ನಿಮ್ಮ ಅಧಿಸೂಚನೆ ಯಾರಿಗೆ ಬೇಕು. ಡ್ಯಾಂ ತುಂಬಿದ ತಕ್ಷಣ ನೀರು ಹರಿಸಿ ಎಂದು ಎಡದಂಡೆ ನಾಲೆ ರೈತರು ಪಟ್ಟು ಹಿಡಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಹೆಚ್.ಆರ್. ಬಸವರಾಜಪ್ಪ ಅವರು, ನೀರು ಬಿಡುಗಡೆಗೆ ಮುನ್ನ ಅಧಿಸೂಚನೆ ಹೊರಡಿಸಲೇಬೇಕು. ಅದಕ್ಕಾಗಿ ಒಂದು ದಿನ ಸಮಯ ಕೊಡಬೇಕು. ಬುಧವಾರ ರಾತ್ರಿಯಿಂದ ಎಡದಂಡೆ ನಾಲೆೆಗ ನೀರು ಎತ್ತಿ ಎಂದಾಗ ಎಲ್ಲರೂ ಸುಮ್ಮನಾದರು.

ಬಲದಂಡೆ ನಾಲೆಗೆ ನೀರು ಹರಿಸುವ ವಿಷಯವನ್ನು ಚಂದ್ರಹಾಸ್ ಪ್ರಸ್ತಾಪಿಸಿ, ಈ ಹಿಂದೆ ಜನವರಿ 1ರ ನಂತರ ನೀರು ಹರಿಸಿರುವ ಉದಾಹರಣೆ ಇವೆ. ಜೊತೆಗೆ ಸೇತುವೆ ಕಾಮಗಾರಿಗಳು ನಡೆಯುತ್ತಿರುವುದರಿಂದ ಜನವರಿ 6 ರಿಂದ ನೀರು ಹರಿಸುವುದು ಸೂಕ್ತ ಎಂದರು.

ಇದಕ್ಕೆ ಬೆಬಂಲ ನೀಡಿದ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ನೀರು ಬಳಕೆದಾರರ ಸಂಘಗಳ ಮಹಾಮಂಡಳದ ಅಧ್ಯಕ್ಷ ವೈ. ದ್ಯಾವಪ್ಪ ರೆಡ್ಡಿ, ಕಾಡಾ ಸದಸ್ಯರಾದ ತೇಜಸ್ವಿ ಪಟೇಲ್, ಗೋವಿನಹಾಳ್ ರಾಜಣ್ಣ, ಹುಣಸಘಟ್ಟದ ಹನುಮಂತಪ್ಪ ಅವರು ನಮ್ಮ ಭಾಗದ ರೈತರೂ ಕೂಡಾ ಜನವರಿ 5ರ ನಂತರ ನೀರು ಹರಿಸಬೇಕೆಂಬ ಅಭಿಪ್ರಾಯ ಹೇಳಿದ್ದಾರೆ. ಅಲ್ಲದೇ ನಮ್ಮ ಭಾಗದ ಮಣ್ಣಿನ ಗುಣವೇ ಬೇರೆ ಆಗಿರುವುದರಿಂದ ನಮಗೆ ತಕ್ಷಣ ನೀರು ಬೇಕಾಗಿಲ್ಲ. ಆದರೆ ಭದ್ರಾವತಿ ಭಾಗದ ತೋಟ, ಗದ್ದೆಗಳಿಗೆ ಅನುಕೂಲವಾಗಲು  1 ಸಾವಿರ ಕ್ಯೂಸೆಕ್ಸ್ ನೀರನ್ನು ನೀವು ಹರಿಸಿಕೊಳ್ಳಿ. ನಮಗೆ ಜ. 5ರ ನಂತರ 2800 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಿ ಎಂಬ ಸಲಹೆ ನೀಡಿದರು.

ಇದನ್ನು ಒಪ್ಪಿಕೊಂಡ ಹೆಚ್.ಆರ್. ಬಸವರಾಜಪ್ಪ ಅವರು, ಡಿಸೆಂಬರ್ 30ರಿಂದ ನಾಲೆಗೆ 1 ಸಾವಿರ ಕ್ಯೂಸೆಕ್ಸ್ ನೀರು ಹರಿಸಿ, ಕಾಲುವೆಯ ಸಬ್ ಗೇಟ್ ಬಳಿ ಮರಳಿನ ಚೀಲಗಳನ್ನು ಹಾಕಿ ನಮಗೆ ಕೊಡಿ ಎಂದು ಭದ್ರಾವತಿ ವಿಭಾಗದ ಇಂಜಿನಿಯರ್‌ಗಳಿಗೆ ಸೂಚಿಸಿದರು.

