ಎಂಇಎಸ್, ಶಿವಸೇನೆ ಸಂಘಟನೆಗಳ ನಿಷೇಧಕ್ಕೆ ಆಗ್ರಹ
ದಾವಣಗೆರೆ, ಡಿ.27- ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜ ಸುಟ್ಟು ಹಾಕಿದ್ದಲ್ಲದೇ, ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪುತ್ಥಳಿ ವಿಘ್ನಗೊಳಿಸಿದ ಎಂಇಎಸ್, ಶಿವಸೇನೆ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ನಗರದಲ್ಲಿ ಇಂದು ಜಿಲ್ಲಾ ಶಾಲಾ ಆಟೋ ಮತ್ತು ವ್ಯಾನ್ ಚಾಲಕರ ಸಂಘದ ನೇತೃತ್ವದಲ್ಲಿ ಶಾಲಾ ಆಟೋ ಮತ್ತು ವ್ಯಾನ್ ಚಾಲಕರು ಪ್ರತಿಭಟನೆ ನಡೆಸಿದರು.
ಬೆಳಗಾವಿ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸುವ ಸಂದರ್ಭದಲ್ಲೇ ದುರುದ್ದೇಶದಿಂದ ಎಂಇಎಸ್ ಸಂಘಟನೆ ಪುಂಡರು ಯಾವುದಾದರೊಂದು ರೀತಿ ಪುಂಡಾಟಿಕೆ, ದೌರ್ಜನ್ಯ ಮೆರೆದು, ಕನ್ನಡ-ಮರಾಠಿ ಭಾಷಿಕರ ಮಧ್ಯೆ ಸಾಮರಸ್ಯ ಕದಡುವ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಎಂಇಎಸ್, ಶಿವಸೇನೆ ಪುಂಡರು ಕೊಲ್ಲಾಪುರದಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚುವ ಮೂಲಕ ಕನ್ನಡಿಗರಿಗೆ ಅವಮಾನಿಸಿದ್ದನ್ನು ಸಂಘಟನೆ ಮುಖಂಡ ಎ.ಎಂ. ರುದ್ರಸ್ವಾಮಿ ಖಂಡಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡರಾದ ವಿ.ಮಂಜುನಾಥ, ಬಿ.ಪಿ. ನೀಲಕಂಠಪ್ಪ, ನಾಗೇಶ, ಇಸ್ಮಾಯಿಲ್, ಮೆಹಬೂಬ್ ಬಾಷಾ, ನಾಗರಾಜ, ದಾದಾಪೀರ್, ರವಿ ನಾಯ್ಕ, ಜಬೀವುಲ್ಲಾ ಖಾನ್ ಸೇರಿದಂತೆ ಇತರರು ಭಾಗವಹಿಸಿದ್ದರು.