ದಾವಣಗೆರೆ, ಡಿ.24- ಕಳೆದ ಬಾರಿ ಕಳೆಗುಂದಿದ್ದ ಕ್ರಿಸ್‌ಮಸ್ ಈ ವರ್ಷ ಸಂಭ್ರಮದಿಂದ ಕೂಡಿದೆ. ನಗರದ ಚರ್ಚ್‌ಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿವೆ. ಕ್ರೈಸ್ತ ಸಮುದಾಯದವರ ಮನೆಗಳಲ್ಲಿ ಸಂಭ್ರಮ ಮನೆ ಮಾಡಿದ್ದು ಇಂದು ಶನಿವಾರ ಮತ್ತಷ್ಟು ಇಮ್ಮಡಿಸಲಿದೆ.
ನಗರದ ಪಿ.ಜೆ. ಬಡಾವಣೆಯಲ್ಲಿರುವ ಸಂತ ತೋಮಸರ ದೇವಾಲಯದಲ್ಲಿ ಶುಕ್ರವಾರ ರಾತ್ರಿಯೇ ಸಂಭ್ರಮ ಮೇಳೈಸಿತ್ತು. ಸಂಜೆಯಿಂದಲೇ ಜನರು ಮೇಣದ ಬತ್ತಿ ಹಚ್ಚಿ ಏಸು ಕ್ರಿಸ್ತನನ್ನು ಪ್ರಾರ್ಥಿಸುತ್ತಿದ್ದುದು ಕಂಡು ಬಂತು.
`ಜನತಾವಾಣಿ’ಯೊಂದಿಗೆ ಮಾತನಾಡಿದ ಚರ್ಚ್‌ನ ಧರ್ಮಗುರುಗಳಾದ ಫಾದರ್ ಆಂಟನಿ ಅವರು, ಕೊರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಚರ್ಚ್‌ನ ಮುಂಭಾಗ ನಾಮಫಲಕ ಹಾಕಲಾಗಿದೆ.
ಏಸುಕ್ರಿಸ್ತ ಭೂಮಿಯಲ್ಲಿ ಜನಿಸಿದ್ದು ಮಧ್ಯರಾತ್ರಿಯಾದ ಕಾರಣ, ಚರ್ಚ್‌ನಲ್ಲಿ ಮಧ್ಯರಾತ್ರಿಯ ವೇಳೆಯೇ ಆರಾಧನೆ ನಡೆಸಲಾಗುತ್ತಿದೆ. ಏಸುಕ್ರಿಸ್ತ ಜನಿಸಿದ್ದನ್ನು ಬಿಂಬಿಸುವ ಗೋದಲಿಯನ್ನು ಚರ್ಚ್ ಆವರಣದಲ್ಲಿ ಸುಂದರವಾಗಿ ರೂಪಿಸಲಾಗಿದೆ ಎಂದು ಹೇಳಿದರು.
ಹಿಮದಿಂದ ಕೂಡಿರುವ ಮಾದರಿಯಲ್ಲಿರುವ ಗೋದಲಿಯಲ್ಲಿ ಏಸುಕ್ರಿಸ್ತರ ಜನನ, ಜೀವನ ಹಾಗೂ ಏಸುವಿನ ಸಾಕು ತಂದೆ ಜೋಸೆಫರ ಜೀವನದ ಏಳು ಘಟನಾವಳಿಗಳನ್ನೂ ಬಿಂಬಿಸಲಾಗಿದೆ. ತಿರುಗುವ ಕ್ರಿಸ್ ಮಸ್ ಟ್ರೀ ವಿಶೇಷತೆಯಿಂದ ಕೂಡಿದೆ ಎಂದು ತಿಳಿಸಿದರು.
ಕಳೆದ ವರ್ಷ ಹೊಸ ರೂಪದ ಕೊರೊನಾ ಕಂಡು ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡ ರಾತ್ರಿ ಕರ್ಫ್ಯೂ ಸಹ ಕ್ರಿಸ್‌ಮಸ್ ಸಂಪ್ರದಾಯಗಳ ಮೇಲೆ ಪರಿಣಾಮ ಬೀರಿತ್ತು. ಆರಾಧನೆ, ಕೀರ್ತನೆ, ಪ್ರವಚನಗಳನ್ನು ರಾತ್ರಿ 9 ಗಂಟೆಯೊಳಗೆ ಆಚರಿಸಲಾಗಿತ್ತು. ಆದರೆ ಈ ಬಾರಿ ಸೋಂಕು ಕಡಿಮೆ ಇರುವುದರಿಂದ ಪ್ರತಿ ವರ್ಷದಂತೆಯೇ ಕ್ರಿಶ್ಚಿಯನ್ ಬಾಂಧವರ ಅತಿ ದೊಡ್ಡ ಹಬ್ಬವಾದ ಕ್ರಿಸ್‌ಮಸ್ ಸಂಭ್ರಮದಿಂದ ಕೂಡಿರಲಿದೆ.