ಜಗಳೂರು, ಡಿ.24- ಸಂಗೊಳ್ಳಿ ರಾಯಣ್ಣನ ಪ್ರತಿಮೆ ವಿರೂಪಗೊಳಿಸಿ ಪುಂಡಾಟಿಕೆ ಮೆರೆದಿರುವ ಎಂಇಎಸ್ ಸಂಘಟನೆ ನಿಷೇಧಕ್ಕಾಗಿ ಆಗ್ರಹಿಸಿ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಹಾಗೂ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಮಹಾತ್ಮ ಗಾಂಧಿ ವೃತ್ತದ ಮೂಲಕ ಅಂಬೇಡ್ಕರ್ ವೃತ್ತದಿಂದ ತಹಶೀಲ್ದಾರ್ ಕಛೇರಿ ಮುಂಭಾಗ ಜಮಾಯಿಸಿ ಪ್ರಭಾರಿ ತಹಶೀಲ್ದಾರ್ ಶಶಿಧರ ಸ್ವಾಮಿ ಅವರಿಗೆ ಲಿಖಿತ ಮನವಿ ಸಲ್ಲಿಸಿದರು.
ಕೆಪಿಸಿಸಿ ಎಸ್.ಟಿ ಘಟಕ ರಾಜ್ಯಾಧ್ಯಕ್ಷ, ಕೆ.ಪಿ. ಪಾಲಯ್ಯ ಮಾತನಾಡಿ, ಬ್ರಿಟಿಷರ ವಿರುದ್ಧ ಹೋರಾಡಿದ ಅಪ್ರತಿಮ ಹೋರಾಟಗಾರ, ದೇಶಭಕ್ತ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿರುವ ಎಂಇಎಸ್ ಪುಂಡಾಟಿಕೆಗೆ ಕಡಿವಾಣ ಹಾಕಿ ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ನಿವೃತ್ತ ಉಪನ್ಯಾಸಕ ತಿಮ್ಮಣ್ಣ ಮಾತನಾಡಿ, ಎಂಇಎಸ್ ಸಂಘಟನೆ ಬಗ್ಗೆ ಪೊಲೀಸ್ ಇಲಾಖೆ ನಿಗಾವಹಿಸುವಲ್ಲಿ ವಿಫಲವಾಗಿದೆ. ಸಮಾಜದಲ್ಲಿ ಸಾಮರಸ್ಯ ಹಾಳು ಮಾಡುವ ಸಂಘಟನೆಗಳನ್ನು ರಾಜ್ಯದಿಂದ ಗಡೀಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಗತಿಪರ ಸಂಘಟನೆ ಮುಖಂಡ ಎಂ. ರಾಜಪ್ಪ, ಮಹಾಲಿಂಗಪ್ಪ, ಸತೀಶ್ ಮಲೆ ಮಾಚಿಕೆರೆ, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಗಿರೀಶ್ ಒಡೆಯರ್, ನಾಗಲಿಂಗಪ್ಪ, ಸಿದ್ದಪ್ಪ, ತಿಪ್ಪೇಸ್ವಾಮಿ, ರಂಗಸ್ವಾಮಿ, ನಾಗರಾಜ್, ಮಾದಿಹಳ್ಳಿ ಮಂಜಪ್ಪ, ಅನಂತರಾಜ್, ಅಂಜಿನಪ್ಪ, ವೀರಣ್ಣ, ತಿಪ್ಪೇಸ್ವಾಮಿ, ಜೀವನ್, ಗೌರಿಪುರ ನಾಗರಾಜ್ ಮುಂತಾದವರು ಭಾಗವಹಿಸಿದ್ದರು.