ಹರಿಹರದಲ್ಲಿನ ಆರೋಗ್ಯ ಶಿಬಿರ ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕ, ನಟ ಚೇತನ್
ರಾಜ್ಯದಾದ್ಯಂತ ಶಾಲೆಗಳಲ್ಲಿ ಪಡೆಯವ ಡೊನೇಷನ್ ವಿರುದ್ಧ ಯಾವುದೇ ಮಠಾಧೀಶರು ಹೋರಾಟ ಮಾಡುವುದಕ್ಕೆ ಸಿದ್ದರಿಲ್ಲ. ಮಕ್ಕಳ ಮೇಲೆ ಅತ್ಯಾಚಾರ ನಡೆದರೆ ಅದರ ವಿರುದ್ಧ ಹೋರಾಟ ಮಾಡುತ್ತಿಲ್ಲ. ದಲಿತರಿಗೆ ಶವ ಸಂಸ್ಕಾರ ಮಾಡಲು ಜಾಗವಿಲ್ಲ, ಇದರ ವಿರುದ್ಧ ಹೋರಾಡಲು ಸಿದ್ದವಿಲ್ಲ. ಆದರೆ, ಶಾಲೆಯಲ್ಲಿ ಮಕ್ಕಳಿಗೆ ವಿತರಣೆ ಮಾಡುವ ಮೊಟ್ಟೆಗೆ ವಿರೋಧ ಮಾಡುತ್ತಾರೆ.
– ಎಂ. ಗುರುಮೂರ್ತಿ, ರಾಜ್ಯ ಸಂಚಾಲಕರು, ದಲಿತ ಸಂಘರ್ಷ ಸಮಿತಿ
ಹರಿಹರ, ಡಿ24- ಸೌಹಾರ್ದ ಶಕ್ತಿಯಿಂದ ಬಡವರ ಬೆಳವಣಿಗೆ ಸಾಧ್ಯವಿದೆ. ಸಮಾನತೆಯ ಸಿದ್ಧಾಂತದಲ್ಲಿ ಸಾಗಿದ ಬುದ್ಧ, ಬಸವ, ಪೆರಿಯಾರ್, ಡಾ. ಬಿ. ಆರ್. ಅಂಬೇಡ್ಕರ್, ಕುವೆಂಪುರವರ ನ್ಯಾಯ ಮಾರ್ಗದರ್ಶನ ಅವಶ್ಯಕತೆ ಇದೆ ಎಂದು ಪ್ರಗತಿಪರ ಚಿಂತಕ ಹಾಗೂ ಚಲನಚಿತ್ರ ನಟ ಚೇತನ್ ಹೇಳಿದ್ದಾರೆ.
ನಗರದ ಅಕ್ಷಯ ಆಸ್ಪತ್ರೆ ಮುಂಭಾಗದಲ್ಲಿ ಇಂದು ನಡೆದ ಡಾ ಬಿ.ಆರ್. ಅಂಬೇಡ್ಕರ್ ಅವರ ಮಹಾ ಪರಿನಿಬ್ಬಾಣ ದಿನದ ಅಂಗವಾಗಿ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ) ಹಾಗೂ ಅಕ್ಷಯ ಆಸ್ಪತ್ರೆ ವತಿಯಿಂದ ನಡೆದ ಆರೋಗ್ಯ ಶಿಬಿರ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶತ್ರು ಯಾರು ಎಂದು ಗುರುತಿಸದೇ ಹೋದರೆ ಬದುಕು ಛಿದ್ರವಾಗುತ್ತದೆ. ಕೋಮ ವಾದಿ ವ್ಯವಸ್ಥೆ ಮತ್ತು ಶ್ರೇಷ್ಠ, ಕನಿಷ್ಠ ಎಂಬ ವ್ಯವಸ್ಥೆ ವಿರುದ್ಧ ಹೋರಾಡಬೇಕಾಗಿದೆ. ನಾವು ಹೆಚ್ಚು ಎಂದು ದಬ್ಬಾಳಿಕೆ, ದೌರ್ಜನ್ಯ ಮಾಡುವುದಕ್ಕೆ ಅವಕಾಶ ಕೊಡದೆ ಸರಿ ಸಮಾನತೆಯ ವ್ಯವಸ್ಥೆ ಬರಬೇಕಾಗಿದೆ ಎಂದವರು ಆಶಿಸಿದ್ದಾರೆ.
