ಸಂಸ್ಕಾರ, ಸಂಸ್ಕೃತಿ ಮತ್ತು ಒಳ್ಳೆಯ ಭಾವನಾತ್ಮಕ ಭಾವನೆಗಳಿಗೆ ಸ್ಪಂದಿಸುವ ಹೃದಯ ಶ್ರೀಮಂತಿಕೆಯ ಗುಣಗಳು ರೈತ ಸಮುದಾಯದಿಂದ ಮಾತ್ರ ಸಿಗಲು ಸಾಧ್ಯ. ಹರಿಹರ ತಾಲ್ಲೂಕಿನ ಪ್ರತಿ ಗ್ರಾಮದಲ್ಲಿ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರೈತ ಸಂಘವನ್ನು ಪ್ರಾರಂಭ ಮಾಡಿ ರೈತರ ಕುಟುಂಬಕ್ಕೆ ನಾವೆಲ್ಲರು ಒಳ್ಳೆಯದು ಮಾಡುವ ಪಣ ತೊಟ್ಟು ನಿಲ್ಲುವ ಸಂದೇಶಗಳು ಕೊಂಡಜ್ಜಿ ಗ್ರಾಮದಿಂದ ಬರಲಿ.
– ವೀರಣ್ಣ ಕೊಂಡಜ್ಜಿ, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರು, ಹರಿಹರ ತಾಲ್ಲೂಕು
ಹರಿಹರ, ಡಿ.23 – ಅಧಿಕಾರಿಗಳು ನಮಗೆ ಇಷ್ಟು ಪರ್ಸೆಂಟೇಜ್ ಕೊಡಲೇ ಬೇಕು ಎಂದು ರಾಜಕಾರಣಿಗಳು ಬೇಡಿಕೆ ಇಟ್ಟಾಗ ಅವರು ಅನಿವಾ ರ್ಯವಾಗಿ ತಪ್ಪು ಮಾಡುತ್ತಾರೆ. ಹೀಗಾಗಿ ನಾವು ತಪ್ಪು ಮಾಡುವುದನ್ನು ನಿಲ್ಲಿಸಿದರೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು ಎಂದು ಭದ್ರಾ ಕಾಡಾ ಅಧ್ಯಕ್ಷರಾದ ಶ್ರೀಮತಿ ಪವಿತ್ರ ರಾಮಯ್ಯ ಹೇಳಿದ್ದಾರೆ.
ಕೊಂಡಜ್ಜಿ ಗ್ರಾಮದಲ್ಲಿ ಇಂದು ನಡೆದ ರೈತ ಭವನ ಕಟ್ಟಡದ ಭೂಮಿ ಪೂಜೆ, ರೈತ ದಿನಾಚರಣೆ ಹಾಗೂ ಕೃಷಿ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಕೆಲವು ರಾಜಕಾರಣಿಗಳು ಅಧಿಕಾರಿಗಳಿಗೆ ಕಮೀಷನ್ ರೂಪದಲ್ಲಿ ಪರ್ಸೆಂಟೇಜ್ ಕೇಳುವುದರಿಂದ ನಾವೇ ಅವರನ್ನು ಭ್ರಷ್ಟಾಚಾರ ಮಾಡುವುದಕ್ಕೆ ಪುಷ್ಟಿ ನೀಡಿದಂತಾಗಿದೆ. ಎಲ್ಲರೂ ಸರಿಯಾಗಿ ಜವಾಬ್ದಾರಿ ನಿರ್ವಹಿಸಿದರೆ ಮಾತ್ರ ಭ್ರಷ್ಟಾಚಾರ ತೊಲಗಿಸಲು ಸಾಧ್ಯತೆ ಎಂದವರು ಹೇಳಿದರು.
ದೇಶದಲ್ಲಿ ಕೊರೊನಾ ಸಮಯದಲ್ಲಿ ಎಲ್ಲಾ ಕಂಪನಿಗಳು ಸ್ಥಗಿತಗೊಂಡವು. ಆದರೆ, ರೈತರು ಮಾತ್ರ ಜಮೀನಿನಲ್ಲಿ ಕಾಯಕ ಮಾಡುವುದನ್ನು ನಿಲ್ಲಿಸಲಿಲ್ಲ. ರೈತರು ಕಾಯಕ ಮಾಡುವುದನ್ನು ನಿಲ್ಲಿಸಿದ್ದರೆ ದೇಶದ ಪರಿಸ್ಥಿತಿ ಅಧೋಗತಿಯತ್ತ ಸಾಗುತ್ತಿತ್ತು ಎಂದವರು ಹೇಳಿದರು.
ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಹೆಚ್. ಆರ್. ಬಸವರಾಜಪ್ಪ ಮಾತನಾಡಿ, ಅತಿವೃಷ್ಟಿ – ಅನಾವೃಷ್ಟಿ ಹಾನಿಗೆ ಸರ್ಕಾರ ನೀಡುತ್ತಿರುವ ಪರಿ ಹಾರ ನೊಂದ ಕುಟುಂಬಕ್ಕೆ ಸಾಕಾಗುವುದಿಲ್ಲ. ಹೆಚ್ಚಿನ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಸಂಘದಲ್ಲಿ ಒಗ್ಗಟ್ಟಿದ್ದರೆ ಎಲ್ಲವನ್ನೂ ಸರಿಯಾದ ಸಮಯಕ್ಕೆ ಪಡೆಯಲು ಸಾಧ್ಯ. ಚುನಾವಣೆ ಸಮಯದಲ್ಲಿ ಮಾತ್ರ ಪಕ್ಷ ರಾಜಕೀಯ ಮಾಡಿ, ರೈತರಿಗೆ ಸಮಸ್ಯೆಗಳು ಬಂದಾಗ ಒಗ್ಗಟ್ಟಿ ನಿಂದ ಇರುವಂತೆ ಕರೆ ನೀಡಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯದರ್ಶಿ ತೇಜಸ್ವಿ ಪಟೇಲ್ ಮಾತನಾಡಿ, ರೈತರು ಹಸಿರು ಶಾಲು ಹಾಕಿದಾಗ ಅದಕ್ಕೆ ಗೌರವ ಕೊಡುವ ರೀತಿಯಲ್ಲಿ ಸಾಗಬೇಕು. ಚುನಾವಣೆ ಸಮಯದಲ್ಲಿ ಹಣಕ್ಕೆ ಮತ ಹಾಕುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಜಿ. ಪುಟ್ಟಸ್ವಾಮಿ ಮಾತನಾಡಿ, ಕೆಲವು ಕ್ಷೇತ್ರಗಳಲ್ಲಿ ಓದಲು ಬರೆಯಲು ಬರದವರಿಗೆ ಶಾಸಕ ಸ್ಥಾನದ ಅಧಿಕಾರ ನೀಡಿದ್ದರಿಂದ ರೈತರ ಕಷ್ಟಗಳು ಅಧಿಕವಾಗಿವೆ. ಮುಂದಿನ ದಿನಗಳಲ್ಲಿ ಹಾಗೆ ಆಗದಂತೆ ರೈತರು ಎಚ್ಚರಿಕೆಯಿಂದ ಮತವನ್ನು ಹಾಕಬೇಕು ಎಂದು ಹೇಳಿದರು.
ಈ ವೇಳೆ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕುರುವ ಗಣೇಶಪ್ಪ, ದಾವಣಗೆರೆ ರೈತ ಒಕ್ಕೂಟದ ಅಧ್ಯಕ್ಷ ಶಾಮನೂರು ಲಿಂಗರಾಜ್, ಮಾಜಿ ಎಪಿಎಂಸಿ ಅಧ್ಯಕ್ಷ ಮುದೆಗೌಡ್ರು ಗಿರೀಶ್, ಗ್ರಾ.ಪಂ. ಅಧ್ಯಕ್ಷ ಹೆಚ್. ಗಂಗಾಧರ್ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮುದೆಗೌಡ್ರು ಪ್ರಕಾಶಪ್ಪ ವಹಿಸಿದ್ದರು.
ರಾಮಾಂಜನೇಯ ಸಾಲಕಟ್ಟೆ, ಮೃತ್ಯುಂಜಯಪ್ಪ ಕುರುಬರಹಳ್ಳಿ, ಆಂಜನೇಯ ಕುಂಬಳೂರು, ನಿರಂಜನ ಪಾಟೀಲ್ ಕೊಕ್ಕನೂರು, ನಾರಾಯಣ ಸ್ವಾಮಿ ಭಾನುವಳ್ಳಿ, ಮಲ್ಲಶೆಟ್ಟಿಹಳ್ಳಿ ಶೇಖಣ್ಣ ಸೇರಿದಂತೆ ಇತರೆ ಕೃಷಿ ಸಾಧಕರಿಗೆ ಸನ್ಮಾನಿಸಿ, ಗೌರವಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಮತ್ತು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಣ್ಣ ಕೊಂಡಜ್ಜಿ, ಬಿದರಗಡ್ಡೆ ಭರಮಜ್ಜ, ಕೊಂಡಜ್ಜಿ ಶಿವಕುಮಾರ್, ರುದ್ರಮುನಿ ಹನಗವಾಡಿ, ಚಂದ್ರಪ್ಪ ಅಮರಾವತಿ, ಸ್ವಾಮಿ ನಂದಿತಾವರೆ, ಪ್ರಕಾಶ್ ಭಾನುವಳ್ಳಿ, ಕೆ.ಹೆಚ್. ಮಹೇಶಪ್ಪ ಕೆಂಚನಹಳ್ಳಿ, ಪಾಲಾಕ್ಷಪ್ಪ ಸಿರಿಗೆರೆ ಮತ್ತಿತರರು ಉಪಸ್ಥಿತರಿದ್ದರು.