ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಲು ಮನವಿ

ದಾವಣಗೆರೆ, ಡಿ.24- ರಾಜ್ಯಾದ್ಯಾಂತ ಪದವಿ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಅಖಿಲ ಭಾರತ ಯುವಜನ ಫೆಡರೇಷನ್ ಸದಸ್ಯರು ನಗರದಲ್ಲಿಂದು ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಅವರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಅತಿಥಿ ಉಪನ್ಯಾಸಕರು ನ್ಯಾಯಸಮ್ಮತ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ, ಕಳೆದ ಹಲವಾರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯದ ಶೈಕ್ಷಣಿಕ ಪ್ರಗತಿಗೆ ಅತಿಥಿ ಉಪನ್ಯಾಸಕರು ಹಗಲಿರುಳು ಅಲ್ಪ ಗೌರವ ಧನಕ್ಕೆ ಹಲವಾರು ವರ್ಷಗಳಿಂದ ದುಡಿಯುತ್ತಿದ್ದಾರೆ. ಪ್ರತಿ ವರ್ಷ ಗೌರವ ಧನ ಹೆಚ್ಚಳ ಸೇರಿದಂತೆ, ಸೇವಾ ಭದ್ರತೆಗಾಗಿ ಸರ್ಕಾರ ಮನವಿ ಸಲ್ಲಿಸುತ್ತಿದ್ದರೂ ಈ ಬಗ್ಗೆ ಯಾವುದೇ ಕ್ರಮ ವಹಿಸಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಹೆಚ್ಚಿನ ವಿದ್ಯಾರ್ಹತೆ  ಪಡೆದಿದ್ದರೂ ಸೂಕ್ತ ಉದ್ಯೋಗ ಅವಕಾಶಗಳು ದೊರಕದೆ ಪದವೀಧರರು ಕಷ್ಟ ಅನುಭವಿಸುತ್ತಿದ್ದು, ತಮ್ಮ ಬದುಕಿನ ನಿರ್ವಹಣೆಗೆ ಅನಿವಾರ್ಯವಾಗಿ ಕಡಿಮೆ ಗೌರವ ಧನಕ್ಕೆ ದುಡಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದಿನ ಬೆಲೆ ಏರಿಕೆ ಕಾಲದಲ್ಲಿ ಸರ್ಕಾರ ಇಂದು ಕೊಡುತ್ತಿರುವ ಅಲ್ಪ ಗೌರವ ಧನ ಯಾವುದಕ್ಕೂ ಸಾಲುತ್ತಿಲ್ಲ. ವಿವಿಧ ರಾಜ್ಯಗಳಿಗೆ ಹೋಲಿಕೆ ಮಾಡಿಕೊಂಡರೆ ರಾಜ್ಯದಲ್ಲಿ ಅತಿಥಿ ಉಪನ್ಯಾಸಕರಿಗೆ ಅತ್ಯಂತ ಕಡಿಮೆ ಗೌರವ ಧನ ಕೊಡಲಾಗುತ್ತಿದೆ. ಸರ್ಕಾರಗಳು ಪದವೀಧರರನ್ನು ಕಡೆಗಣಿಸುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಈಗಾಗಲೇ ಹಲವಾರು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ದುಡಿಯುತ್ತಿರುವ ವರಿಗೆ ಸರ್ಕಾರ ಸೇವಾ ಭದ್ರತೆಯನ್ನು ನೀಡಬೇಕು. ಗೌರವ ಧನ ಹೆಚ್ಚಿಸಬೇಕೆಂದು ಆಗ್ರಹಿಸಿದರು.

ಈ ವೇಳೆ ಎಐವೈಎಫ್ ರಾಜ್ಯ ಉಪಾಧ್ಯಕ್ಷ ಆವರಗೆರೆ ವಾಸು, ಜಿಲ್ಲಾಧ್ಯಕ್ಷ ಕೆರನಹಳ್ಳಿ ರಾಜು, ಜಿಲ್ಲಾ ಕಾರ್ಯದರ್ಶಿ ಎ. ತಿಪ್ಪೇಶಿ, ಉಪಾಧ್ಯಕ್ಷ ನಿಟ್ಟುವಳ್ಳಿ ಜೀವನ್, ಫಜಲುಲ್ಲಾ, ಇರ್ಫಾನ್, ಮಂಜುನಾಥ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!