ಅಂತಿಮವಾಗಿ ಭದ್ರಾ ಕಾಡಾ ಅಧ್ಯಕ್ಷೆ ಶ್ರೀಮತಿ ಪವಿತ್ರ ರಾಮಯ್ಯ ಅವರು ಎಲ್ಲರ ಅಭಿಪ್ರಾಯ ಆಧರಿಸಿ, ಡಿ. 29 ರಿಂದ ಎಡದಂಡೆ ನಾಲೆಗೆ ಮತ್ತು ಡಿ. 30ರಿಂದ ಬಲದಂಡೆ ನಾಲೆಗೆ ಸತತವಾಗಿ 120 ದಿನ ನೀರು ಹರಿಸುವ ನಿರ್ಧಾರ ಪ್ರಕಟಿಸಿದರು.

ಬೇಸಿಗೆ ಸಮಯ ಆಗಿರುವುದರಿಂದ ಇಂಜಿನಿಯರ್‌ಗಳು ನಿರ್ಲಕ್ಷ್ಯ ಮಾಡದೇ ಜವಾಬ್ದಾರಿಯಿಂದ ಹಗಲು, ರಾತ್ರಿ ಎನ್ನದೇ ಕೆಲಸ ಮಾಡಬೇಕು. ಯಾರೇ ಫೋನ್ ಮಾಡಿದರೂ ಎತ್ತಿ ಮಾತನಾಡಿ, ಇಲ್ಲದಿದ್ದರೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂಬ ಎಚ್ಚರಿಕೆ ನೀಡಿದರು.

ಅಪ್ಪರ್ ಭದ್ರಾ ಕಾಲುವೆ ಮೂಲಕ ವಾಣಿ ವಿಲಾಸ ಸಾಗರಕ್ಕೆ ಮಳೆಗಾಲದಲ್ಲಿ ನಿತ್ಯ ನೀರು ಹರಿಸಿ ಆ ಜಲಾಶಯವನ್ನು ತುಂಬಿಸಿದ್ದೇವೆ ಎಂದು ಪವಿತ್ರ ರಾಮಯ್ಯ ತಿಳಿಸಿದರು.

ಭದ್ರಾ ಕಾಡಾ ಪ್ರಭಾರ ಆಡಳಿತಾಧಿಕಾರಿ ಅರುಣ್‌, ಕಾಡಾ ಸದಸ್ಯರಾದ ಕೆ.ಎಸ್. ರುದ್ರಮೂರ್ತಿ, ತರೀಕೆರೆಯ ವಿನಾಯಕ, ಸದಾಶಿವಪ್ಪಗೌಡ್ರು, ಹರಿಹರ ಎಪಿಎಂಸಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ವಾಸನದ ಬಿ.ಎಸ್. ಮಂಜುನಾಥ್, ಸಂಕ್ಲೀಪುರದ ಸಿ. ನಾಗೇಂದ್ರಪ್ಪ, ಚಂದ್ರಶೇಖರಪ್ಪ, ದೇವರಬೆಳಕೆರೆಯ ಗೋವಿಂದರೆಡ್ಡಿ, ಗುಳದಹಳ್ಳಿಯ ಕುಬೇರಪ್ಪ, ಪ್ರಕಾಶ್, ನಾಗರಾಜ್, ಭದ್ರಾವತಿ ವಿಭಾಗದ ಇಇ ರವಿಚಂದ್ರ, ದಾವಣಗೆರೆ ವಿಭಾಗದ ಇಇ ಮಲ್ಲಪ್ಪ, ಮಲೇಬೆನ್ನೂರು ವಿಭಾಗದ ಇಇ ಚಿದಂಬರ್ ಲಾಲ್, ಬಸವಾಪಟ್ಟಣ ಎಇಇ ದೊಡ್ಡಪ್ಪ, ಸಾಸ್ವೆಹಳ್ಳಿ ಎಇಇ ರಾಜೇಂದ್ರ ಪ್ರಸಾದ್, ದಾವಣಗೆರೆ ಎಇಇ ಬಸವರಾಜ್ ಸೇರಿದಂತೆ ಇನ್ನೂ ಅನೇಕರು ಸಭೆಯಲ್ಲಿದ್ದರು.


ಜಿಗಳಿ ಪ್ರಕಾಶ್

error: Content is protected !!