ದೇಶದಲ್ಲಿ ಶೇ. 1 ರಷ್ಟು ಇರುವ ಜನರು ಶೇ. 60 ರಷ್ಟು ಆಸ್ತಿಯನ್ನು ಹೊಂದಿದ್ದಾರೆ. ಸಮಾಜದಲ್ಲಿ ಪುರುಷರಿಗೆ ಸಿಗುವ ಗೌರವ, ಸ್ಥಾನಮಾನಗಳು ಮಹಿಳೆಯರಿಗೆ ಸಿಗುವಂತಾಗಬೇಕು. ಸ್ಥಿರ ಸಂಸ್ಕೃತಿ ವಿರುದ್ಧ ನಿಲ್ಲಬೇಕು ಎಂದವರು ಹೇಳಿದರು.
ನಾನು ಯಾವ ಧರ್ಮವನ್ನು ಆಯ್ಕೆ ಮಾಡಿ ಕೊಳ್ಳಬೇಕು ಎಂದು ಹಕ್ಕಿದೆ. ಅದನ್ನು ನಿಷೇಧ ಮಾಡುವರ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಡ ಬೇಕಿದೆ. ವಾಕ್ ಸ್ವಾತಂತ್ರ್ಯ ತರಬೇಕು. ಅದರಿಂದ ಉತ್ತಮ ಸಮಾಜ ಕಟ್ಟಲು ಸಾಧ್ಯವಿದೆ ಎಂದು ಹೇಳಿದರು.
ಅಕ್ಷಯ ಆಸ್ಪತ್ರೆ ಮುಖ್ಯಸ್ಥ ಡಾ ವಿ. ಟಿ. ನಾಗರಾಜ್ ಮಾತನಾಡಿ, ರೋಗಿಗಳಿಗೆ ತಪಾಸಣೆ ಮಾಡಿ ಚಿಕಿತ್ಸೆ ಕೊಡುವುದು ವೈದ್ಯರ ಧರ್ಮ. ಕೊರೊನಾ ಸಮಯದಲ್ಲಿ ವೈದ್ಯರು ತಮ್ಮ ಜೀವದ ಹಂಗು ತೊರೆದು ತಮ್ಮ ವೃತ್ತಿಯಲ್ಲಿ ತೊಡಗಿಸಿ ಕೊಂಡಿದ್ದರಿಂದ ಹೆಚ್ಚು ಅನಾಹುತಗಳು ಆಗದಂತೆ ತಡೆಯಲು ಸಾಧ್ಯವಾಯಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ ಸೀಮಾ ವಿ.ಟಿ. ನಾಗರಾಜ್, ಎಸ್.ಬಿ.ಪಿ.ಐ. ರಾಜ್ಯ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್, ಹರಿಹರ ತಾಲ್ಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ಪಿ.ಜೆ. ಮಹಾಂ ತೇಶ್, ನಾಗನಗೌಡ, ಜಿಲ್ಲಾ ಮಹಿಳಾ ಸಂಚಾಲಕಿ ವಿಜಯಲಕ್ಷ್ಮಿ, ಫೈಯಾಜ್ ಆಹ್ಮದ್, ಅಜಯ್, ವೀರೇಶ್, ಮಾಜಿ ನಗರಸಭೆ ನಾಮನಿರ್ದೇಶನ ಸದಸ್ಯ ವಸಂತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.