ದಾವಣಗೆರೆ, ಡಿ.23- ಭಾರತ ಸೇವಾದಳ ಜಿಲ್ಲಾ ಅಧ್ಯಕ್ಷರೂ ಆದ ಮಾಜಿ ಸಂಸದ ಕೆ.ಆರ್. ಜಯದೇವಪ್ಪ ಅವರ ನಿಧನಕ್ಕೆ ರಾಜ್ಯ, ಜಿಲ್ಲಾ ಭಾರತ ಸೇವಾದಳ ಕಂಬನಿ ಮಿಡಿದಿದೆ.
ನಗರದ ಭಾರತ್ ಸೇವಾದಳ ಭವನದಲ್ಲಿ ಕೆಆರ್ಜೆ ಅವರ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಕೆಆರ್ಜೆ ರವರ ವಿದ್ಯಾರ್ಥಿ ಜೀವನ, ಸಿರಿಗೆರೆಯ ಒಡನಾಟ, ಸೇವಾದಳ ತರಬೇತಿ, ವಕೀಲರಾಗಿ ವೃತ್ತಿ ಜೀವನ, ರಾಜಕೀಯ ಪ್ರವೇಶ, ಸಂಸದರಾಗಿ ಸೇವೆ, ಸೇವಾದಳದಿಂದ ರಾಜ್ಯ ಮಟ್ಟದ ಶಿಕ್ಷಕರ ಮತ್ತು ಮಕ್ಕಳ ರಾಷ್ಟ್ರೀಯ ಭಾವೈಕ್ಯತಾ ಮೇಳ ಆಯೋಜನೆ, ಜಿಲ್ಲಾ ಸಾಂಸ್ಕೃತಿಕ ಭವನ ನಿರ್ಮಾಣ ಇದರ ಜೊತೆಗೆ, ಸಾವಿರಾರು ಶಿಕ್ಷಕರ ತರಬೇತಿ ಶಿಬಿರಗಳು, ಲಕ್ಷಾಂತರ ಮಕ್ಕಳಿಗೆ ಮೇಳ, ಬೇಸಿಗೆ ಶಿಬಿರ ನಡೆಸಿದ್ದರು. ಶಿಸ್ತಿನ ಸೇವಾದಳ ಸಿಪಾಯಿ ಐ.ಎನ್.ಎ. ರಾಮರಾವ್ ಶಿಷ್ಯರಾಗಿ ರಾಜ್ಯ ಮಟ್ಟದಲ್ಲಿ ಸೇವಾದಳ ಸಂಘಟನೆ ಮಾಡಿದ್ದರು ಎಂದು ವಲಯ ಸಂಘಟಕ ಅಣ್ಣಯ್ಯ ಸಂತಾಪ ಸೂಚಕವಾಗಿ ಮಾತನಾಡಿದರು.
ಜಿಲ್ಲಾ ಕಾರ್ಯದರ್ಶಿ ಡಾ. ಚಂದ್ರಪ್ಪ ಡಾ. ಬಿ.ಎಸ್. ನಾಗಪ್ರಕಾಶ್ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಜಿಲ್ಲಾ ಸಮಿತಿಯ ಕುಸುಮಶ್ರೇಷ್ಟಿ, ಪ್ರೊ. ಚನ್ನಪ್ಪ, ರಮಣ್ಲಾಲ್ ಸಂಘವಿ, ಪರಮೇಶ್ವರಪ್ಪ, ತಾಲ್ಲೂಕು ಅಧ್ಯಕ್ಷ ನಾಗರಾಜ್, ಶಿಕ್ಷಕರಾದ ಜಯಪ್ಪ, ಬಸವರಾಜಪ್ಪ, ಕುಮಾರಸ್ವಾಮಿ, ಸಂಗಮೇಶ್, ಗೋಪಾಲಪ್ಪ, ಶ್ರೀಕಾಂತ್, ಪರಶುರಾಮ್ ಖಟಾವ್ಕರ್ ಉಪಸ್ಥಿತರಿದ್ದರು.