ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಮಾರ್ಚ್ 31ರೊಳಗೆ 2ಎ ಮೀಸಲಾತಿ

ಮಾಜಿ ಶಾಸಕ ಹೆಚ್‌.ಎಸ್‌. ಶಿವಶಂಕರ್‌ ವಿಶ್ವಾಸ

ದಾವಣಗೆರೆ, ಡಿ.23- ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಕೂಡಲ ಸಂಗಮದ ಬಸವ ಜಯಮೃತ್ಯುಂಜಯ ಶ್ರೀಗಳು ಸರ್ಕಾರದ ಕಣ್ತೆರೆಸಿದ್ದು, ಬರುವ ಮಾರ್ಚ್ 31ರೊಳಗಾಗಿ 2ಎ ಮೀಸಲಾತಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದ್ದಾರೆ ಎಂದು ಮಾಜಿ ಶಾಸಕ, ಸಮಾಜದ ಮುಖಂಡ ಹೆಚ್.ಎಸ್. ಶಿವಶಂಕರ್ ತಿಳಿಸಿದರು.

ಅವರು, ಇಂದು ನಗರದ ಸದ್ಯೋಜಾತ ಹಿರೇಮಠದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಗುರುಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳ ಜನ್ಮದಿನ ಹಾಗೂ ರೈತ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಸ್ವತಃ ರಕ್ತದಾನ ಮಾಡುವ ಮುಖೇನ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು. 

ಶ್ರೀಗಳ ಹೋರಾಟ, ಜಾಗೃತಿ ಹಾಗೂ ಸಮಾಜ ಸಂಘಟನೆ ಮುಖೇನ ಮೀಸಲಾತಿಗಾಗಿ ನಡೆಸಿದ ನಿರಂತರ ಪ್ರಯತ್ನದಿಂದ ಇದೀಗ ಸರ್ಕಾರ ಸ್ಪಂದಿಸಿದ್ದು, 2ಎ ಮೀಸಲಾತಿ ನೀಡುವ ವಿಚಾರವಾಗಿ ರಾಜ್ಯಾದ್ಯಂತ ಲಿಂಗಾಯತ ಪಂಚಮಸಾಲಿ ಸಮಾಜ ಬಾಂಧವರ ಸಮಸ್ಯೆ ಮತ್ತು ಜನಸಂಖ್ಯೆ ಅವಲೋಕಿಸುವ ಕಾರ್ಯ ಪ್ರಾರಂಭವಾಗಿದ್ದು, ದಾವಣಗೆರೆ ಜಿಲ್ಲೆಗೂ ಹಿಂದುಳಿದ ವರ್ಗಗಳ ಆಯೋಗ ಭೇಟಿ ನೀಡಿದ್ದು, ಇದು ನಮಗೆ ತೃಪ್ತಿ ತಂದಿದೆ. 2ಎ ಮೀಸಲಾತಿ ಪಡೆದೇ ಪಡೆಯುತ್ತೇವೆ ಎಂದು ಅವರು ಹೇಳಿದರು.

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಯುವ ಘಟಕದ ರಾಜ್ಯಾಧ್ಯಕ್ಷರೂ ಆಗಿರುವ ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್ ಸೇರಿದಂತೆ ಸಮಾಜದ ಮುಖಂಡರು, ಬಾಂಧವರು ರಕ್ತದಾನ ಮಾಡಿದರು.

ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಗೋಪನಾಳ್, ನಗರ ಪಾಲಿಕೆ ಸದಸ್ಯ ಸ್ವಾಗಿ ಶಾಂತಕುಮಾರ್, ಎಸ್. ಓಂಕಾರಪ್ಪ, ಅಡಿಕೆ ಕುಮಾರ್ ಹರಿಹರ, ಪರಮೇಶ್ವರ ಗೌಡ್ರು, ದೀಟೂರು ಶೇಖರಪ್ಪ, ಎಂ. ಈಶ್ವರಪ್ಪ, ಧನಂಜಯ್, ಸ್ವಾಗಿ ಗುರುಶಾಂತ್, ಪಿ.ವಿ. ಶಿವಯೋಗಿ, ಬಸವರಾಜ್ ಬೆಳಲಗೆರೆ, ಶಿವಕುಮಾರ್ ತಣಿಗೆರೆ, ಕಿರಣ್, ಕಾಂತರಾಜ್, ಸಿರಿಗೆರೆ ಚಂದ್ರಪ್ಪ, ಕಲ್ಲೇಶ್, ಕಾರಿಗ ನೂರು ಜಯಣ್ಣ, ನಾಗೇಂದ್ರಪ್ಪ ಕಾರಿಗನೂರು, ಬಸವರಾಜಪ್ಪ ಕಾರಿಗನೂರು, ನಿರಂಜನ್, ಹೆಚ್.ಕೆ. ಬಸವರಾಜ್ ಕಾರಿಗನೂರು, ಪೋಸ್ಟ್ ಶಿವನಗೌಡ ಸಿರಿಗೆರೆ, ನವೀನ್ ಕೋಲ್ಕುಂಟೆ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!