ದಾವಣಗೆರೆ, ಡಿ.24- ಕನ್ನಡ ಬಾವುಟ ಸುಟ್ಟಿದ್ದಲ್ಲದೇ, ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣರ ಮೂರ್ತಿ ವಿರೂಪಗೊಳಿಸಿರುವ ಎಂಇಎಸ್ ಮತ್ತು ಶಿವಸೇನೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿ, ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ಶೆಟ್ಟಿ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ ಕರವೇ ಕಾರ್ಯಕರ್ತರು, ಎಂಇಎಸ್ ಮತ್ತು ಶಿವಸೇನೆಯ ಪುಂಡಾಟಿಕೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಎಂಇಎಸ್ ಅಧ್ಯಕ್ಷರ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿ, ಬಳಿಕ ನಗರದ ಸಂಗೊಳ್ಳಿ ರಾಯಣ್ಣ ವೃತ್ತದ ವರೆಗೆ ಬೈಕ್ ರಾಲಿ ನಡೆಸಿದರು.
ಸರ್ಕಾರ ಪ್ರತಿ ಬಾರಿ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ವೇಳೆಯಲ್ಲಿ ಎಂಇಎಸ್ ಒಂದಿಲ್ಲೊಂದು ರೀತಿಯಲ್ಲಿ ಅಡ್ಡಿ ಮಾಡುತ್ತಲೇ ಬಂದಿದೆ. ಅದೇ ರೀತಿ ಈ ಬಾರಿಯೂ ಅಧಿವೇಶನದ ವೇಳೆಯಲ್ಲಿ ಎಂಇಎಸ್ ಪುಂಡರು ಮರಾಠಿ ಮೇಳ ನಡೆಸಲು ಮುಂದಾಗಿದ್ದರು. ಹೀಗಾಗಿ, ನಮ್ಮ ನಾಡಿನ ಕನ್ನಡಪರ ಹೋರಾಟಗಾರ ಸಂಪತ್ಕುಮಾರ್ ಮತ್ತು ಸಂಗಡಿಗರು ಎಂಇಎಸ್ ಮುಖಂಡರ ಮುಖಕ್ಕೆ ಮಸಿ ಬಳಿದು, ತಕ್ಕ ಶಾಸ್ತಿ ಮಾಡಿದ್ದಾರೆ. ಆದರೆ, ಪೊಲೀಸರು ಸಂಪತ್ಕುಮಾರ್ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಜಿಲ್ಲಾಧ್ಯಕ್ಷ ಜಮ್ಮನಹಳ್ಳಿ ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕರವೇಯ ರವಿ ನಾಯ್ಕ, ಆದಾಪುರ ನಾಗರಾಜ್, ಜಿ.ಎಚ್.ನಾಗರಾಜ್, ಜಮಾಲ್, ಕಲೀಂ, ಎ.ಲಿಂಗರಾಜ್, ದಯಾನಂದ, ಸಂದೀಪ್, ದೇವೇಂದ್ರಪ್ಪ, ರೇವಣಸಿದ್ದಪ್ಪ, ಮೊಹಿದ್ದೀನ್, ಏಜಾಜ್, ಇರ್ಫಾನ್ ಸೇರಿದಂತೆ ಇತರರು ಭಾಗವಹಿಸಿದ್ದರು.